ಕೇಂದ್ರದ ಕ್ರಮ ಖಂಡಿಸಿ ದೆಹಲಿ ಚಲೋ

7

ಕೇಂದ್ರದ ಕ್ರಮ ಖಂಡಿಸಿ ದೆಹಲಿ ಚಲೋ

Published:
Updated:

ಕೋಲಾರ: ‘ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಆ.8ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಮಾದಿಕ ದಂಡೋರ - ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ನರಸಿಂಹ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರವು ದೇಶದಲ್ಲಿ ದಲಿತರನ್ನು ದುರ್ಬಲಗೊಳಿಸಲು ಸುಪ್ರೀಂ ಕೋರ್ಟ್ ಮೂಲಕ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಚು ರೂಪಿಸಿದೆ’ ಎಂದು ದೂರಿದರು.

‘ದೇಶದಲ್ಲಿ ಬ್ರಾಹ್ಮಣಶಾಹಿ, ಮನುವಾದಿ ಕುತಂತ್ರಿಗಳು ದಲಿತ, ಗಿರಿಜನ ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ, ಅತ್ಯಾಚಾರ ನಡೆಸುತ್ತಿದ್ದಾರೆ. ಇವರ ರಕ್ಷಣೆಗಾಗಿ ಕೇಂದ್ರವು ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನಕ್ಕೆ ಬಂದಿದೆ. ಪ್ರಧಾನಿ ಮೋದಿ ಬಡವರ ಕೆಲಸ ಮಾಡುವುದನ್ನು ಬಿಟ್ಟು ದಲಿತರನ್ನು ದುರ್ಬಲಗೊಳಿಸುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಾಯ್ದೆಗೆ ತಿದ್ದುಪಡಿ ಮಾಡದಂತೆ ಹಿಂದೆಯೇ ಹೋರಾಟ ನಡೆಸಿದ್ದೇವೆ. ಆದರೂ ಕೇಂದ್ರವು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ನಮ್ಮ ಹೋರಾಟದ ವಿರುದ್ಧ ನಡೆದುಕೊಂಡ ಕಾಂಗ್ರೆಸ್ ಈಗಾಗಲೇ ಪಾಠ ಕಲಿತಿದೆ. ಬಿಜೆಪಿಗೂ ಅದೇ ಪರಿಸ್ಥಿತಿ ಬರುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದಲಿತರ ಮೀಸಲಾತಿ ಭಿಕ್ಷೆಯಲ್ಲ. ಅದು ಶ್ರೀಕೃಷ್ಣ ದೇವರಾಯನ ಕಾಲದಿಂದಲೂ ಇದೆ. ಈ ಸಂಗತಿ ಗೊತ್ತಿದ್ದರೂ ಮೋದಿ ದಲಿತರು ಮತ್ತು ಉಪ ಜಾತಿಗಳನ್ನು ನಿರ್ನಾಮ ಮಾಡಲು ಸಂಚು ರೂಪಿಸಿದ್ದಾರೆ. ಅವರ ಕುತಂತ್ರದ ವಿರುದ್ಧ ಹಮ್ಮಿಕೊಂಡಿರುವ ದೆಹಲಿ ಚಲೋದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದ ಅನೇಕ ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಅವರಲ್ಲಿ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ಸಮ್ಮಿಶ್ರ ಸರ್ಕಾರವು ಸಚಿವ ಸ್ಥಾನ ಕಲ್ಪಿಸದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎನ್.ದೇವರಾಜ್, ಸಂಘಟನಾ ಕಾರ್ಯದರ್ಶಿ ಆರ್.ವೇಣು, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !