ಕುಡಿಯುವ ನೀರಿನ ಆದ್ಯತೆ ನೀಡಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಡಾ.ಕೆ.ಸುಧಾಕರ್ ಸೂಚನೆ

ಕುಡಿಯುವ ನೀರಿನ ಆದ್ಯತೆ ನೀಡಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಪ್ರಸ್ತುತ 35 ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ನೀರಿನ ಸಮಸ್ಯೆಯನ್ನು ಖಾಸಗಿ ಬೋರ್‌ವೆಲ್ ಸರಬರಾಜು ಅಥವಾ ಹೊಸ ಕೊಳವೆ ಬಾವಿಗಳನ್ನು ಕೊರೆಯಿಸುವ ಮೂಲಕ ಬಗೆಹರಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ನಡುವೆಯೇ ಶಾಸಕರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಕಳೆದ ಸಾಲಿನಲ್ಲಿ ಕೊರೆಯಿಸಿದ ಕೊಳವೆ ಬಾವಿ, ಪೈಪ್‌ಲೈನ್ ನಿರ್ಮಾಣ ಕಾಮಗಾರಿ ಬಿಲ್ ಬಾಕಿ, ಪ್ರಸಕ್ತ ಸಾಲಿಗೆ ಈವರೆಗೆ ಬಿಡುಗಡೆಯಾಗಬೇಕಾದ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

2016-17ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಈವರೆಗೆ ಸಂಪೂರ್ಣವಾಗಿ ಖರ್ಚು ಮಾಡದೇ ಇರುವುದಕ್ಕೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ‘ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಅಥವಾ ಉಳಿಕೆ ಅನುದಾನವನ್ನು ಎಂಜಿನಿಯರಿಂಗ್ ಇಲಾಖೆಗೆ ವರ್ಗಾವಣೆ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಪ್ರಸಕ್ತ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಜಾತವಾರ, ಮರಸನಹಳ್ಳಿ , ಕೇತೇನಹಳ್ಳಿ, ಕಂಗಾನಹಳ್ಳಿ, ಮಧುರೇನಹಳ್ಳಿ, ಹಾಗೂ ಹಳೇಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಿದೆ. ಇದಕ್ಕಾಗಿ ತಲಾ ₨1ಕೋಟಿಯಂತೆ ₨5 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ರಿಯಾಯೋಜನೆಯನ್ನು ಸಹ ಅನುಮೋದಿಸಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಪಿ.ಸಂಜೀವಪ್ಪ ಮಾತನಾಡಿ, ‘ಕ್ಷೇತ್ರದಲ್ಲಿರುವ ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಸುಮಾರು 10 ಗ್ರಾಮಗಳ ನಿವೇಶನ ರಹಿತರ ಹಕ್ಕುಪತ್ರಗಳು ಸಿದ್ಧವಾಗಿವೆ. ಇದರಿಂದ ಸುಮಾರು 650 ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ’ ಎಂದು ತಿಳಿಸಿದರು.

ಪ್ರಸಕ್ತ ಸಾಲಿಗೆ 200 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧಪಡಿಸುವಂತೆ ಶಾಸಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಜಿ ಲೋಕೂರ್, ಸಹಾಕ ಕಾರ್ಯಪಾಲಕ ಎಂಜಿನಿಯರ್ ಜಾವೆದ್, ಕ್ರೆಡಿಲ್ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ವಾದಿರಾಜ್, ಹೇಮಂತ್, ನಾಗರಾಜ್ ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !