ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಕೆಲಸ: ನಳಿನ್‌ಕುಮಾರ್

7

ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಕೆಲಸ: ನಳಿನ್‌ಕುಮಾರ್

Published:
Updated:

ಮಂಗಳೂರು: ‘ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಕೆಲಸ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶಿಕ್ಷಕ ವೃತ್ತಿಗೆ ದೊಡ್ಡ ಗೌರವವಿದೆ’ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನಗರದ ಸಂತ ಅಲೋಶಿಯಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಂಗಳೂರು ಉತ್ತರ ವಲಯ ಶಿಕ್ಷಕರ ದಿನಾಚರಣಾ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಸಹಯೋಗದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಿ, ವೈದ್ಯ, ವಿಜ್ಞಾನಿ, ವ್ಯಾಪಾರಿ ಸೇರಿದಂತೆ ಯಾವುದೇ ವೃತ್ತಿಯ ಜನರು ಹಾದಿ ತಪ್ಪಿದರೂ ದೇಶಕ್ಕೆ ದೊಡ್ಡ ಗಂಡಾಂತರ ಎದುರಾಗದು. ಆದರೆ, ಶಿಕ್ಷಕರು ಹಾದಿ ತಪ್ಪಿದರೆ ಇಡೀ ದೇಶವೇ ತಪ್ಪು ದಾರಿಯಲ್ಲಿ ಸಾಗುತ್ತದೆ. ಎಂತಹ ಕ್ಲಿಷ್ಟಕರ ಸ್ಥಿತಿ ಎದುರಾದರೂ ಶಿಕ್ಷಕರು ತಪ್ಪು ದಾರಿಯಲ್ಲಿ ಸಾಗಬಾರದು ಎಂದರು.

‘ಭಾರತದಲ್ಲಿ ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವನ್ನಾಗಿ ನೋಡುವುದಿಲ್ಲ. ಅದನ್ನು ಒಂದು ವ್ರತದಂತೆ ಪಾಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೋಧನೆ ಪ್ರವೃತ್ತಿಯಾಗಿ ಪರಿವರ್ತನೆ ಆಗುತ್ತಿದೆ. ಆದರೆ, ಎಂದಿಗೂ ಶಿಕ್ಷಕ ವೃತ್ತಿಯ ಘನತೆ ಕುಗ್ಗಿಲ್ಲ. ಮುಂದೆಯೂ ಅದನ್ನು ಹಾಗೆಯೇ ಉಳಿಸಬೇಕು’ ಎಂದು ಹೇಳಿದರು.

ಸಮಸ್ಯೆ ಹೇರಬಾರದು:

ದಿಕ್ಸೂಚಿ ಭಾಷಣ ಮಾಡಿದ ಮೂಲ್ಕಿ ವಿಜಯಾ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯಾಕುಮಾರಿ, ‘ಶಿಕ್ಷಕರು ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು. ವೈಯಕ್ತಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ನಗುಮುಖದಿಂದ ಪಾಠ ಮಾಡುವುದನ್ನು ಕಲಿಯಬೇಕು. ಬೋಧಿಸುವ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿಕೊಂಡರೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಸುಲಭ’ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂತ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೆರಾಲ್ಡ್ ಫುರ್ಟಾಡೊ, ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚಂಚಲಾಕ್ಷಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್, ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಜಯರಾಮ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್ ಕುಟಿನ್ಹೊ, ನೋಡಲ್ ಅಧಿಕಾರಿ ಉಸ್ಮಾನ್, ಉಪನ್ಯಾಸಕಿ ಮಂಜುಳಾ ಶೆಟ್ಟಿ, ಶಿಕ್ಷಕರ ಸಂಘದ ಪ್ರತಿನಿಧಿ ಜಯರಾಂ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !