ಉದ್ದಿಮೆದಾರರ ನಿಟ್ಟುಸಿರು: ಗ್ರಾಹಕರ ಅಸಹನೆ

7
ಜಿಎಸ್‌ಟಿ ಹೊಡೆತದಿಂದ ಚೇತರಿಸಿಕೊಂಡ ಹೋಟೆಲ್‌ ಉದ್ಯಮ

ಉದ್ದಿಮೆದಾರರ ನಿಟ್ಟುಸಿರು: ಗ್ರಾಹಕರ ಅಸಹನೆ

Published:
Updated:
Deccan Herald

ಕೋಲಾರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದ ಆರಂಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಹೋಟೆಲ್‌ ಉದ್ಯಮವು ಚೇತರಿಸಿಕೊಂಡಿದೆ. ಮೊದಲ ನಾಲ್ಕೈದು ತಿಂಗಳು ಜಿಎಸ್‌ಟಿ ಹೊರೆಯಿಂದ ನಲುಗಿದ್ದ ಹೋಟೆಲ್‌ ಉದ್ದಿಮೆದಾರರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

2017ರ ಜುಲೈ ತಿಂಗಳಲ್ಲಿ ಜಾರಿಯಾದ ಜಿಎಸ್‌ಟಿ ವ್ಯವಸ್ಥೆಯು ಹೋಟೆಲ್‌ ಉದ್ದಿಮೆದಾರರ ಮೇಲೆ ತೆರಿಗೆಯ ಭಾರ ಹೆಚ್ಚಿಸಿತ್ತು. ಮತ್ತೊಂದೆಡೆ ಗ್ರಾಹಕರಿಗೂ ದೊಡ್ಡ ಪೆಟ್ಟು ಕೊಟ್ಟಿತ್ತು. ತೆರಿಗೆ ಭಾರದಿಂದಾಗಿ ನಾಲ್ಕೈದು ತಿಂಗಳು ವಹಿವಾಟು ಕುಸಿದು ಉದ್ದಿಮೆದಾರರು ಚಿಂತೆಗೀಡಾಗಿದ್ದರು.

‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ತಿಂಡಿ ತಿನಿಸುಗಳ ದರಕ್ಕಿಂತ ತೆರಿಗೆ ಹೊರೆಯೇ ಹೆಚ್ಚಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ದೊಡ್ಡ ಹೋಟೆಲ್‌ಗಳ ಸಹವಾಸವೇ ಬೇಡವೆಂದು ರಸ್ತೆ ಬದಿಯ ಫಾಸ್ಟ್‌ ಫುಡ್‌ ಮಳಿಗೆಗಳು, ಸಣ್ಣ ಹೋಟೆಲ್‌ಗಳತ್ತ ಮುಖ ಮಾಡಿದ್ದರು.

ಇದರಿಂದ ದೊಡ್ಡ ಹೋಟೆಲ್‌ಗಳಲ್ಲಿ ವಹಿವಾಟು ಕುಸಿದು ಉದ್ದಿಮೆದಾರರು ಜಿಎಸ್‌ಟಿ ವ್ಯವಸ್ಥೆಯನ್ನು ಶಪಿಸಿದ್ದರು. ಜಿಎಸ್‌ಟಿ ಬಗೆಗಿನ ಗೊಂದಲ, ತೆರಿಗೆ ಭಾರ, ವಹಿವಾಟು ಕುಸಿತ, ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ, ಕಾರ್ಮಿಕರ ಸಂಬಳದ ಹೊರೆಯಿಂದಾಗಿ ಉದ್ದಿಮೆದಾರರಿಗೆ ದಿಕ್ಕು ತೋಚದಂತಾಗಿತ್ತು. ದಿನಗಳು ಉರುಳಿದಂತೆ ಆರಂಭಿಕ ಗೊಂದಲಗಳೆಲ್ಲಾ ನಿವಾರಣೆಯಾಗಿ ಹೊಸ ವ್ಯವಸ್ಥೆಗೆ ಒಗ್ಗಿಕೊಂಡ ಉದ್ದಿಮೆದಾರರು ಈಗ ಜಿಎಸ್‌ಟಿ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ.

ಗ್ರಾಹಕರಲ್ಲಿ ಅಸಹನೆ: ಜಿಎಸ್‌ಟಿ ಬಗ್ಗೆ ಗ್ರಾಹಕರ ವಲಯದಲ್ಲಿ ಅಸಹನೆ ಮುಂದುವರಿದಿದೆ. ‘ಹೋಟೆಲ್‌ ಮಾಲೀಕರು ತಮ್ಮ ತೆರಿಗೆ ಭಾರವನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿ ತೆರಿಗೆ ಭಾರ ಕಡಿಮೆ ಮಾಡಿಕೊಂಡಿದ್ದಾರೆ. ತೆರಿಗೆ ಹೊರೆ ಹಾಗೂ ಆಹಾರ ಪದಾರ್ಥಗಳ ದುಬಾರಿ ಬೆಲೆ ನೆನೆದರೆ ದೊಡ್ಡ ಹೋಟೆಲ್‌ಗಳಿಗೆ ಹೋಗಲು ಮನಸಾಗುವುದಿಲ್ಲ’ ಎಂದು ಗ್ರಾಹಕರು ಹೇಳುತ್ತಾರೆ.

ಈ ಹಿಂದೆ ಎಲ್ಲಾ ಬಗೆಯ ತೆರಿಗೆಗಳನ್ನು ಒಳಗೊಂಡಂತೆ ಶೇ 4ರಷ್ಟು ತೆರಿಗೆಯನ್ನು ಹೋಟೆಲ್‌ ಮಾಲೀಕರೇ ಭರಿಸುತ್ತಿದ್ದರು. ಗ್ರಾಹಕರ ಮೇಲೆ ಯಾವುದೇ ತೆರಿಗೆ ಭಾರವಿರಲಿಲ್ಲ. ಆದರೆ, ಈಗ ಜಿಎಸ್‌ಟಿ ಭಾರವನ್ನು ಮಾಲೀಕರು ಗ್ರಾಹಕರ ಮೇಲೆ ಹಾಕಿದ್ದಾರೆ. ಬಿಲ್‌ನ ಪ್ರತಿಯಲ್ಲೇ ಜಿಎಸ್‌ಟಿ ದರ ನಮೂದಿಸಿ ಗ್ರಾಹಕರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ.

ಖುಲಾಯಿಸಿದ ಅದೃಷ್ಟ: ಜಿಎಸ್‌ಟಿ ಜಾರಿ ನಂತರ ರಸ್ತೆ ಬದಿಯ ಫಾಸ್ಟ್‌ ಫುಡ್‌ ಮಳಿಗೆಗಳು, ಸಣ್ಣ ಹೋಟೆಲ್‌ಗಳ ಮಾಲೀಕರಿಗೆ ಅದೃಷ್ಟ ಖುಲಾಯಿಸಿದೆ. ಈ ಮಳಿಗೆಗಳು ಮತ್ತು ಹೋಟೆಲ್‌ಗಳಲ್ಲಿ ವಹಿವಾಟು ಹೆಚ್ಚಿದ್ದು, ಮಾಲೀಕರು ಸಂತಸಗೊಂಡಿದ್ದಾರೆ. ಆದರೆ, ಜಿಎಸ್‌ಟಿ ವ್ಯವಸ್ಥೆಯು ಉದ್ಯಮದಲ್ಲಿ ಅನಾರೋಗ್ಯಕರ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದೆ. ಪರವಾನಗಿ ಇಲ್ಲದ ಅಸಂಘಟಿತ ಹೋಟೆಲ್‌ಗಳು ಹಾದಿ ಬೀದಿಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !