ಕೋಟ್ಪಾ ಉಲ್ಲಂಘನೆ: 342 ಪ್ರಕರಣ, ಹುಕ್ಕಾ ಬಾರ್‌ಗಳಿಗೂ ನೋಟಿಸ್‌ ಜಾರಿ

7

ಕೋಟ್ಪಾ ಉಲ್ಲಂಘನೆ: 342 ಪ್ರಕರಣ, ಹುಕ್ಕಾ ಬಾರ್‌ಗಳಿಗೂ ನೋಟಿಸ್‌ ಜಾರಿ

Published:
Updated:
Deccan Herald

ಮಂಗಳೂರು: ನವೆಂಬರ್‌ 19ರಿಂದ ನಗರದ ವಿವಿಧೆಡೆ ನಿರಂತರ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಚಕ್ಷಣ ದಳ, ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪದಡಿ 342 ಪ್ರಕರಣಗಳನ್ನು ದಾಖಲಿಸಿದೆ.

ಶಾಲಾ, ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ, ಹೋಟೆಲ್‌, ಬಾರ್‌, ಮದ್ಯದಂಗಡಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಸೇವನೆ ಪತ್ತೆಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು.

‘ಹೋಟೆಲ್‌, ಬಾರ್‌, ಮದ್ಯದಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಧೂಮಪಾನಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ 200ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಲಾಗಿದೆ. ಗುರುವಾರ ಬಲ್ಲಾಳ್‌ಭಾಗ್‌, ಬರ್ಕೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, 90 ಪ್ರಕರಣ ದಾಖಲಿಸಲಾಗಿತ್ತು. ಶುಕ್ರವಾರ ಪಂಪ್‌ವೆಲ್‌, ನಾಗುರಿಯಲ್ಲಿ 38 ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಚಕ್ಷಣ ದಳದ ಸದಸ್ಯೆ ಡಾ.ಪ್ರೀತಾ ಮಾಹಿತಿ ನೀಡಿದರು.

ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ರಾಜ್ಯ ಉನ್ನತಮಟ್ಟದ ಸಮಿತಿ ಸದಸ್ಯ ಡಾ.ಜಾನ್‌ ಕೆನಡಿ, ಸಾಮಾಜಿಕ ಕಾರ್ಯಕರ್ತೆ ಶೃತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಯಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವಾಗ ಸ್ಥಳೀಯ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವು ನೀಡಿದ್ದರು. ಈ ಅವಧಿಯಲ್ಲಿ ಒಟ್ಟು ₹ 53,000 ದಂಡ ವಸೂಲಿ ಮಾಡಲಾಗಿದೆ ಎಂದರು.

ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಪತ್ತೆಹಚ್ಚಿ, ತೆರವುಗೊಳಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟ ಜಾಹೀರಾತು ಅಳವಡಿಸಿಕೊಂಡಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ನೋಟಿಸ್‌ ಜಾರಿ: ಹುಕ್ಕಾ ಬಾರ್‌ಗಳಲ್ಲೂ ಪರಿಶೀಲನೆ ನಡೆಸಲಾಗಿದೆ. ಕೆಲವೆಡೆ ಹುಕ್ಕಾ ಸೇದಲು ಬಳಸುತ್ತಿದ್ದ ಪದಾರ್ಥಗಳಲ್ಲಿನ ಮಿಶ್ರಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾದ ಅಂಶಗಳು ಪತ್ತೆಯಾದ ಹುಕ್ಕಾ ಬಾರ್‌ಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪ್ರೀತಾ ಹೇಳಿದರು.

ಹುಕ್ಕಾ ಬಾರ್‌ಗಳಲ್ಲಿ ಊಟ, ಉಪಾಹಾರ ಪೂರೈಕೆಗೆ ಅವಕಾಶವಿಲ್ಲ. ಕೆಲವು ಕಡೆ ಈ ನಿಯಮ ಉಲ್ಲಂಘನೆ ಕಂಡುಬಂದಿದೆ. ಹುಕ್ಕಾ ಸೇದಲು ಬಳಸುವ ಪದಾರ್ಥಗಳ ಪೊಟ್ಟಣಗಳಲ್ಲಿ ಎಚ್ಚರಿಕೆ ಸಂದೇಶವೂ ಇರಲಿಲ್ಲ. ಇಂತಹ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !