ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

7

ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

Published:
Updated:

ತಮಿಳುನಾಡು: ‘ಸರ್ಕಾರ್’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದ ಸುಳಿಯಲ್ಲಿ ಸಿಲುಕಿದ್ದು, ಎಐಎಡಿಎಂಕೆ ನೇತೃತ್ವದ ಸರ್ಕಾರವನ್ನು ಅಣಕಿಸುವಂತಹ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಪಕ್ಷದ ಮುಖಂಡರು ಪಟ್ಟು ಹಿಡಿದಿದ್ದಾರೆ.

ಸರ್ಕಾರ್‌ ಸಿನಿಮಾದ ನಿರ್ದೇಶಕ ಎ.ಆರ್‌.ಮುರುಗದಾಸ್‌ ಅವರನ್ನು ಬಂಧಿಸಲಾಗುತ್ತದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ಸಾಕ್ಷ್ಯ ಎನ್ನುವಂತೆ ಮುರುಗದಾಸ್‌ ತಮ್ಮ ಟ್ವಿಟ್ಟರ್‌ನಲ್ಲಿ  ‘ಗುರುವಾರ ಮಧ್ಯರಾತ್ರಿ ವೇಳೆ ಪೊಲೀಸರು ನನ್ನ ಮನೆಗೆ ಬಂದು ಹಲವು ಬಾರಿ ಬಾಗಿಲು ಬಡಿದಿದ್ದಾರೆ. ನಾನು ಮನೆಯಲ್ಲಿ ಇಲ್ಲದ್ದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರ  ಮುರುಗದಾಸ್‌ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರವೇ (ನ.9) ಮಧ್ಯಾಹ್ನವೇ ಕೋರ್ಟ್‌ ಈ ಪ್ರಕರಣ ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಮುರುಗದಾಸ್ ಮನೆಗೆ ಏಕೆ ಹೋದರು, ಎಷ್ಟು ಹೊತ್ತಿಗೆ ಹೋದರು ಎಂಬ ಬಗ್ಗೆ ತಮಿಳುನಾಡು ಪೊಲೀಸರು ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಹಲವು ಅಡೆತಡೆಗಳ ನಂತರ ವಿಜಯ್ ನಟನೆಯ ಸರ್ಕಾರ್ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯ ನಂತರ ಎಐಎಡಿಎಂಕೆ ಸಚಿವರು ಮತ್ತು ಪಕ್ಷದ ಮುಖಂಡರು ಚಿತ್ರದಲ್ಲಿರುವ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಪಕ್ಷದ ಕಾರ್ಯಕರ್ತರು ತಮಿಳುನಾಡಿನಲ್ಲಿ ಸರ್ಕಾರ್ ಚಿತ್ರ ಪ್ರದರ್ಶನವಾಗುತ್ತಿರುವ ಹಲವು ಥಿಯೇಟರ್‌ಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಸಿನಿಮಾ ಥಿಯೇಟರ್‌ಗಳ ಮುಂದೆ ವಿಜಯ್ ಕಟೌಟ್, ಬ್ಯಾನರ್‌ಗಳನ್ನು ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಸರ್ಕಾರ್’ ಬೆಂಬಲಿಸಿದ ಕಮಲ್‌ ಹಾಸನ್‌ 

‘ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸರ್ಕಾರದಲ್ಲಿರುವ ಮುಖಂಡರನ್ನೂ ಒಳಗೊಂಡು ಟೀಕಿಸುವ ಹಕ್ಕು ನಾಗರೀಕರಿಗಿದೆ’ ಎಂದು ಟ್ವೀಟ್‌ ಮಾಡಿರುವ ಕಮಲ್‌ ಹಾಸನ್‌ ‘ಸರ್ಕಾರ್‌’ ಸಿನಿಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಏನದು ವಿವಾದಿತ ದೃಶ್ಯ?

ಸರ್ಕಾರ್‌ ಸಿನಿಮಾದಲ್ಲಿ ಸರ್ಕಾರ ಉಚಿತವಾಗಿ ನೀಡಿದ್ದ ಎಲ್ಲಾ ವಸ್ತುಗಳನ್ನು ಬೆಂಕಿಗೆ ಹಾಕುವ ದೃಶ್ಯವೊಂದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. 

ವಿವಾದದ ಹಿನ್ನಲೆಯಲ್ಲಿ ಚಿತ್ರತಂಡ ಸರ್ಕಾರ್ ಚಿತ್ರದಲ್ಲಿರುವ ಕೆಲವು ದೃಶ್ಯಗಳನ್ನು ಮತ್ತು ಸಂಭಾಷಣೆಗಳನ್ನು ತೆಗೆಯಲು ನಿರ್ಧರಿಸಿದೆ ಎನ್ನಲಾಗಿದೆ. ಇಷ್ಟೆಲ್ಲಾ ವಿವಾದಗಳ ನಡುವೆಯೂ ರಾಜಕೀಯ ಕಥೆಯಾಧಾರಿತ ‘ಸರ್ಕಾರ್’ ಬಿಡುಗಡೆಯಾದ ಎರಡೇ ದಿನಗಳಲ್ಲಿ ₹100 ಕೋಟಿಗೂ ಅಧಿಕ ಆದಾಯ ಗಳಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 2

  Frustrated
 • 6

  Angry

Comments:

0 comments

Write the first review for this !