ಮೊದಲ ಕಂತು ಬಿಡುಗಡೆಗೂ ತಿಣುಕಾಟ

7
ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ₹2500 ಕೋಟಿ ಘೋಷಣೆ * ಅರ್ಧ ವರ್ಷ ಕಳೆದರೂ ಬಾರದ ಅನುದಾನ

ಮೊದಲ ಕಂತು ಬಿಡುಗಡೆಗೂ ತಿಣುಕಾಟ

Published:
Updated:

ಬೆಂಗಳೂರು: ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ₹2,500 ಕೋಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದ ರಾಜ್ಯ ಸರ್ಕಾರ, ಈವರೆಗೆ ಚಿಕ್ಕಾಸು ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಮೊದಲ ಕಂತಿನ ಹಣ ಬಿಡುಗಡೆಗೂ ತಿಣುಕಾಡುತ್ತಿದೆ.

ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ಎರಡು ವರ್ಷಗಳಲ್ಲಿ ₹9,791 ಕೋಟಿ ನೀಡಲಾಗಿದೆ ಎಂದು ಕಾಂಗ್ರೆಸ್‌ ಸರ್ಕಾರ ಹೇಳಿಕೊಂಡಿತ್ತು. ಆದರೆ, ₹5,500 ಕೋಟಿಯಷ್ಟೇ ಬಿಡುಗಡೆಯಾಗಿತ್ತು. ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ, ಪಾಲಿಕೆಗೆ ಈ ವರ್ಷ ₹2,500 ಕೋಟಿ ನೀಡುವುದಾಗಿ ಪ್ರಕಟಿಸಿದ್ದರು. ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಮುಂದುವರಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದರು. ಆದರೆ, ಘೋಷಣೆ ಮಾಡಿದಷ್ಟು ಅನುದಾನ ಈ ವರ್ಷವೇ ಬಿಡುಗಡೆಯಾಗುವ ಬಗ್ಗೆ ಪಾಲಿಕೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಟೆಂಡರ್‌ಶ್ಯೂರ್, ವೈಟ್‌ಟಾಪಿಂಗ್‌, ಕೆರೆಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಪ್ರಸ್ತಾವ ಸಲ್ಲಿಸಿತ್ತು. ಈ ಕಡತವನ್ನು ಹಣಕಾಸು ಇಲಾಖೆಗೆ ನಗರಾಭಿವೃದ್ಧಿ ಇಲಾಖೆ ಕಳುಹಿಸಿತ್ತು.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದಲ್ಲಿ ಸೆಪ್ಟೆಂಬರ್‌ 26ರಂದು ನಡೆದ ಸಭೆಯಲ್ಲಿ, ‘ಪಾಲಿಕೆಗೆ ಮೊದಲ ಕಂತಿನ ₹580 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದಕ್ಕೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸಿ ಅಕ್ಟೋಬರ್‌ 5ರೊಳಗೆ ಎರಡನೇ ಕಂತಿನ ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಸುವಂತೆ ವಿಜಯಭಾಸ್ಕರ್ ಸೂಚಿಸಿದ್ದರು.

ಅಕ್ಟೋಬರ್‌ 6ರಂದು ನಡೆದಿದ್ದ ಸಮನ್ವಯ ಸಮಿತಿ ಸಭೆಯಲ್ಲಿ, ‘ಈ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ’ ಎಂದು ನಗರಾಭಿವೃದ್ಧಿ ಹಾಗೂ ಪಾಲಿಕೆ ಅಧಿಕಾರಿಗಳು ಗಮನ ಸೆಳೆದಿದ್ದರು.

‘ಮೊದಲ ಕಂತಿನ ಹಣವೇ ಇನ್ನೂ ಬಿಡುಗಡೆಯಾಗಿಲ್ಲ. ಈ ಅನುದಾನ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ಅವರಿಗೆ ವಿಜಯಭಾಸ್ಕರ್‌ ಅಕ್ಟೋಬರ್‌ 6ರಂದು ಸೂಚಿಸಿದ್ದರು. 
ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿ ವಾರ ಕಳೆದರೂ ಹಣ ಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ದೂರಿದರು.

‘ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆಯ ಅಧಿಕಾರಿಗಳು ಏನಾದರೂ ನೆಪ‌ಗಳನ್ನು ಹೇಳುತ್ತಾರೆ. ನಾಲ್ಕು ತಿಂಗಳು ಕಳೆದರೆ ಇನ್ನೊಂದು ಬಜೆಟ್‌ ಮಂಡನೆ ಆಗಲಿದೆ. ಘೋಷಣೆ ಮಾಡಿರುವ ಕಾಮಗಾರಿಗಳನ್ನು ಮುಗಿಸುವುದು ಹೇಗೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು. 

‘ರೈತರ ಸಾಲ ಮನ್ನಾಕ್ಕೆ ₹44 ಸಾವಿರ ಕೋಟಿ ಕ್ರೋಡೀಕರಣ ಮಾಡಬೇಕಿದೆ. ಹೀಗಾಗಿ, ಘೋಷಣೆ ಮಾಡಿದಷ್ಟು ಹಣ ಬಿಡುಗಡೆ ಕಷ್ಟ’ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದೇವೆ. ಈ ಸಂಬಂಧ ಪಾಲಿಕೆಯಲ್ಲೇ ಮಾಹಿತಿ ಕೇಳಿ’ ಎಂದು ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಪವನ್‌ ಕುಮಾರ್‌ ಮಾಲಪಾಟಿ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !