ಚದುರಂಗ ಅಂಗಳದಲ್ಲಿ ಗ್ರಾಮೀಣ ಪ್ರತಿಭೆ ಮಿಂಚು

7
ದಕ್ಷಿಣ ಭಾರತ ಅಂತರಕಾಲೇಜು ಮಟ್ಟಕ್ಕೆ ಆಯ್ಕೆಯಾಗಿರುವ ರಕ್ಷಿತಾ

ಚದುರಂಗ ಅಂಗಳದಲ್ಲಿ ಗ್ರಾಮೀಣ ಪ್ರತಿಭೆ ಮಿಂಚು

Published:
Updated:
Deccan Herald

ಹುಣಸೂರು: ಬುದ್ದಿವಂತರ ಆಟ ಎಂದೇ ಪರಿಗಣಿಸಿರುವ ‘ಚದುರಂಗ’ದಲ್ಲಿ ಗ್ರಾಮೀಣ ಪರಿಸರದ ವಿದ್ಯಾರ್ಥಿನಿ ದಕ್ಷಿಣ ಭಾರತ ಅಂತರಕಾಲೇಜು ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ, ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವ್ಯಾಸಂಗ ಮಾಡುತ್ತಿರುವ, ರಾಯನಹಳ್ಳಿ ಗ್ರಾಮದ ಎಂ.ರಕ್ಷಿತಾ ಸ್ವತಃ ಪರಿಶ್ರಮ, ಅಭ್ಯಾಸದಿಂದ ಈಗ ಮೈಸೂರು ವಿ.ವಿ.ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದಾರೆ.

ಕೃಷಿಕರಾದ ಮಂಜು ಮತ್ತು ಅನಸೂಯ ಪುತ್ರಿಯಾದ ರಕ್ಷಿತಾ ತನ್ನ ಆರಂಭಿಕ ಶಿಕ್ಷಣ ಸ್ವಗ್ರಾಮದಲ್ಲಿ ಪಡೆದು, ಪಿಯುಸಿಗೆ ಹುಣಸೂರು ನಗರಕ್ಕೆ ಬಂದರು.  ದ್ವಿತಿಯ ಪಿ.ಯುನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಾಲ್ಲೂಕಿಗೆ ಮೊದಲಿಗರೂ ಆದರು. ಆ ಮೂಲಕ ಓದು, ಕ್ರೀಡೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.

‘ಚೆಸ್‌ ಎಂದರೆ ನನಗೆ ಏನೂ ಎಂದು ತಿಳಿದಿರಲಿಲ್ಲ. ಹಗರನಹಳ್ಳಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್‌ ಕುಮಾರ್‌ ಅವರ ಪ್ರೇರಣಯಿಂದ ಚೆಸ್‌ ಆಡಲು ಆರಂಭಿಸಿದೆ. ನಂತರ ಸತತ ಅಭ್ಯಾಸದಿಂದ ಇಂದು ಮೈಸೂರು ವಿ.ವಿ. ಪ್ರತಿನಿಧಿಸುವ ಅವಕಾಶ ಸಿಕ್ಕಿದೆ’ ಎಂದು ರಕ್ಷಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹೋದರ ರಾಜೇಶ್‌ನೊಂದಿಗೆ ಆಟವಾಡುತ್ತಿದೆ. ಕೆಲವೊಮ್ಮೆ ಒಬ್ಬಳೇ ಆಟವಾಡುತ್ತಾ, ಒಂದೊಂದು ನಡೆಯ ಸೂಕ್ಷತೆಯನ್ನು ಗ್ರಹಿಸುತ್ತಾ ಆಟದ ಎಲ್ಲ ಹಂತಗಳನ್ನು ಕರಗತ ಮಾಡಿಕೊಂಡೆ ಎಂದು ಹೇಳುತ್ತಾರೆ ಅವರು. 

ಪ್ರೌಢಶಾಲೆ ಹಂತದಲ್ಲಿ ಚೆಸ್‌ ಟೂರ್ನಿಗಳಲ್ಲಿ ಭಾಗವಹಿಸತೊಡಗಿದೆ. ಅಂದಿನಿಂದ ಅನೇಕ ಸೋಲು ಗೆಲುವುಗಳನ್ನು ಕಂಡೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಅಭ್ಯಾಸದತ್ತ ಚಿತ್ತವನ್ನು ನೆಟ್ಟಿದ್ದೆ. ಬಳಿಕ ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಜಿಲ್ಲಾಮಟ್ಟದ ಟೂರ್ನಿಯಲ್ಲಿ ಕಾಲೇಜು, ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಪಡೆದ ಖುಷಿ ಜೀವನದಲ್ಲಿ ಎಂದಿಗೂ ಮರೆಯುವಂತಿಲ್ಲ ಎಂದು ಸ್ಮರಿಸುತ್ತಾರೆ ರಕ್ಷಿತಾ.

ಈಗ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಕಲಿಕೆ ಹಾಗೂ ತಂತ್ರಜ್ಞಾನ ಬಳಸಿ ಚೆಸ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ ಕಂಪ್ಯೂಟರ್‌ನೊಂದಿಗೆ ಆಟ ಆಡಿ ನಿರಂತರ ಕಲಿಕೆ ನಡೆಸುತ್ತಿದ್ದೇನೆ.  ಪದವಿ ಬಳಿಕ ಮೈಸೂರಿಗೆ ತೆರಳಿ ಉತ್ತಮ ತರಬೇತುದಾರರಿಂದ ತರಬೇತಿ ಪಡೆದು ದೇಶವನ್ನು ಪ್ರತಿನಿಧಿಸಬೇಕು. ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಪಡೆಯಬೇಕು ಎಂಬ ಗುರಿ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !