ಮಹಿಮಾಪುರ: ಆಲೋಚನೆಗೆ ಹಾಸ್ಯ ಲೇಪನ, 5ಕ್ಕೆ ನಾಟಕ ಪ್ರದರ್ಶನ

7
ನೋಡ ಬನ್ನಿ, ನಕ್ಕು ನಲಿಯಬನ್ನಿ

ಮಹಿಮಾಪುರ: ಆಲೋಚನೆಗೆ ಹಾಸ್ಯ ಲೇಪನ, 5ಕ್ಕೆ ನಾಟಕ ಪ್ರದರ್ಶನ

Published:
Updated:
Deccan Herald

ಮಂಡ್ಯ: ಮೌಢ್ಯ, ಧರ್ಮಾಂಧತೆ, ಜಾತಿ ರಾಜಕಾರಣ, ಮೇಲ್ವರ್ಗ–ಕೆಳವರ್ಗ, ಆಷಾಢಭೂತಿ ನಡವಳಿಕೆಗಳನ್ನು ವಿಡಂಬನೆ ಮಾಡುವ ರಂಗಕರ್ಮಿ ಪ್ರಸನ್ನ ಅವರ ‘ಮಹಿಮಾಪುರ’ ನಾಟಕ ಪ್ರದರ್ಶನ ಶುಕ್ರವಾರ ನಗರದ ಪಿಇಎಸ್‌ ವಿವೇಕಾನಂದ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಪ್ರಯೋಗಶೀಲ ರಂಗ ನಿರ್ದೇಶಕ ಮಂಜುನಾಥ ಎಲ್‌. ಬಡಿಗೇರ ನಾಟಕ ನಿರ್ದೇಶನ ಮಾಡಿದ್ದಾರೆ. ಜನದನಿ ಸಾಂಸ್ಕೃತಿಕ ಟ್ರಸ್ಟ್‌ನ ಕಲಾವಿದರು ಪಾತ್ರವಾಗಿದ್ದಾರೆ. ಬಹಳ ಕಡಿಮೆ ದಿನಗಳ ತಾಲೀಮಿನಲ್ಲಿ ನಾಟಕ ರಂಗವೇರುತ್ತಿದ್ದು ನಿರ್ದೇಶಕರ ತರಬೇತಿ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಹಿರಿ– ಕಿರಿಯ ಕಲಾವಿದರಿಗೆ ತರಬೇತಿ ನೀಡಿರುವ ಮಂಜುನಾಥ ಬಡಿಗೇರರು ವೃತ್ತಿಪರತೆಯ ಸ್ಪರ್ಶದೊಂದಿಗೆ ರಂಗರೂಪ ಕೊಟ್ಟಿದ್ದಾರೆ. ಹೊಸದಾಗಿ ರಂಗವೇರುತ್ತಿರುವ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದು ಪ್ರಬುದ್ಧ ನಿರ್ದೇಶಕರ ಮೂಲಕ ರಂಗವೇರುತ್ತಿರುವ ಸಂತಸ ಅವರದಾಗಿದೆ.

ದಿಕ್ಕು ತಪ್ಪಿಸುವ ಪುರೋಹಿತ್ಯಶಾಹಿಗಳು, ವ್ಯವಹಾರವಾಗುತ್ತಿರುವ ಶಿಕ್ಷಣ ವ್ಯವಸ್ಥೆ, ಐಷಾರಾಮಿ ಮಠಾಧೀಶರು, ಉದ್ಯಮಪತಿಗಳ ಅವ್ಯವಹಾರ, ಬೆಳೆಯುತ್ತಿರುವ ನಗರಗಳು, ಎತ್ತರೆತ್ತರದ ಕಟ್ಟಡಗಳು, ಸಣ್ಣದಾಗುತ್ತಿರುವ ಹಳ್ಳಿಗಳು, ಸಮೂಹ ಮಾಧ್ಯಮಗಳ ಹಾವಳಿ ಇವೇ ಮೊದಲಾದ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ. 21ನೇ ಶತಮಾನದಲ್ಲಿ ಆದ ಬದಲಾವಣೆ, ಅದರಿಂದ ಅನುಭವಿಸುತ್ತಿರುವ ಪರಿಣಾಮಗಳನ್ನು ತಿಳಿ ಹಾಸ್ಯ, ವಿಡಂಬನೆಯ ಮೂಲಕ ಗಂಭೀರ ಆಲೋಚನೆಯನ್ನು ಪ್ರೇಕ್ಷಕರ ಮನದಾಳದಲ್ಲಿ ಉಳಿಸುವ ಪ್ರಯತ್ನ ನಾಟಕದಲ್ಲಿದೆ.

1987ರಲ್ಲಿ ಬರೆದ ಈ ನಾಟಕ ಇಂದಿನ ಪರಿಸ್ಥಿತಿಯನ್ನೂ ಅಪ್ಪಿಕೊಳ್ಳುತ್ತದೆ. ನೋಡುಗನ ಮನಸ್ಸು ತಲುಪಿ ಅವನಿಗೆ ಯೋಚನೆಯ ಬೀಜ ಬಿತ್ತುವ ಪ್ರಯತ್ನ ರಂಗಕೃತಿಯಲ್ಲಿದೆ. ಪ್ರೇಕ್ಷಕರ ಅಭಿರುಚಿ ಅನುಸರಿಸಿ ಹಾಸ್ಯ ರಸದ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ತುಂಬುವ ಯತ್ನದಲ್ಲಿ ರಂಗಕರ್ಮಿ ಯಶಸ್ವಿಯಾಗಿದ್ದಾರೆ. ಪೌರಾಣಿಕ ನಾಟಕಗಳ ತವರು ಸಕ್ಕರೆ ನಾಡಿನಲ್ಲಿ ಅಪರೂಪಕ್ಕೆ ಎಂಬಂತೆ ಆಧುನಿಕ ರಂಗ ಪ್ರಯೋಗವೊಂದು ಪ್ರದರ್ಶನಗೊಳ್ಳುತ್ತಿದೆ.

ನಿರ್ದೇಶಕರು: ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿರುವ ಮಂಜುನಾಥ ಎಲ್‌ ಬಡಿಗೇರ ನಟ, ನಿರ್ದೇಶಕ, ತಂತ್ರಜ್ಞರಾಗಿ ಭರವಸೆ ಮೂಡಿಸಿದ್ದಾರೆ. ನೀನಾಸಂ ತಿರುಗಾಟದಲ್ಲಿ ನಟರಾಗಿ ಜನಮೆಚ್ಚುಗೆ ಗಳಿಸಿದ್ದಾರೆ. ರಾಜ್ಯದ ಹಲವು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಾಗೃತಿ ಮೂಡಿಸಿದ್ದಾರೆ. ಬೀದಿ ನಾಟಕದಲ್ಲೂ ಕೃಷಿ ಮಾಡಿರುವ ಅವರು ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಸಾವಿರಾರು ಪ್ರದರ್ಶನ ಆಯೋಜಿಸಿದ್ದಾರೆ.

ರಂಗ ಸಂಸ್ಥೆ, ರೆಪರ್ಟರಿಗಳು ಹಾಗೂ ಸಂಘಟನೆಗಳ ರಂಗಾಧ್ಯಯನ ಶಿಬಿರದಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದಾರೆ. ಮೂರು ಬಾರಿ ರಾಜ್ಯಮಟ್ಟದ ‘ಉತ್ತಮ ಯುವನಿ ರ್ದೇಶಕ’ ಗೌರವಕ್ಕೂ ಪಾತ್ರರಾಗಿದ್ದಾರೆ. ಕಾವ್ಯಾತ್ಮಹ ಅಭಿನಯ ಶೈಲಿಯ ಹಡುಕಾಟದಲ್ಲಿರುವ ಇವರು ಕೇಂದ್ರ ಸಂಸ್ಕೃತಿ ಸಚಿವಾಲಯದ ಫೆಲೊಶಿಪ್‌ ಪಡೆದಿದ್ದಾರೆ.

ಹರಿಣಾಭಿಸರಣ, ಮಿಸ್‌ ಸದಾರಮೆ, ಚಿತ್ರಪಟ, ಶೂದ್ರ ತಪಸ್ವಿ, ಸ್ವೀತಾಸ್ವಯಂವರಂ, ಸಂದೇಹ ಸಾಮ್ರಾಜ್ಯ, ಧರ್ಮಪುರಿಯ ದೇವದಾಸಿ, ಚಿರಕುಮಾರ ಸಭಾ, ಪ್ರಮೀಳಾರ್ಜುನೀಯಂ ಮುಂತಾದ ನಾಟಕಗಳ ನಿರ್ದೇಶನ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಸಮಷ್ಟಿ ರಂಗತಂಡದಲ್ಲಿ ರಂಗಪ್ರಯೋಗದಲ್ಲಿ ತೊಡಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !