ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್‌ ಗಡುವು

7
ಸಭೆಯಲ್ಲಿ ಪಿಆರ್‌ಇಡಿ ಅಧಿಕಾರಿಗಳಿಗೆ ಸಿಇಒ ಲತಾಕುಮಾರಿ ಸೂಚನೆ

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್‌ ಗಡುವು

Published:
Updated:
Deccan Herald

ಕೋಲಾರ: ‘ಜಿಲ್ಲೆಯಲ್ಲಿ ಬಾಕಿ ಇರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ (ಪಿಆರ್‌ಇಡಿ) ಅಧಿಕಾರಿಗಳಿಗೆ ಗಡುವು ನೀಡಿದರು.

ಇಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್‌) ಅಂಗನವಾಡಿ ಕಟ್ಟಡಗಳ ನಿರ್ಮಾಣ ಜವಾಬ್ದಾರಿಯನ್ನು ಪಿಆರ್‍ಇಡಿಗೆ ವರ್ಗಾಯಿಸಲಾಗಿದೆ. ಹಿಂದಿನ ವರ್ಷವೇ ಕಟ್ಟಡ ನಿರ್ಮಿಸುವಂತೆ ಸೂಚಿಸಿದ್ದರೂ ಇನ್ನೂ ಟೆಂಡರ್‌ ನಡೆಸಿಲ್ಲ. ಯಾಕೆ ವಿಳಂಬ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಆರ್‍ಇಡಿ ಕಾರ್ಯಪಾಲಕ ಎಂಜಿನಿಯರ್‌ ಗುಳ್ಳಪ್ಪನವರ್‌, ‘ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಿದ್ದ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ವಿಳಂಬವಾಗಿದೆ. ಆ.23ರೊಳಗೆ ಟೆಂಡರ್‌ ಪೂರ್ಣಗೊಳಿಸಿ, ಸೆಪ್ಟಂಬರ್ ಮೊದಲ ವಾರದಲ್ಲಿ ಕಾರ್ಯಾದೇಶ ನೀಡುತ್ತೇವೆ. 2018ರ ಜನವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಇಒ, ‘ಮೂರ್ನಾಲ್ಕು ತಿಂಗಳು ಯಾಕೆ ಬೇಕು? ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಏನು ಸಮಸ್ಯೆ? ವಿನಾಕಾರಣ ನೆಪ ಹೇಳುವುದು ಸರಿಯಲ್ಲ. ನಿಮ್ಮ ಕಥೆ ಕೇಳಲು ಸಮಯವಿಲ್ಲ. ನಾನು ಸೂಚಿಸಿದ ಗಡುವಿನೊಳಗೆ ಕಾಮಗಾರಿ ಕೆಲಸ ಮುಗಿಸಿ. ಅವಧಿ ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

₹ 9.57 ಕೋಟಿ ಬಿಡುಗಡೆ: ‘204 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ₹ 9.57 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ 90 ಕಟ್ಟಡಗಳು ಪೂರ್ಣಗೊಂಡಿವೆ. 67 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. 47 ಕಟ್ಟಡಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಮಾಹಿತಿ ನೀಡಿದರು.

‘ನರೇಗಾ ಯೋಜನೆಯಡಿ 32 ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಪೈಕಿ 16 ಕಟ್ಟಡಗಳು ಪೂರ್ಣಗೊಂಡಿವೆ. 12 ಕಟ್ಟಡಗಳನ್ನು ಪಿಆರ್‍ಇಡಿಗೆ ವಹಿಸಲಾಗಿದೆ. ಶಾಸಕರ ನಿಧಿಯಲ್ಲಿ 7 ಕಟ್ಟಡ ನಿರ್ಮಾಣಕ್ಕೆ ₹ 81.06 ಲಕ್ಷ ಮಂಜೂರಾಗಿದ್ದು, ಶೇ 30ರಷ್ಟು ಅನುದಾನ ಬಿಡುಗಡೆಯಾಗಿದೆ’ ಎಂದರು.

‘ಅಂಗನವಾಡಿ ಕೇಂದ್ರಗಳಿಗೆ 355 ಶೌಚಾಲಯ ಮಂಜೂರಾಗಿದ್ದು, 93 ಪೂರ್ಣಗೊಂಡಿವೆ. 31 ಶೌಚಾಲಯಗಳ ಕಾಮಗಾರಿ ಪ್ರಗತಿಯಲ್ಲಿದೆ. 231 ಶೌಚಾಲಯಗಳ ಕಾಮಗಾರಿ ಆರಂಭವಾಗಿಲ್ಲ. 39 ಕಡೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದವಿದೆ’ ಎಂದು ತಿಳಿಸಿದರು.

ಪರ್ಯಾಯ ಜಾಗ: ‘ಜಾಗ ವಿವಾದದಲ್ಲಿರುವ ಬಗ್ಗೆ ಪಟ್ಟಿ ನೀಡಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಪರ್ಯಾಯ ಜಾಗಕ್ಕೆ ವ್ಯವಸ್ಥೆ ಮಾಡಬಹುದು. ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ ಅನುದಾನ ಬಂದಿಲ್ಲವೆಂದು ನೆಪ ಹೇಳಬೇಡಿ. ಈಗಾಗಲೇ ಎಲ್ಲ ಪಿಡಿಒಗಳಿಗೆ ಡಿಮಾಂಡ್‌ ಡ್ರಾಫ್ಟ್‌ ನೀಡುವಂತೆ ಸೂಚಿಸಿದ್ದೇನೆ. ₹ 10 ಸಾವಿರ ದೊಡ್ಡ ಮೊತ್ತವಲ್ಲ. ₹ 25 ಸಾವಿರ ವೆಚ್ಚದಲ್ಲಿ ವೈಜ್ಞಾನಿಕವಾಗಿ ಶೌಚಾಲಯ ನಿರ್ಮಿಸಬೇಕು. ಈ ಕೆಲಸ ಅ.2ರೊಳಗೆ ಪೂರ್ಣಗೊಳ್ಳಬೇಕು’ ಎಂದು ಸೂಚಿಸಿದರು.

* 885 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿವೆ
* 126 ಅಂಗನವಾಡಿಗಳು ಗ್ರಾ.ಪಂ ಕಟ್ಟಡದಲ್ಲಿವೆ
* 456 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !