ಚಿಕ್ಕಬಳ್ಳಾಪುರ: ದೇಶಭಕ್ತಿಯ ಕಾವಿಗೆ ಬಿಸಿಯಾದ ತಂಗಾಳಿ

7
ಜಿಲ್ಲಾ ಕ್ರೀಡಾಂಗಣದಲ್ಲಿ ಸಡಗರ ಸಂಭ್ರಮದಿಂದ 72ನೇ ಸ್ವಾತಂತ್ಯೋತ್ಸವ ದಿನ ಆಚರಣೆ, ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಚಿಕ್ಕಬಳ್ಳಾಪುರ: ದೇಶಭಕ್ತಿಯ ಕಾವಿಗೆ ಬಿಸಿಯಾದ ತಂಗಾಳಿ

Published:
Updated:
Deccan Herald

ಚಿಕ್ಕಬಳ್ಳಾಪುರ: ಇಳೆಗೆ ಮಳೆ ಸುರಿಸಲು ಸಜ್ಜಾದ ಮಸುಕಿದ ಮೋಡಗಳು ಕೂಡ ಕ್ಷಣಕಾಲ ಅಲ್ಲಿ ದೃಷ್ಟಿ ನೆಟ್ಟು ಮೈಮರೆತಿದ್ದವು. ಸಡಗರದಿ ಮೈದಾನದಲ್ಲಿ ನೆರೆದು ಮೈಮನದ ತುಂಬ ದೇಶಭಕ್ತಿಯ ಬಿಸುಪು ತುಂಬಿಕೊಂಡವರು ಅಂತರಾಳದ ತುಡಿತದೊಂದಿಗೆ ಉತ್ಸಾಹದಿಂದ ಎದೆ ಸೆಟೆಸಿ ಶಿಸ್ತಾಗಿ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿ ಸೃಷ್ಟಿಯಾದ ಕಾವಿಗೆ ಮೊಡಗಳೇ ಚದುರಿ ಆಕಾಶ ಶುಭ್ರಗೊಂಡು ಮಳೆಯ ಆತಂಕ ದೂರ ಮಾಡಿತು.

– ಇದು ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ 72ನೇ ಸ್ವಾತಂತ್ಯೋತ್ಸವದ ದಿನಾಚರಣೆ ಕಾರ್ಯಕ್ರಮದ ಝಲಕ್.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಥ ಪರಿವೀಕ್ಷಣೆ ನಡೆಸಿದರು.

ಬಳಿಕ ಪರೇಡ್‌ ಕಮಾಂಡರ್‌ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ನಾಗೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ 19 ತಂಡಗಳು ಪಥ ಸಂಚಲನ ನಡೆಸಿದವು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಮತ್ತು ನಗರಸಭೆಯ ಪೌರ ಕಾರ್ಮಿಕರ ತುಕಡಿ ಮೈದಾನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದವು.

ಪೂರ್ಣಪ್ರಜ್ಞಾ, ನ್ಯೂ ಹೊರೈಜನ್, ಸರ್.ಎಂ.ವಿ, ಬ್ರೈಟ್, ನ್ಯೂಟನ್ ಗ್ರಾಮರ್, ಕ್ವಟ್‌ ಕಾರ್ನರ್, ಪ್ರೆಸಿಡೆನ್ಸಿ, ಇಂಡಿಯನ್ ಪಬ್ಲಿಕ್, ಸೇಂಟ್ ಜಾನ್ ಮತ್ತು ಪಂಚಗಿರಿ ಬೋಧನಾ ಪ್ರೌಢಶಾಲೆ ಸೇರಿದಂತೆ 10 ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಕವಾಯತು ನೋಡುಗರ ಮನಸೆಳೆಯಿತು. ಪೊಲೀಸ್‌ ಬ್ಯಾಂಡ್ ಕಾರ್ಯಕ್ರಮಕ್ಕೆ ಹುರುಪು ತುಂಬಿತು.

ಸಚಿವರ ಸ್ವಾತಂತ್ರ್ಯ ದಿನದ ಸಂದೇಶ ಬಳಿಕ ನಗರದ ವಾಪಸಂದ್ರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ‘ಉಜ್ವಲ ಭಾರತ ಇತಿಹಾಸ’ ನೋಡುಗರಲ್ಲಿ ದೇಶಭಕ್ತಿ ಉದ್ದೀಪಿಸಿತು. ಗುಡ್‌ ಶಫರ್ಡ್ ಪ್ರೌಢಶಾಲೆ ವಿದ್ಯಾರ್ಥಿಗಳು ‘ಜೈ ಹೋ’ ನೃತ್ಯ ಮನಮೋಹಕವಾಗಿತ್ತು. ಗೌರಿಬಿದನೂರು ತಾಲ್ಲೂಕಿನ ಇಡಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವಿದುರಾಶ್ವತ್ಥ ಹತ್ಯಾಕಾಂಡ’ ರೂಪಕ ಇತಿಹಾಸ ಮೆಲುಕು ಹಾಕುವಂತೆ ಮಾಡಿತು.

ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳು ‘ದಿಲ್‌ಮೇ ಹಿಂದೂಸ್ತಾನಿ’ ನೃತ್ಯಕ್ಕೆ ಮೈದಾನದಲ್ಲಿದ್ದವರೆಲ್ಲ ತಲೆದೂಗಿದರು. ಗುಡಿಬಂಡೆಯ ಕಿತ್ತೂರರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿಗಳು ‘ಭಾರತಾಂಬೆ ನಿನ್ನ ಜನುಮದಿನ’ ಮತ್ತು ನಗರದ ಪ್ರಶಾಂತಿ ಬಾಲಮಂದಿರದ ಮಕ್ಕಳು ‘ಮಿಲೇ ಸುರ್ ಮೇರಾ ತುಮಾರಾ’ ನೃತ್ಯ ರೂಪಕಗಳು ಮೆಚ್ಚುಗೆಗೆ ಪಾತ್ರವಾದವು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ, ‘ಸ್ವಚ್ಛ ಭಾರತ ಮಿಷನ್’ ಅಡಿ ನಗರವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಿದ್ದಕ್ಕಾಗಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಆಯುಕ್ತ ಉಮಾಕಾಂತ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಪಥ ಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಸಕ ಡಾ.ಕೆ.ಸುಧಾಕರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಉಪ ವಿಭಾಗಾಧಿಕಾರಿ ಶಿವಸ್ವಾಮಿ, ಎಸ್‌ಪಿ ಕಾರ್ತಿಕ್ ರೆಡ್ಡಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !