ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

6

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Published:
Updated:
ಆಂಡ್ರೋ ಸುರೇಶ್ ರೋಡ್ರಿಗಸ್.

ಮಂಗಳೂರು: 2017ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಆಸ್ತಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಗರದ ಆರೋಪಿಯೊಬ್ಬನನ್ನು ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸೆರೆ ಹಿಡಿಯಲಾಗಿದೆ. ಈತನೇ 2014ರಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ.

ನಗರದ ಫಳ್ನೀರ್ ನಿವಾಸಿ ಆಂಡ್ರೋ ಸುರೇಶ್ ರೋಡ್ರಿಗಸ್‌ ಬಂಧಿತ ವ್ಯಕ್ತಿ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರೊಬ್ಬರ ಆಸ್ತಿಯನ್ನು 2017ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಈತ ಮಾರಾಟ ಮಾಡಿದ್ದ. ಆಸ್ತಿಯ ಮಾಲೀಕರು ತನಗೆ ‘ಜನರಲ್ ಪವರ್‌ ಆಫ್ ಅಟಾರ್ನಿ’ (ಜಿಪಿಎ) ನೀಡಿದ್ದಾರೆ ಎಂಬಂತೆ ದಾಖಲೆಗಳನ್ನು ಸೃಷ್ಟಿಸಿದ್ದ. ಬೇರೊಬ್ಬರು ಅದೇ ಆಸ್ತಿಯ ಖರೀದಿಗೆ ಬಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯು ಅಂದಿನಿಂದಲೂ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರು ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದರು. ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ಕೆಲವು ದಿನಗಳ ಹಿಂದೆ ದೇಶಕ್ಕೆ ಮರಳಿದ್ದ ಆಂಡ್ರೋ ಶನಿವಾರ ಪಣಜಿಯ ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಹೊರಟಿದ್ದ. ಆಗ ವಲಸೆ ವಿಭಾಗದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು.

ಭಾನುವಾರ ಗೋವಾಕ್ಕೆ ತೆರಳಿದ್ದ ಮಂಗಳೂರು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್ ಸಾಯಿನಾಥ್‌ ನೇತೃತ್ವದ ಪೊಲೀಸರ ತಂಡ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರೋಪಿಯನ್ನು ಕರೆತಂದಿದೆ. ಆತನ ವಿಚಾರಣೆ ನಡೆಸಿದಾಗ, 2014ರಲ್ಲಿ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕುಮಾರ್ ಎಂಬ ವ್ಯಕ್ತಿಯ ಕೊಲೆಯಲ್ಲೂ ಭಾಗಿಯಾಗಿರುವುದು ಹೊರಬಿದ್ದಿದೆ.

‘ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನನ್ನು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶ ಹೊರಡಿಸಿದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !