ಮಮತೆ, ಸಮತೆ ಜೀವನದ ಮೌಲ್ಯಗಳಾಗಲಿ

7
ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಪ್ರೇರಣಾ ಕಾರ್ಯಾಗಾರದಲ್ಲಿ ಕವಿ ಜಯಂತ ಕಾಯ್ಕಿಣಿ ಕಿವಿಮಾತು

ಮಮತೆ, ಸಮತೆ ಜೀವನದ ಮೌಲ್ಯಗಳಾಗಲಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಶಿಕ್ಷಣಕ್ಕೆ ಮಿಗಿಲಾದ ಆಧ್ಯಾತ್ಮ ಬೇರಿಲ್ಲ. ಶಿಕ್ಷಕರು ತಲೆಯಿಂದ ಜಾತಿ, ಮತ, ಅಂತಸ್ತಿನ ಕಸವನ್ನು ತೊಡೆದು ಹಾಕಿ ಮಮತೆ ಮತ್ತು ಸಮತೆಯನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಅವರನ್ನು ಕೊನೆಯವರೆಗೆ ನೆನೆಯುತ್ತಾರೆ’ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತ ಭವನದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರು ಯಾವುದೇ ರಾಜಕೀಯ ಪಕ್ಷಪಾತಿಗಳಾಗಬಾರದು. ಅವರ ತಲೆಯಲ್ಲಿ ಜಾತಿ, ಮತ, ಬೇಧಗಳ ಕಸವಿದ್ದರೆ ಅದೇ ಕನ್ನಡಕದಿಂದ ವಿದ್ಯಾರ್ಥಿಗಳನ್ನು ನೋಡುವ ಅಪಾಯವಿದೆ. ಆದ್ದರಿಂದ ಆ ಕಸ ತೆಗೆಯುವುದಕ್ಕಾಗಿಯೇ ಕಲೆ, ಸಾಹಿತ್ಯ, ಸಂಗೀತದ ಮೊರೆ ಹೋಗಬೇಕು. ಇವತ್ತು ನಾವು ಬೆಳೆಯಲು ಹೊಸ ಸಾಮಾಜಿಕ ಮಾಧ್ಯಮಗಳ ಅಗತ್ಯವಿದೆ. ಆದರೆ ಅವುಗಳ ದಾಸರಾಗಬಾರದು’ ಎಂದು ಹೇಳಿದರು.

‘ಮನುಷ್ಯ ಲೋಕದಲ್ಲಿ ಆಸಕ್ತಿ ಇಲ್ಲದೆ ಹೋದರೆ ನಮ್ಮಷ್ಟು ನತದೃಷ್ಟರು ಬೇರಾರೂ ಇಲ್ಲ. ಅದರಿಂದ ಬದುಕಿನಲ್ಲಿ ಆನಂದವೇ ಇಲ್ಲದಂತಾಗುತ್ತದೆ. ಕೊನೆಗೆ ಒಂದು ರೀತಿಯ ಮನೋದಾಸ್ಯಕ್ಕೆ ಒಳಗಾಗಿ ಬಿಡುತ್ತೇವೆ. ಸರಳವಾಗಿ ಬದುಕುವವರಷ್ಟು ಆನಂದದಿಂದ, ಆತ್ಮಸಂತೋಷದಿಂದ ಇರುವವರು ಬೇರೊಬ್ಬರಿಲ್ಲ. ನಾವು ಸ್ವಂತ ಬುದ್ದಿಯಿಂದ ಜಗತ್ತು ನೋಡಬೇಕಿದೆ’ ಎಂದು ತಿಳಿಸಿದರು.

‘ಪ್ರಪಂಚದಲ್ಲಿರುವ ಎಲ್ಲರಿಗೂ ಎಲ್ಲಾ ಸಲವತ್ತುಗಳು ಸರಿಸಮನಾಗಿ ಸಿಗುವವರೆಗೂ ನಾನು ಸರಳವಾಗಿ ಬದುಕುತ್ತೇನೆ ಎನ್ನುವದಕ್ಕಿಂತ ದೊಡ್ಡ ಆಧಾತ್ಮ ಬೇರಿಲ್ಲ. ಸರಳವಾದ ಜೀವನ ಶೈಲಿ ನಮ್ಮಲ್ಲಿರುವ ಅನುಪಮವಾದ ಶಕ್ತಿ. ಆದ್ದರಿಂದ ಮಕ್ಕಳ ಎದುರು ಶಿಕ್ಷಕರು ಹಣ, ಅಧಿಕಾರವನ್ನು ವೈಭವೀಕರಿಸುವ ಮಾತುಗಳನ್ನು ಆಡಬೇಡಿ’ ಎಂದರು.

‘ಯಾವುದೇ ಕಾಲದ ಕೆಟ್ಟ ರಾಜಕಾರಣ ಜನರನ್ನು ಒಡೆಯಲು ನೋಡುತ್ತದೆ. ನಮ್ಮದು ಬದಲಾಗುತ್ತಿರುವ ಪ್ರತಿಮೆಗಳ, ಎಲ್ಲವೂ ಪಲ್ಲಟವಾಗುವ ಕಾಲವಿದು. ಇವತ್ತು ನಾವು ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಶಿಕ್ಷಣದ ಮೂಲಕ ಪಸರಿಸಬೇಕಿದೆ. ಎಲ್ಲರೂ ನಮ್ಮವರು ಎನ್ನುವ ಮೌಲ್ಯ ಕಲಿಸಬೇಕಿದೆ. ಇದಕ್ಕೆಲ ಮೊದಲು ಶಿಕ್ಷಕರಾದವರು ಕಲೆಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಶಿಕ್ಷಕರು ಮಕ್ಕಳನ್ನು ಪ್ರೀತಿಸಿ. ಅವರ ಕಣ್ಣಿಂದ ಹೊರಡುವ ಬೆಳಕಿನಿಂದ, ಬದುಕಿನಿಂದ ಸ್ಫೂರ್ತಿ ಪಡೆಯಿರಿ. ಮನಸು ವಿಶಾಲವಾಗಲಿ. ಆಗ ಸಂತೋಷ ನಿಮ್ಮದಾಗುತ್ತದೆ. ಅದು ಶಿಕ್ಷಣದ ಮೂಲಕ ನಿಜವಾದ ಆಧಾತ್ಮವಾಗಿ ಸಮತೆ, ಮಮತೆಯ ವಿಸ್ತರಣೆಯಾಗಿ ಮಕ್ಕಳಿಗೆ ತಲುಪುತ್ತದೆ’ ಎಂದು ತಿಳಿಸಿದರು.

ಸಾಯಿ ಬಾಬಾ ಅವರ ಸಂದೇಶ ವಾಹಕ ಮಧುಸೂಧನ್ ನಾಯ್ಡು, ಸತ್ಯಸಾಯಿ ಲೋಕಸೇವಾ ಸಂಸ್ಥೆಗಳ ಮಾರ್ಗದರ್ಶಿ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಸದಸ್ಯರಾದ ಕೆ.ಎಂ.ಮುನೇಗೌಡ, ಪಿ.ಎನ್.ಪ್ರಕಾಶ್, ಕೆ.ಸಿ.ರಾಜಾಕಾಂತ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಿವರಾಮರೆಡ್ಡಿ, ಶಿಕ್ಷಣ ತಜ್ಞ ಪ್ರೊ.ಎಂ.ಆರ್.ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಶಿವಣ್ಣ ರೆಡ್ಡಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !