ಭಾನುವಾರ, ಡಿಸೆಂಬರ್ 8, 2019
19 °C

ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ‘ಬಾಹುಬಲಿ’!

Published:
Updated:
Deccan Herald

ಸೂಪರ್‌ ಹಿಟ್‌ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್‌’ನ ಹಿಂದಿ ಆವೃತ್ತಿ ಹೊಸ ದಾಖಲೆ ಸೃಷ್ಟಿಸಿದೆ. ಲಂಡನ್‌ನ ಪ್ರತಿಷ್ಠಿತ ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ಲೈವ್‌ ಸಂಗೀತ ರಸಮಂಜರಿಯೊಂದಿಗೆ ಪ್ರದರ್ಶನ ಕಾಣುವ ಅಪರೂಪದ ಅವಕಾಶವನ್ನು ಅದು ಗಿಟ್ಟಿಸಿಕೊಂಡಿದೆ. 

ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ಸಿನಿಮಾ ಪ್ರದರ್ಶನ ಮತ್ತು ಲೈವ್‌ ಸಂಗೀತ ನಡೆಯುವುದು ಹೊಸದೇನಲ್ಲ. ಆದರೆ ಭಾರತೀಯ ಸಿನಿಮಾವೊಂದು ಇಂಗ್ಲಿಷ್‌ ಸಬ್‌ಟೈಟಲ್‌ಗಳೊಂದಿಗೆ ಅಲ್ಲಿ ಪ್ರದರ್ಶನ ಕಾಣುವುದು ವಿರಳ. ಮುಂದಿನ ಅಕ್ಟೋಬರ್‌ 19ರಂದು ರಾತ್ರಿ 7.30ಕ್ಕೆ ‘ಬಾಹುಬಲಿ ದಿ ಬಿಗಿನಿಂಗ್‌’ ಅಂತಹ ವಿರಳ ಅವಕಾಶಕ್ಕೆ ಪಾತ್ರವಾಗಿರುವುದು ಗಮನಾರ್ಹ.

ಹತ್ತು ವರ್ಷ ಪೂರೈಸಿರುವ ‘ಫಿಲ್ಮ್ಸ್‌ ಇನ್‌ ಕನ್ಸರ್ಟ್‌ ಸೀರೀಸ್‌’ನಲ್ಲಿ ‘ಬಾಹುಬಲಿ’ ಪ್ರದರ್ಶನ ಏರ್ಪಾಡಾಗಿದೆ. ಪಂಚಭಾಷಾ ಸಂಗೀತ ರಚನೆಕಾರ ಮತ್ತು ಹಿನ್ನೆಲೆ ಗಾಯಕರಾದ  ಎಂ.ಎಂ.ಕೀರವಾಣಿ ಅವರ ಸಂಗೀತವನ್ನು ಲಂಡನ್‌ನ ರಾಯಲ್‌ ಫಿಲಾರ್ಮನಿಕ್‌ ಕನ್ಸರ್ಟ್‌ ಆರ್ಕೆಸ್ಟ್ರಾ ತಂಡ ಪ್ರಸ್ತುತಪಡಿಸಲಿದೆ. ಲಂಡನ್‌ನ ಐದು ಹೆಸರಾಂತ ಸಿಂಫನಿ ಆರ್ಕೆಸ್ಟ್ರಾ ತಂಡಗಳಲ್ಲಿ ಇದೂ ಒಂದು.

‘ಬಾಹುಬಲಿ’ ಚಿತ್ರದ ಸಂಗೀತ ರಚನೆ, ನಿರ್ದೇಶನ ಮತ್ತು ಕಂಠ ಕೀರವಾಣಿ ಅವರದೇ. ಹಾಗಾಗಿ ಲಂಡನ್‌ನಲ್ಲಿ ‘ಬಾಹುಬಲಿ’ ಚಿತ್ರ ಪ್ರದರ್ಶನದ ವೇಳೆ ಅದರ ಹಾಡುಗಳೂ ವಿಜೃಂಭಿಸಲಿವೆ. ಆರ್ಕೆಸ್ಟ್ರಾ ತಂಡ ಮತ್ತು ಹಾಲ್‌ನ ವೆಬ್‌ಸೈಟ್‌ಗಳಲ್ಲಿ ‘ಬಾಹುಬಲಿ’ ಟಿಕೆಟ್‌ಗಳನ್ನೂ ಪ್ರಕಟಿಸಲಾಗಿದೆ. 15 ವರ್ಷದ ಕೆಳಗಿನವರಿಗೆ ಸಿನಿಮಾ ಪ್ರದರ್ಶನಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಅಂದ ಹಾಗೆ ಪ್ರಭಾಸ್‌, ರಾನಾ ದಗ್ಗುಬಾಟಿ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್‌ ಹಿಟ್‌ ‘ಬಾಹುಬಲಿ’ಯನ್ನು ಹಿಂದಿಗೆ ತಂದವರು ಕರಣ್‌ ಜೋಹರ್‌. ‘ಮೂಲ ಚಿತ್ರವೇ ಪರಿಪೂರ್ಣವಾಗಿರುವ ಕಾರಣ ಹಿಂದಿಗೆ ತರುವುದು ನನಗೆ ನಿರಾಯಾಸದ ಸಂಗತಿ. ಆದರೆ ಹಿಂದಿ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ‘ಬಾಹುಬಲಿ’ ಚಿತ್ರದೊಂದಿಗೆ ನನ್ನ ಹೆಸರೂ ದಾಖಲಾಗುತ್ತದೆ ಎಂಬುದೇ ನನ್ನ ಪಾಲಿನ ಹೆಮ್ಮೆ’ ಎಂದು ಕರಣ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.  

ಹಾಲ್‌ ಬಗ್ಗೆ: 1871ರಲ್ಲಿ ಲೋಕಾರ್ಪಣೆಗೊಂಡ ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ 1941ರಿಂದಲೂ ಪ್ರತಿ ಬೇಸಿಗೆಯಲ್ಲಿ ವಿಶೇಷ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ಏಕಕಾಲಕ್ಕೆ 5,544 ಮಂದಿ ಕುಳಿತುಕೊಳ್ಳಲು ಅವಕಾಶವಿದೆ. ದಿ ಕಾರ್ಪೊರೇಷನ್‌ ಆಫ್‌ ದಿ ಹಾಲ್‌ ಆಫ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸಸ್‌ ಮಾಲೀಕತ್ವದ ಕಟ್ಟಡ ಇದಾಗಿದೆ.

ಪ್ರತಿಕ್ರಿಯಿಸಿ (+)