ವಿಮಾನ ನಿಲ್ದಾಣ:ಖರ್ಗೆ ಯಾನ

7

ವಿಮಾನ ನಿಲ್ದಾಣ:ಖರ್ಗೆ ಯಾನ

Published:
Updated:
ವಿಮಾನ ನಿಲ್ದಾಣ:ಖರ್ಗೆ ಯಾನ

ಗುಲ್ಬರ್ಗ: ನಗರ ಹೊರವಲಯದ ಶ್ರೀನಿವಾಸ ಸರಡಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪರಿಶೀಲನೆ ನಡೆಸಿದರು.ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಅಂತರರಾಷ್ಟ್ರೀಯ ಮಾದರಿಯಲ್ಲಿ 300 ಪ್ರಯಾಣಿಕ ಸಾಮರ್ಥ್ಯದ ಬೋಯಿಂಗ್, ಆ್ಯರ್‌ಬಸ್ ಇಳಿಯುವ ಸಾಮರ್ಥ್ಯದ ರನ್‌ವೇ ನಿರ್ಮಿಸಿ ಎಂದು ಸಲಹೆ ನೀಡಿದರು. ನಿಲ್ದಾಣಕ್ಕೆ ಜಾಗ ನೀಡುವಲ್ಲಿ ಪಾತ್ರ ವಹಿಸಿದ ಶ್ರೀನಿವಾಸ ಸರಡಗಿ ಜನತೆ ಹಾಗೂ ಎಂ.ಆರ್.ತಂಗಾ ಕೊಡುಗೆಗಳನ್ನು ಸ್ಮರಿಸಿದರು.ಮೊದಲ ಹಂತ: ಶ್ರೀನಿವಾಸ ಸರಡಗಿಯ 698 ಎಕರೆ 4 ಗುಂಟೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. ಮೊದಲ ಹಂತವಾಗಿ 90 ಮಂದಿ ಸಾಮರ್ಥ್ಯದ ಸಣ್ಣ ವಿಮಾನಕ್ಕೆ ಅನುಕೂಲವಾದ 1.91 ಕಿ.ಮೀ. ಉದ್ದದ ರನ್‌ವೇ (ವಿಮಾನ ಏರಿಳಿಯುವ ಪಥ) ನಿರ್ಮಿಸಲಾಗುವುದು.

 

ಈ ಪಥವು ಎರಡು ಮೀಟರ್ ದಪ್ಪ, 45 ಮೀಟರ್ ಅಗಲ ಇರಲಿದೆ. ಇದರ ಹೊರಗೆ 52 ಮೀಟರ್ ಅಗಲದ ಹೆಚ್ಚುವರಿ ರಕ್ಷಣಾ ಪಟ್ಟಿ, ಎಪ್ರಾನ್ (ಪ್ರಯಾಣಿಕರನ್ನು ಹತ್ತಿಸಲು-ಇಳಿಸಲು ವಿಮಾನ ನಿಲ್ಲುವ ಸ್ಥಳ), ಅಗ್ನಿ ಸುರಕ್ಷತಾ ದಾರಿ, ಅಗ್ನಿ ಸುರಕ್ಷತಾ ಕೇಂದ್ರ, ಎಟಿಸಿ (ವಾಯು ಸಂಚಾರ ನಿಯಂತ್ರಣ ಗೋಪುರ), ಐಸೋಲೇಷನ್ ಬೇ (ಅಪಾಯ ಸಂದರ್ಭ ಸುರಕ್ಷಿತ ನಿಲುಗಡೆ ಸ್ಥಳ), ಟರ್ಮಿನಲ್ ಬಿಲ್ಡಿಂಗ್ (ಪಥದ ಅಂತ್ಯದ ಕಟ್ಟಡಗಳು), ಸಂಪರ್ಕಿಸುವ ರಸ್ತೆಗಳು ಮೊದಲ ಹಂತದಲ್ಲಿ ನಿರ್ಮಾಣಗೊಳ್ಳಲಿವೆ.ಅಂದಾಜು 95 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದನ್ನು ಗ್ರೀನ್‌ಫೀಲ್ಡ್ (ನೆಲದಿಂದ ನಿರ್ಮಿಸುವ) ಕಾಮಗಾರಿ ಎನ್ನುತ್ತಾರೆ ಎಂದು ಗುತ್ತಿಗೆದಾರ ಸಂಸ್ಥೆ ರಾಹಿ (ರೀಜನಲ್ ಆ್ಯರ್‌ಪೋರ್ಟ್- ಹೋಲ್ಡಿಂಗ ಇಂಟರ್‌ನಲ್)ಯ ಯೋಜನಾ ವ್ಯವಸ್ಥಾಪಕ ವಿಜಯಕುಮಾರ ಡಿ. ವಿಜಯಕುಮಾರ್ ಸಚಿವರಿಗೆ ವಿವರಿಸಿದರು.ರನ್‌ವೇ ಕಾಮಗಾರಿಯು ಆರಂಭಗೊಂಡಿದ್ದು, ಅಡಿಪಾಯ ತೆಗೆದು ಜಲ್ಲಿ ಹಾಸಿಗೆ ಹಾಕುವ ಕಾರ್ಯ ನಡೆಯುತ್ತಿದೆ. ಕೇವಲ 6 ಸೆಂಟಿ ಮೀಟರ್ ಕಪ್ಪು ಮಣ್ಣಿನ ಕೆಳಗೆ ಕಲ್ಲುಹಾಸು ಸಿಕ್ಕಿರುವುದು ಕಾಮಗಾರಿಗೆ ನೆರವಾಗಿದೆ. ಒಟ್ಟು 2 ಮೀಟರ್ ದಪ್ಪದ ರನ್‌ವೇಯು ಮುಂದಿನ 60 ವರ್ಷಗಳ ಕಾಲ 300 ಪ್ರಯಾಣಿಕ ವಿಮಾನವು ಭೂಸ್ಪರ್ಶ ಮಾಡಿದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.ಎರಡನೇ ಹಂತದಲ್ಲಿ  1.91ರಿಂದ 3.2 ಕಿ.ಮೀ. ತನಕದ ರನ್‌ವೇ ಹಾಗೂ ಹ್ಯಾಂಗರ್ಸ್‌ (ವಿಮಾನ ನಿಲುಗಡೆ ಮಾಡುವ ಸ್ಥಳ) ನಿರ್ಮಾಣಗೊಳ್ಳಬೇಕು. ಎರಡೂ ಹಂತಗಳು ಸೇರಿ ನಿರ್ಮಾಣ ವೆಚ್ಚವು 185 ಕೋಟಿ ರೂಪಾಯಿ ಆಗಲಿದೆ. ಇದಕ್ಕೆ ಹೆಚ್ಚುವರಿ 40 ಎಕರೆ ಜಾಗ ಭೂಸ್ವಾಧೀನ ಪಡಿಸಬೇಕಾಗಿದೆ ಎಂದು ನಿಲ್ದಾಣ ತಾಂತ್ರಿಕ ಸಮಾಲೋಚಕ ಸಂಸ್ಥೆ ಫಿಶರ್‌ಮನ್ ಪ್ರಭು ಸಂಸ್ಥೆಯ ಮುಖ್ಯಸ್ಥ ಪಿ.ಡಿ.ಚವ್ಹಾಣ  ತಿಳಿಸಿದರು.ಜಿಲ್ಲಾಧಿಕಾರಿ: ಕಾರ್ಪೋರೇಷನ್, ದೇನಾ, ಬಾಬ್ಸ್ ಮತ್ತಿತರ ಬ್ಯಾಂಕ್‌ಗಳು ಆರ್ಥಿಕ ನೆರವು ನೀಡಿವೆ. ಭೂ ಸ್ವಾಧೀನ ಮತ್ತಿತರ ಕಾರ್ಯಕ್ಕಾಗಿ ಸರ್ಕಾರವು 25-30 ಕೋಟಿ ರೂಪಾಯಿ ಈಗಾಗಲೇ ವೆಚ್ಚ ಮಾಡಿದೆ. ವಿಮಾನ ನಿಲ್ದಾಣವನ್ನು ಪ್ರತಿ ಎಕರೆಗೆ ವರ್ಷಕ್ಕೆ 15,111 ರೂಪಾಯಿಯಂತೆ (ಮೂರು ವರ್ಷಕ್ಕೊಮ್ಮೆ ಶೇ 10 ಏರಿಸುವ ಷರತ್ತಿನೊಂದಿಗೆ) 30 ವರ್ಷಗಳ ಗುತ್ತಿಗೆ ನೀಡಲಾಗಿದೆ.

 

ಗುತ್ತಿಗೆ ಕಂಪೆನಿ ಹಾಗೂ ಸರ್ಕಾರ ಬಯಸಿದಲ್ಲಿ, ಮುಂದಿನ 30 ವರ್ಷಕ್ಕೆ ಅವಧಿ ವಿಸ್ತರಿಸಬಹುದು. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಯೋಜನೆ ಅಡಿಯಲ್ಲಿ `ನಿರ್ಮಿಸು, ನಿರ್ವಹಿಸು, ವರ್ಗಾಯಿಸು~ (ಬಿಲ್ಡ್ ಆಪರೇಟ್ ಟ್ರಾನ್ಸ್‌ಪರ್-ಬಿಒಟಿ) ಯೋಜನೆ ಇದಾಗಿದೆ. ಒಟ್ಟು ಪ್ರಕ್ರಿಯೆಯು 2001ರಲ್ಲಿ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ವಿವರಿಸಿದರು.ಶಾಸಕ ಡಾ. ಶರಣಪ್ರಕಾಶ ಪಾಟೀಲ್, ಎಂಜಿನಿಯರ್ ನಂಚರಯ್ಯ, ಸಾಬಲೆ ತುಕಾರಾಮ, ಜಿ.ಪಂ. ಮಾಜಿ ಸದಸ್ಯ ಅಂಬಾರಾಯ ಅಷ್ಟಗಿ, ಭೀಮರಾವ ಟಿ.ಟಿ. ಮತ್ತಿತರರು ಇದ್ದರು. ಹೀಗಿದೆ ನಿಲ್ದಾಣ: ಕಂಪೆನಿಗೆ ನೀಡಿರುವ ಒಟ್ಟು 692 ಎಕರೆ ಜಾಗದ ಪೈಕಿ 371 ಎಕರೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡರೆ, ಇನ್ನುಳಿದ 321 ಎಕರೆ ಪ್ರದೇಶದಲ್ಲಿ ವೈಮಾನಿಕ, ಎಲೆಕ್ಟ್ರಾನಿಕ್ಸ್, ತೋಟಗಾರಿಕೆ, ಪುಷ್ಪೋದ್ಯಮಕ್ಕೆ ಸಂಬಂಧಿಸಿದ ಕೈಗಾರಿಕೆಗಳನ್ನು, ಶಿಕ್ಷಣ ಸಂಸ್ಥೆ ಸ್ಥಾಪಿಸುವ ಯೋಜನೆಯನ್ನು ರಾಹಿ ಹೊಂದಿದೆ. ಇದರೊಂದಿಗೆ ರಾಹಿ ಕಂಪೆನಿ ಸ್ವತಃ ಗುಲ್ಬರ್ಗದಿಂದ ವಿವಿಧ ಸ್ಥಳಗಳಿಗೆ ಸಣ್ಣ ವಿಮಾನ ಸೇವೆ ಒದಗಿಸಲಿದೆ.  ಕಾಮೆಟ್ ಇನ್ಫ್ರಾ ಡೆವಲಪ್‌ಮೆಂಟ್ಸ್ ಪ್ರೈ.,ಲಿ. ಹಾಗೂ ಐಎಲ್ ಆ್ಯಂಡ್ ಎಫ್‌ಎಸ್ ಟ್ರಾನ್ಸ್‌ಪೋರ್ಟೆಷನ್ ನೆಟ್‌ವರ್ಕ್ ಕಂಪೆನಿಗಳು ಜಂಟಿಯಾಗಿ `ರೀಜನಲ್ ಏರ್‌ಪೋರ್ಟ್ ಹೋಲ್ಡಿಂಗ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್~ (ರಾಹಿ)ಯನ್ನು ಸ್ಥಾಪಿಸಿವೆ. 2007ರಲ್ಲಿ ಗುಲ್ಬರ್ಗ ವಿಮಾನನಿಲ್ದಾಣ ಕಾಮಗಾರಿ ಗುತ್ತಿಗೆ ಪ್ರಕ್ರಿಯೆ ನಡೆದಾಗ, ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ಸ್‌ ಮಾಲೀಕರ ಒಡೆತನದ ಮೇತಾಸ್ ಕಂಪೆನಿ ಗುತ್ತಿಗೆ ಪಡೆದಿತ್ತು. ಇದೀಗ ಮೇತಾಸ್ ಕಂಪೆನಿಯನ್ನು ಐಎಲ್ ಆ್ಯಂಡ್ ಎಫ್‌ಎಸ್ ಸ್ವಾಧೀನ ಮಾಡಿಕೊಂಡಿದೆ. ಆ ನಂತರ ಕಾಮೆಟ್‌ನೊಂದಿಗೆ ಸೇರಿಕೊಂಡು ಶೇಕಡಾ 40ರಷ್ಟು ಬಂಡವಾಳ ಹೂಡಿಕೆಯೊಂದಿಗೆ ರಾಹಿಯನ್ನು ಸ್ಥಾಪಿಸಿವೆ.ಗುಲ್ಬರ್ಗ ವಿಮಾನ ನಿಲ್ದಾಣವು ದೇಶದಲ್ಲೆ ಮೊದಲ ಖಾಸಗಿ ಪ್ರಾದೇಶಿಕ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆ ಹೊಂದಲಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿರುವ ವಿಮಾನ ನಿಲ್ದಾಣಗಳಲ್ಲಿರುವ ರನ್‌ವೇಗಿಂತಲೂ ಗುಲ್ಬರ್ಗ ವಿಮಾನ ನಿಲ್ದಾಣದ ರನ್‌ವೇ ವಿಸ್ತಾರ ಹೆಚ್ಚಳವಾಗಲಿದೆ. ಹೀಗಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ಪಡೆಯಲು ಕಷ್ಟಕರವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry