ಭಾನುವಾರ, ಡಿಸೆಂಬರ್ 15, 2019
25 °C
ಬರಪೀಡಿತ ಜಿಲ್ಲೆಯಲ್ಲಿ ವಿಶಿಷ್ಟ ಪ್ರಯತ್ನ

ಚರಂಡಿ ನೀರಿನಲ್ಲಿ ಕೃಷಿ ಕ್ರಾಂತಿ: ಜಲಕ್ಷಾಮದ ಸವಾಲು ಗೆದ್ದ ಅನ್ನದಾತ

ಜೆ.ಆರ್‌.ಗಿರೀಶ್ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ತಾಲ್ಲೂಕಿನ ಜಂಗಮ ಗುರ್ಜೇನಹಳ್ಳಿಯ ರೈತ ಶಿವಮೂರ್ತಿ ಜಲಕ್ಷಾಮದ ಸವಾಲು ಗೆದ್ದು ಗ್ರಾಮದ ಚರಂಡಿ ನೀರಿನಲ್ಲೇ ಕೃಷಿ ಕ್ರಾಂತಿ ಮಾಡಿದ್ದಾರೆ.

ಬರವನ್ನೇ ಬೆನ್ನಿಗೆ ಅಂಟಿಸಿಕೊಂಡಿರುವ ಈ ಗ್ರಾಮದಲ್ಲಿ ಕೃಷಿ ನಿರ್ವಹಣೆ ಸುಲಭದ ಮಾತಲ್ಲ. ಒಂದು ದಶಕದಿಂದ ಉತ್ತಮ ಮಳೆಯಾಗದೆ ಗ್ರಾಮದ ಕೆರೆ ಕಟ್ಟೆಯಲ್ಲಿ ಜೀವಸೆಲೆ ಬತ್ತಿದೆ. ಅಂತರ್ಜಲದ ಮಿತಿ ಮೀರಿದ ಬಳಕೆಯಿಂದ ಭೂಗರ್ಭ ಬರಿದಾಗಿದೆ.

ದಶಕದ ಹಿಂದೆ ಈ ಹಳ್ಳಿಯಲ್ಲಿ 40ಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದವು. ಈಗ ಬೆರಳೆಣಿಕೆ ಕೊಳವೆ ಬಾವಿಗಳಲ್ಲಿ ನೀರಿದೆ. ಜಿಲ್ಲೆಯ ಇತರ ಗ್ರಾಮಗಳಂತೆ ಇಲ್ಲಿಯೂ ನೀರಿನ ಸಮಸ್ಯೆ ಗಂಭೀರವಾಗಿದೆ. ಅಂತರ್ಜಲ ಪಾತಳಕ್ಕೆ ಇಳಿದಿದ್ದು, ಅನಾವೃಷ್ಟಿ ಕಾರಣಕ್ಕೆ ಸಾಕಷ್ಟು ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರಿದ್ದಾರೆ.

ಆದರೆ, ಮಳೆ ನೆಚ್ಚಿ ಕೂರದ ಶಿವಮೂರ್ತಿ ಗ್ರಾಮದ ಮನೆಗಳಿಂದ ಹರಿದು ಬರುವ ಕೊಳಚೆ ನೀರನ್ನು ವ್ಯರ್ಥವಾಗಲು ಬಿಡದೆ ಕೃಷಿಗೆ ಬಳಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಓದಿರುವ ಇವರು ಒಂದು ಕಾಲಕ್ಕೆ ಇತರ ರೈತರಂತೆಯೇ ಮೂರ್ನಾಲ್ಕು ಕೊಳವೆ ಬಾವಿ ಕೊರೆಸಿ ನಷ್ಟ ಅನುಭವಿಸಿದ್ದರು. ತುತ್ತಿನ ಚೀಲ ತುಂಬಿಸಲು ಬೇರೆ ದಾರಿ ಕಾಣದಾದಾಗ ಇವರ ತಲೆಗೆ ಬಂದಿದ್ದು ಚರಂಡಿ ನೀರನ್ನು ಕೃಷಿಗೆ ಬಳಸುವ ಉಪಾಯ.

ಅಂತರ ಬೆಳೆ: ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಪ್ರತಿ ಮನೆಗೂ ಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಚರಂಡಿ ಮೂಲಕ ವರ್ಷವಿಡೀ ಹರಿದು ಬರುವ ಕೊಳಚೆ ನೀರು ಶಿವಮೂರ್ತಿ ಅವರ ಮನೆಯ ಮುಂದಿನ ಕುಂಟೆಯಲ್ಲಿ ಶೇಖರಣೆಯಾಗಿದೆ.

ಶಿವಮೂರ್ತಿ ಈ ಕುಂಟೆಯಿಂದ ತಮ್ಮ ಜಮೀನಿನವರೆಗೆ ಕಾಲುವೆ ತೋಡಿಸಿ ಕೊಳಚೆ ನೀರು ಹರಿದು ಬರುವಂತೆ ವ್ಯವಸ್ಥೆ ಮಾಡಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ಮತ್ತು ದೊಡ್ಡ ತೊಟ್ಟಿ ನಿರ್ಮಿಸಿದ್ದು, ಕೊಳಚೆ ನೀರನ್ನು ಶುದ್ಧೀಕರಿಸಿ ಸಂಗ್ರಹಿಸಿಕೊಂಡಿದ್ದಾರೆ. ಈ ನೀರನ್ನೇ ಆಶ್ರಯಿಸಿ 2 ಎಕರೆಯಲ್ಲಿ ಸೀಬೆ ಗಿಡ ಬೆಳೆದಿದ್ದಾರೆ. ಸೀಬೆ ಗಿಡಗಳ ಮಧ್ಯೆ ಅಂತರ ಬೆಳೆಯಾಗಿ ಕುಂಬಳ ಕಾಯಿ, ಬೆಂಡೆ ಕಾಯಿ, ಮೆಣಸಿನಕಾಯಿ, ಆಲೂಗಡ್ಡೆ ಬೆಳೆದಿದ್ದಾರೆ. ಬದುವಿನಲ್ಲಿ ಹಲಸು ಹಾಗೂ ಮಾವಿನ ಮರ ಬೆಳೆಸಿದ್ದಾರೆ.

ಹನಿ ನೀರಾವರಿ: ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಸೀಬೆ ಬೆಳೆಗೆ ಬೇಸಿಗೆಯಲ್ಲಿ 3 ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ. ಮಳೆಗಾಲದಲ್ಲಿ ಕೃಷಿ ಹೊಂಡ ಮತ್ತು ತೊಟ್ಟಿಯಲ್ಲಿನ ಕೊಳಚೆ ನೀರು ಬಳಕೆ ಮಾಡುವುದಿಲ್ಲ. ಜಮೀನಿನ ಸುತ್ತ ಸೌರ ವಿದ್ಯುತ್‌ ತಂತಿ ಬೇಲಿ (ಸೋಲಾರ್‌ ಫೆನ್ಸಿಂಗ್‌) ಹಾಕಿದ್ದು, ವಾರದಲ್ಲಿ 2 ಬಾರಿ ಸೀಬೆ ಹಣ್ಣು ಕೊಯ್ಲು ಮಾಡುತ್ತಿದ್ದಾರೆ. ಕೃಷಿಯ ಜತೆಗೆ 4 ಹಸು ಮತ್ತು 5 ಕುರಿ ಸಾಕಿದ್ದಾರೆ. ಹಸು ಹಾಗೂ ಕುರಿಗಳ ಮೇವಿಗಾಗಿ ರಾಗಿ ಬೆಳೆದಿದ್ದಾರೆ. ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಮಳೆ ನೀರಿನ ಸಂಗ್ರಹ, ಮಳೆಗಾಲ ಮುಗಿದಾಗ ಗ್ರಾಮದ ಚರಂಡಿ ನೀರಿನ ಶೇಖರಣೆ ಸದ್ದಿಲ್ಲದೆ ಸಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು