ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಡಗರದ ನಡುವೆ ಗಜಮುಖನ ಜಪ

7
ಗಲ್ಲಿ ಗಲ್ಲಿಗಳಲ್ಲಿ ವೈವಿಧ್ಯಮಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಗಣೇಶೋತ್ಸವ ಸಮಿತಿಗಳು, ರಾತ್ರಿ ವೇಳೆ ಕುಟುಂಬ ಸಮೇತ ಜನರ ದರ್ಶನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಡಗರದ ನಡುವೆ ಗಜಮುಖನ ಜಪ

Published:
Updated:
Deccan Herald

ಚಿಕ್ಕಬಳ್ಳಾಪುರ: ಭಾದ್ರಪದ ಮಾಸದ ಚೌತಿಯ ದಿನವಾದ ಗುರುವಾರದಿಂದ ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಗಲ್ಲಿ ಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ, ನಗರ, ಪಟ್ಟಣ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ವಿಘ್ನವಿನಾಶಕನ ಮೂರ್ತಿಗಳಿಗೆ ನಿತ್ಯ ಬಗೆ ಬಗೆಯ ಪೂಜೆಗಳು ಸಲ್ಲಿಕೆಯಾಗುತ್ತಿವೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಿತಿಗಳು ಹಬ್ಬಕ್ಕೆ ಮೆರಗು ತುಂಬುತ್ತಿವೆ.

ನಗರದಲ್ಲಿ ಮನೆ ಮನೆಗಳಲ್ಲಿ ಕೂಡ ಗಜವದನನ ಆರಾಧನೆ ಬಹು ಜೋರಿನಿಂದಲೇ ನಡೆದಿದ್ದು, ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೋದಕ, ಕಡುಬು ಮಾಡಿ ನೈವೇದ್ಯ ಅರ್ಪಿಸುವ ಜತೆಗೆ ರಜೆಯ ಮೋಜಿನಲ್ಲಿ ನಾಗರಿಕರು ಹಬ್ಬದೂಟವನ್ನು ಸವಿದರು.

ಜನರು ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದರು. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು.

ಅದ್ಧೂರಿ ಅಲಂಕಾರ
ನಗರದ ಧರ್ಮಛತ್ರದ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಫೌಂಡೇಷನ್ ವತಿಯಿಂದ ಪ್ರತಿಷ್ಠಾಪಿಸಿರುವ ಪಳನಿ ಸುಬ್ರಮಣ್ಯ ಸ್ವಾಮಿ ಅವತಾರದ ಗಣಪತಿ ಎಲ್ಲರ ಆರ್ಕಷಣೆಯ ಕೇಂದ್ರಬಿಂದುವಾಗಿದೆ. ಶೇಷ ಶಯನ ಅನಂತ ಪದ್ಮನಾಭ ಸ್ವಾಮಿಯ ಪ್ರತಿಕೃತಿಯ ಪ್ರವೇಶದ್ವಾರ ಮನಮೋಹಕವಾಗಿದ್ದು, ಒಳ ಪ್ರವೇಶಿಸಿದರೆ ವಿಶಾಲ ಪ್ರದೇಶದಲ್ಲಿ ಗಣಪತಿಯ ಸುತ್ತಲೂ ಅಷ್ಟ ಗಣಪತಿ ಅವತಾರಗಳು ಗೋಚರಿಸುತ್ತವೆ.

ನಗರದ ಹಳೆಯ ಗಣೇಶೋತ್ಸವ ಸಮಿತಿ ವಿದ್ಯಾಗಣಪತಿ ಸೇವಾ ಸಂಘ ಈ ಬಾರಿ ತನ್ನ 59 ವಾರ್ಷಿಕೋತ್ಸವ ಪ್ರಯುಕ್ತ ಧರ್ಮಛತ್ರದ ರಸ್ತೆಯಲ್ಲಿರುವ ಲಕ್ಷ್ಮಿ ಸರಸ್ವತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಜ ದರ್ಬಾರ್‌ ವಿದ್ಯಾ ಗಣಪತಿಯನ್ನು ಪ್ರತಿಷ್ಠಾಪಿಸಿದೆ.

ಈ ಮೂರ್ತಿಗೆ ಪ್ರತಿ ದಿನ ಪ್ರಾಂತಃಕಾಲ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ನಿತ್ಯ ಸಂಜೆ 7 ಗಂಟೆಗೆ ಸಂಗೀತ ಕಛೇರಿ, ಸುಗಮ ಸಂಗೀತ, ವೀಣಾ ವಾದನ, ಭಜನೆ ಭಕ್ತಿಗೀತೆಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಗರದ ವಾಪಸಂದ್ರ ಹಾಲಿನ ಡೇರಿ ಮುಂಭಾಗದಲ್ಲಿ ಶ್ರೀ ವಿದ್ಯಾ ಗಣಪತಿ ಕನ್ನಡಾಂಬೆ ಗೆಳೆಯರ ಸಂಘದ ವತಿಯಿಂದ ಸಿಂಹಾರೂಢ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಬೃಹತ್ ಗಾತ್ರದ ಲಿಂಗದ ಆಕಾರದಲ್ಲಿ ನಿರ್ಮಿಸಿರುವ ಮಂಟಪ ಮನಮೋಹಕವಾಗಿದ್ದು, ರಾತ್ರಿ ವೇಳೆ ಭಕ್ತರನ್ನು ಸೆಳೆಯುತ್ತಿದೆ. ನಗರದ ಮುನ್ಸಿಪಲ್‌ ಬಡಾವಣೆಯ ಸಿದ್ಧಿ ವಿನಾಯಕ ಗೆಳೆಯರ ಸಂಘವು ಬೃಹತ್ ಗಾತ್ರದ ಪಂಚಮುಖಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ.

ಗಂಗಮ್ಮ ಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ಓಂಕಾರ ಗಣಪತಿ ಯುವಕರ ಸಂಘದ 29ನೇ ವಾರ್ಷಿಕೋತ್ಸವದ ಪ್ರಯುಕ್ತ ಐದು ಹೆಡೆಯ ಸರ್ಪದ ಮೇಲೆ ಆಸೀನನಾದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !