ಮಾಜಿ ಯೋಧನ ಯಶಸ್ವಿ ಕೃಷಿ ಕೈಂಕರ್ಯ!

7
ಭಾರತೀಯ ಸೇನೆ, ಪೊಲೀಸ್ ಇಲಾಖೆಯಲ್ಲಿ 44 ವರ್ಷ ಸೇವೆ ನಂತರ ಈಗ ರೈತನ ಪಾತ್ರ

ಮಾಜಿ ಯೋಧನ ಯಶಸ್ವಿ ಕೃಷಿ ಕೈಂಕರ್ಯ!

Published:
Updated:
Deccan Herald

ಬಾಗಲಕೋಟೆ: ಅದು 1976ನೇ ಇಸವಿ. ಆಗಷ್ಟೇ ಪಿಯುಸಿ ಮುಗಿಸಿದ್ದೆ. ಬಾಲ್ಯದಿಂದಲೂ ಸೇನೆಗೆ ಸೇರಬೇಕು ಎಂಬ ಅದಮ್ಯ ಹಂಬಲ. ಬೆಳಗಾವಿಯ ಸೇನಾ ರೆಜಿಮೆಂಟ್‌ನಲ್ಲಿ ನಡೆದ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡು ಆಯ್ಕೆಯೂ ಆದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿ. ನಮ್ಮ ತಂಡದ 25 ಮಂದಿಯಲ್ಲಿ ಪಂಜಾಬಿನ ಸರ್ದಾರ್ಜಿಗಳದ್ದೇ ಪ್ರಾಬಲ್ಯ. ನಾನೊಬ್ಬನೇ ಕನ್ನಡಿಗ. ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ಹಿಂದಿ ಗೊತ್ತಿಲ್ಲದ ಕಾರಣ ಸರ್ದಾರ್ಜಿಗಳಿಂದ ಕೀಟಲೆಗೊಳಗಾಗುತ್ತಿದ್ದೆ. ನನಗಿದ್ದ ಹಿಪ್ಪಿ ಕೂದಲಿಗೆ ಅಲ್ಲಿ ಕತ್ತರಿ ಬಿತ್ತು. ಒಂಟಿತನಕ್ಕೆ ಹೊಂದಾಣಿಕೆ ಕಷ್ಟವಾಯಿತು. ಒಂದೇ ತಿಂಗಳಿಗೆ ಊರ ಕಡೆಗೆ ಮನಸ್ಸು ಎಳೆಯತೊಡಗಿತು.

ಅಪ್ಪ ಮಲ್ಲಯ್ಯನಿಗೆ ಪತ್ರ ಬರೆದೆ. ‘ನನ್ನ ಸೊಕ್ಕಿನಿಂದ ಇಲ್ಲಿಗೆ ಬಂದಿದ್ದೆ. ಈಗ ಸೇನೆ ಬಿಟ್ಟು ಊರಿಗೆ ಮರಳುತ್ತೇನೆ. ಅಲ್ಲಿ ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ’ ಎಂದು ಬರೆದಿದ್ದೆ. ಅನಕ್ಷರಸ್ಥನಾದ ಅಪ್ಪ ಬೇರೆಯವರಿಂದ ಪತ್ರ ಓದಿ ವಿಷಯ ತಿಳಿದುಕೊಂಡರು. ಅವರಿಂದಲೇ ನನಗೆ ಪತ್ರ ಬರೆಸಿ ಹಾಕಿದರು. ‘ನೀನು ಈ ನೆಲದ ಋಣ ತೀರಿಸಲು, ಭಾರತ ಮಾತೆಯ ಸೇವೆ ಮಾಡಲು ಹೋಗಿದ್ದೀಯ. ಅಲ್ಲಿಂದ ಓಡಿ ಬಂದು ಊರಲ್ಲಿ ನನ್ನ ಮರ್ಯಾದೆ ತೆಗೆಯಬೇಡ. ನಿನಗೆ ಬಿಟ್ಟು ಬರಲೇಬೇಕು ಎನಿಸಿದರೆ ಊರಿಗೆ ಬರಬೇಡ. ಜನ್ಮದಲ್ಲಿಯೇ ಮುಖ ತೋರಿಸಬೇಡ. ನನಗಿರುವ ಆರು ಮಕ್ಕಳಲ್ಲಿ ಒಬ್ಬ ಇಲ್ಲ, ಸತ್ತು ಹೋದ ಎಂದು ತಿಳಿದುಕೊಳ್ಳುವೆ’ ಎಂದು ಅದರಲ್ಲಿ ಉಲ್ಲೇಖಿಸಿದ್ದ.

ಪತ್ರ ಓದುತ್ತಲೇ ಕಣ್ಣು ಹನಿಗೂಡಿತು. ದೊಡ್ಡ ಧೈರ್ಯ ಬಂತು. ಜೊತೆಗೆ ಅಪ್ಪನ ಬಗ್ಗೆ ಇದ್ದ ಪ್ರೀತಿ, ಗೌರವವೂ ಹೆಚ್ಚಿತು. ಸೇನೆಯಲ್ಲಿಯೇ 20 ವರ್ಷ ದುಡಿದು ನಿವೃತ್ತಿಯಾಗಿ ಹೆಮ್ಮೆಯ ಯೋಧನಾಗಿ ಮರಳಿದೆ

–ಹೀಗೆ ಹಳೆಯ ನೆನಪುಗಳಿಗೆ ಜಾರಿದವರು ಬೀಳಗಿ ತಾಲ್ಲೂಕು ಅನಗವಾಡಿಯ ಶ್ರೀಶೈಲ ಕೋಗಿಲ.

ಭಾರತೀಯ ಸೇನೆ ಮುಂಚೂಣಿಯ ಫಿರಂಗಿ ದಳದಲ್ಲಿ ಚೀನಾ ಗಡಿಯ ಅರುಣಾಚಲ ಪ್ರದೇಶ, ಅಸ್ಸಾಂನ ಲೇಖಪಾನಿ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿರುವ ಶ್ರೀಶೈಲ ಕೋಗಿಲ, ನಿವೃತ್ತಿಯ ನಂತರ ಪೊಲೀಸ್ ಇಲಾಖೆ ಸೇರಿ ಗುಪ್ತಚರ ವಿಭಾಗದಲ್ಲಿ 24 ವರ್ಷ ಕೆಲಸ ಮಾಡಿ ಅಲ್ಲಿಂದ ನಿವೃತ್ತಿ ಹೊಂದಿದ್ದಾರೆ. 61ರ ಹರೆಯದ ಅವರೀಗ ಯಶಸ್ವಿ ರೈತ!

ಅನಗವಾಡಿಯಲ್ಲಿ ಪಿತ್ರಾರ್ಜಿತವಾಗಿ ಬಂದ 3.34 ಎಕರೆ ಜಮೀನಿನ ಜೊತೆಗೆ 1993ರಲ್ಲಿ ಸೇನೆಯಿಂದ ನಿವೃತ್ತಿಯಾದಾಗ ತಮಗೆ ಬಂದ ಪಿಂಚಣಿ ಹಣದಲ್ಲಿ 3.34 ಎಕರೆ ಜಮೀನು ಖರೀದಿಸಿ ಅಲ್ಲಿ ಕೃಷಿ ಮಾಡುತ್ತಿದ್ದಾರೆ. ಕಲ್ಲಂಗಡಿ, ದಾಳಿಂಬೆ, ಬಾಳೆ ಬೆಳೆದು ಉತ್ತಮ ಇಳುವರಿ ತೆಗೆದಿದ್ದಾರೆ. ಜಮೀನಿಗೆ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದು, ಜೀವಾಮೃತ ಬಳಕೆಯ ಜೊತೆಗೆ ಸಾವಯವ–ಆಧುನಿಕ ಕೃಷಿಯ ನಡುವೆ ಸಮನ್ವಯ ಸಾಧಿಸಿ ಕೈ ತುಂಬಾ ಲಾಭ ಗಳಿಸುತ್ತಿದ್ದಾರೆ.

‘ಸೇನೆಯಲ್ಲಿ ನಿವೃತ್ತಿಯ ನಂತರ ಊರಿಗೆ ಬಂದಾಗ ಹೊಲ ಬೀಳು ಬಿದ್ದಿತ್ತು. ಕಲ್ಲು, ಗುಂಡಿಗಳಿಂದ ತುಂಬಿತ್ತು. ವಿಜಯಪುರದ ಕೃಷಿ ವಿಶ್ವವಿದ್ಯಾಲಯದ ತಜ್ಞರನ್ನು ಕಂಡು ಮಣ್ಣು ಪರೀಕ್ಷೆ ಮಾಡಿಸಿ, ಅವರಿಂದ ಸಲಹೆ–ಸೂಚನೆ ಪಡೆದು ಕೃಷಿ ಆರಂಭಿಸಿದೆ. ಮೊದಲು ಮೂರು ಕೊಳವೆಬಾವಿ ಕೊರೆಸಿ ಅದಕ್ಕೆ ಹನಿ ನೀರಾವರಿ (ಡಬಲ್‌ ಡ್ರಿಪ್) ವ್ಯವಸ್ಥೆ ಮಾಡಿ ಪ್ರಯೋಗಗಳನ್ನು ಆರಂಭಿಸಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೊಲದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಆಗಲಿಲ್ಲ. ವರ್ಷದ ಹಿಂದೆ ನಿವೃತ್ತಿ ನಂತರ ಸಂಪೂರ್ಣ ಇಲ್ಲಿಯೇ ತೊಡಗಿಸಿಕೊಂಡಿರುವೆ’ ಎಂದು ಅವರು ಹೇಳಿದರು. 

ಭಾರತೀಯ ಸೇನೆ, ಪೊಲೀಸ್ ಇಲಾಖೆಯಲ್ಲಿನ ಸೇವೆ, ಈಗ ಕೃಷಿ ಕ್ಷೇತ್ರದಲ್ಲಿನ ಯಶಸ್ಸಿಗೆ ಪತ್ನಿ ಲಕ್ಷ್ಮೀಬಾಯಿ ಪ್ರೇರಣೆಯೇ ಕಾರಣ ಎಂದು ಹೇಳುವ ಶ್ರೀಶೈಲ ಅವರ ಮೂವರು ಮಕ್ಕಳಲ್ಲಿ ಇಬ್ಬರು ಪುತ್ರಿಯರು ಬಿಎಎಂಎಸ್ ಕಲಿಯುತ್ತಿದ್ದಾರೆ. ಪುತ್ರ ಪಿಯುಸಿ ಓದುತ್ತಿದ್ದಾನೆ.

‘ನಿವೃತ್ತಿ ನಂತರ ಕೃಷಿ ಕಾರ್ಯಕ್ಕೆ ಸೀಮಿತಗೊಳಿಸಿಕೊಂಡ ಪರಿಣಾಮ ವಯೋಸಹಜ ಯಾವುದೇ ಕಾಯಿಲೆ ಅವರಿಗೆ ಬಾಧಿಸಿಲ್ಲ. ಆರೋಗ್ಯಕರ ಬದುಕು ಸಾಧ್ಯವಾಗಿದೆ’ ಎನ್ನುವ ಶ್ರೀಶೈಲ, ಇದೇ ಮೊದಲ ಬಾರಿಗೆ ದಾಳಿಂಬೆ ಫಸಲು ತೆಗೆದಿದ್ದು, ₹ 2.5 ಲಕ್ಷ ಗಳಿಸಿದ್ದಾರೆ.

ಶ್ರೀಶೈಲ ಅವರ ಸಂಪರ್ಕ ಸಂಖ್ಯೆ: 9060432393

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !