ಶಿರಾಡಿ ಘಾಟಿ: ಗುಡ್ಡ ಕುಸಿತ, ಪ್ರಯಾಣಿಕರ ಪರದಾಟ

7
ಪ್ರವಾಹದಿಂದ ಹಲವೆಡೆ ಜನಜೀವನ ಅಸ್ತವ್ಯಸ್ತ

ಶಿರಾಡಿ ಘಾಟಿ: ಗುಡ್ಡ ಕುಸಿತ, ಪ್ರಯಾಣಿಕರ ಪರದಾಟ

Published:
Updated:

ಬೆಂಗಳೂರು: ರಾಜ್ಯದ ಮಲೆನಾಡು, ಘಟ್ಟ ಪ್ರದೇಶ ಹಾಗೂ ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ. ಕೆಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಕುಂದಾಪುರ ತಾಲ್ಲೂಕಿನ ಕೊಲ್ಲೂರಿನಲ್ಲಿ ರಘುರಾಮ ಶೆಟ್ಟಿ (54) ಎಂಬುವವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಸಿದ್ದಾಪುರ ಐರಬೈಲಿನಲ್ಲಿ ಮನೆ ಸಮೀಪದ ಹಳ್ಳ ದಾಟುವಾಗ ಬಿಎಸ್‌ಎನ್‌ಎಲ್‌ ನಿವೃತ್ತ ನೌಕರ ಶಂಕರ ಪೂಜಾರಿ (58) ಅವರು ಕೊಚ್ಚಿ ಹೋಗಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮದಲ್ಲಿ ಮಂಗಳವಾರ ಹೇಮಾವತಿ ಕಾಲುವೆಯ ಸೋಪಾನಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ರೈತ ಮಹಿಳೆ ಆಕಸ್ಮಿಕವಾಗಿ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಶಂಕರೇಗೌಡರ ಪತ್ನಿ ಸುಧಾಮಣಿ (50) ಮೃತಪಟ್ಟವರು. ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವದಿಂದ ಹಲವೆಡೆ ಗುಡ್ಡ ಕುಸಿದಿದ್ದು, 15 ಗಂಟೆಗಳಿಂದ ಸಂಚಾರ ಸ್ಥಗಿತವಾಗಿತ್ತು. ಮಣ್ಣು ತೆರವು ಮಾಡಿದ ಬಳಿಕ ಸಂಜೆ ವೇಳೆಗೆ ಸಂಚಾರ ಪುನರಾರಂಭಗೊಂಡಿತು.

ಸೋಮವಾರ ತಡರಾತ್ರಿ 2 ಗಂಟೆಯ ಬಳಿಕ ಸಕಲೇಶಪುರ ಸಮೀಪದ ಮಾರನಹಳ್ಳಿ ಸೇರಿದಂತೆ ಐದು ಕಡೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿತ್ತು. ಉದನೆ ಸಮೀಪ ಮರಗಳು ರಸ್ತೆಯ ಮೇಲೆ ಉರುಳಿಬಿದ್ದಿದ್ದವು. ಅಲ್ಲಿಯೇ ಗುಂಡ್ಯಹೊಳೆ ಪ್ರವಾಹದಿಂದ ರಸ್ತೆ ಮೇಲೆ ನೀರು ನಿಂತಿತ್ತು. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು.

ಮಾರನಹಳ್ಳಿ ಸಮೀಪ ಮಣ್ಣು ಕುಸಿತದಿಂದಾಗಿ ಸಾರಿಗೆ ನಿಗಮದ ಬಸ್ ರಸ್ತೆ ಬದಿಗೆ ಜಾರಿತು. ಮರಕ್ಕೆ ತಾಗಿ ನಿಂತಿದ್ದರಿಂದ ಅಪಾಯ ತಪ್ಪಿದೆ. ಬಸ್ ಪ್ರಪಾತಕ್ಕೆ ಉರುಳಿದೆ ಎಂಬ ಸುದ್ದಿ ಹರಡಿದ್ದರಿಂದ ಸ್ಥಳಕ್ಕೆ 5 ಆಂಬುಲೆನ್ಸ್‌ಗಳನ್ನು ಕಳುಹಿಸಲಾಗಿತ್ತು.

ಬಸ್‌ ಸಂಚಾರ ವ್ಯತ್ಯಯ: ಮಂಗಳೂರಿನಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಸಂಚರಿಸುವ ನೂರಾರು ಬಸ್‌ಗಳು ಸೋಮವಾರ ರಾತ್ರಿ ಈ ಮಾರ್ಗದಲ್ಲಿ ಹೊರಟಿದ್ದವು. ಆದರೆ, ಭೂಕುಸಿತದಿಂದಾಗಿ ಎಲ್ಲ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ರೈಲು ಸಂಚಾರ ರದ್ದು: ಘಟ್ಟ ಪ್ರದೇಶದ ಸುಬ್ರಹ್ಮಣ್ಯ ರಸ್ತೆ– ಸಕಲೇಶಪುರ ನಡುವಿನಲ್ಲಿ ರೈಲ್ವೆ ಹಳಿ ಮೇಲೆ ಸೋಮವಾರ ತಡರಾತ್ರಿಯ ಬಳಿಕ ಭೂಕುಸಿತ ಸಂಭವಿಸುತ್ತಿದ್ದು, ಹಾಸನ– ಮಂಗಳೂರು ನಡುವಿನ ರೈಲು ಸಂಚಾರ ರದ್ದು ಮಾಡಲಾಗಿದೆ.

ಕಾರ್ಕಳ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಜಯಂತಿ ನಗರದಲ್ಲಿರುವ ಶಾಲೆಯ ಹೆಂಚುಗಳು ಹಾರಿಹೋಗಿವೆ. ಹೆಬ್ರಿಯಲ್ಲಿ ಸೀತಾನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಉಡುಪಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದೆ.

ಮೀನುಗಾರರ ರಕ್ಷಣೆ: ಉಡುಪಿ ತಾಲ್ಲೂಕಿನ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು ಸುರತ್ಕಲ್‌ ಹಾಗೂ ಭಟ್ಕಳ ಭಾಗದ ಸಮುದ್ರದಲ್ಲಿ ಕೆಟ್ಟುನಿಂತಿವೆ. ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಕೋಡಿಬೆಂಗ್ರೆ ಬಳಿ ದಡಕ್ಕೆ ಅಪ್ಪಳಿಸಿ, ಮುಳುಗಿದೆ. ಸ್ಥಳೀಯರು ಮೀನುಗಾರರನ್ನು ರಕ್ಷಿಸಿದ್ದಾರೆ. ಶಿರೂರಿನ ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ್ದ 6 ದೋಣಿಗಳು ಹಾಗೂ ಎರಡು ಪರ್ಸೀನ್‌ ಬೋಟ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಶಾಲೆ ಕಟ್ಟಡ ಕುಸಿತ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭದ್ರಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗ್ರಾಮದ ಚಿನ್ನಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಕುಸಿದಿದ್ದು, ಶಾಲೆಗೆ ರಜೆ ನೀಡಿದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದೆ.

ಶೃಂಗೇರಿ ಶಾರದಾ ಮಠದ ಪಕ್ಕದಲ್ಲಿರುವ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿ ಅಲ್ಲಿನ ಎಲ್ಲ ಅಂಗಡಿಯ ಜನರನ್ನು ಸ್ಥಳಾಂತರಿಸಲಾಗಿದೆ.

ಕೊಡಗಿನಲ್ಲಿ ಮತ್ತೆ ಪ್ರವಾಹ: ಕೊಡಗು ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿವೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಎಂಬಲ್ಲಿ ಮಣ್ಣು ತೆರವು ಮಾಡಿದಂತೆ ಗುಡ್ಡ ಕುಸಿಯುತ್ತಿದ್ದು, ತೆರವು ಕಾರ್ಯ ವಿಳಂಬವಾಗಿದೆ.

1.49 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ: ಮುನ್ನೆಚ್ಚರಿಕೆ ಕ್ರಮವಾಗಿ ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ಮಂಗಳವಾರ 1.49 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ.

ಶ್ರೀರಂಗಪಟ್ಟಣದಲ್ಲಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಮನೆ, ದೇವಾಲಯ, ಕೃಷಿ ಜಮೀನು ಮುಳುಗಡೆಯಾಗಿವೆ.

ಲಿಂಗನಮಕ್ಕಿಯಿಂದ ನೀರು ಹೊರಕ್ಕೆ: ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸುಮಾರು ಒಂದು ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ಗರಿಷ್ಠಮಟ್ಟ (1819 ಅಡಿ) ತಲುಪುತ್ತಿರುವ ಕಾರಣ ಮಂಗಳವಾರ 11 ಕ್ರಸ್ಟ್‌ಗೇಟ್‌ ತೆರೆದು 30 ಸಾವಿರ ಕ್ಯುಸೆಕ್ ನೀರು ಶರಾವತಿ ನದಿಗೆ ಹರಿಸಲಾಗುತ್ತಿದೆ.

ಭದ್ರಾ ಜಲಾಶಯದಿಂದ ಮಂಗಳವಾರ ಸಂಜೆ ವೇಳೆಗೆ 70 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಿದ್ದು, ಭದ್ರಾವತಿ ಹೊಸ ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದೆ. ಶರಾವತಿ, ಮಾಲತಿ, ವರದಾ ಸೇರಿದಂತೆ ಎಲ್ಲಾ ನದಿಗಳೂ ಅಪಾಯದಮಟ್ಟ ಮೀರಿ ಹರಿಯುತ್ತಿವೆ.

ಆಗುಂಬೆ ಘಾಟಿ ಸಂಚಾರ ಬಂದ್‌: ಭಾರಿ ಮಳೆ ಹಾಗೂ ತೀರ್ಥಹಳ್ಳಿ–ಕುಂದಾಪುರ ರಸ್ತೆಯಲ್ಲಿ ಧರೆ ಕುಸಿದ ಪರಿಣಾಮ ಆಗುಂಬೆ ಘಾಟಿಯಲ್ಲಿ ಎಲ್ಲ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

ಯಡೂರು–ಮಾಸ್ತಿಕಟ್ಟೆ ಮಧ್ಯದ ಉಳುಕೊಪ್ಪದ ಬಳಿ ಗುಡ್ಡ ಕುಸಿದಿದ್ದು, ಹಲವು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತ: ಉತ್ತರ ಕನ್ನಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಿದ್ದು, ಸೇತುವೆ ಹಾಗೂ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಐದು ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಒಳಹರಿವು ವ್ಯಾಪಕವಾಗಿ ಹೆಚ್ಚಿದೆ. ಇದರಿಂದ ಶರಾವತಿ ನದಿಪಾತ್ರದಲ್ಲಿ ಪ್ರವಾಹ ಉಂಟಾಗಿದೆ.

ಕಾರವಾರ ತಾಲ್ಲೂಕಿನ ಹೊಟೆಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಳ್ಳದ ನೀರು ಉಕ್ಕಿ ಹರಿದಿದ್ದರಿಂದ ಗೋಯಾರ್ ಹಾಗೂ ಬಾರಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಬಳಿ ಮಣ್ಣು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಮಂಗಳವಾರ ಬೆಳಗಿನ ಜಾವ 3.30ಕ್ಕೆ ಗುಡ್ಡ ಕುಸಿದು ಸುಮಾರು ನಾಲ್ಕು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಯ ಮೇಲೆ ನಸುಕಿನಲ್ಲಿ ಲಾರಿಯೊಂದು ಸಾಗುತ್ತಿದ್ದ ವೇಳೆ ಸೇತುವೆ ಕುಸಿದು ಲಾರಿ ನೀರಿನಲ್ಲಿ ಸಿಲುಕಿಕೊಂಡಿತು.

***

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸುರಿದ ಮಳೆ ವಿವರ (ಮಿ.ಮೀ.ನಲ್ಲಿ)
ಭಾಗಮಂಡಲ 252
ಹುದಿಕೇರಿ 216
ಶ್ರೀಮಂಗಲ 215
ಶಾಂತಳ್ಳಿ 188
ಕೊಡ್ಲಿಪೇಟೆ 170
ನಾಪೋಕ್ಲು 169
ಮಡಿಕೇರಿ 82

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !