ಸೋಮವಾರ, ಸೆಪ್ಟೆಂಬರ್ 21, 2020
26 °C
ಕ್ಷಿಪ್ರ ಮಧ್ಯಸ್ಥಿಕಾ ಕೇಂದ್ರ ಉದ್ಘಾಟನಾ ಸಮಾರಂಭ

ಆರೋಗ್ಯ ಸೇವೆಯಲ್ಲಿ ಜಿಲ್ಲೆ ಪ್ರಥಮ: ಸಂಸದ ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಆರೋಗ್ಯ ಸೇವೆ ದೃಷ್ಟಿಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಸಿಗುತ್ತಿದ್ದು, ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ನರಸಿಂಹರಾಜ (ಎಸ್‍ಎನ್‍ಆರ್) ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಔಷಧ ನಿರೋಧಕ ಕ್ಷಯ ರೋಗ ಚಿಕಿತ್ಸಾ ಕೇಂದ್ರ ಹಾಗೂ ಜಿಲ್ಲಾ ಕ್ಷಿಪ್ರ ಮಧ್ಯಸ್ಥಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬೌರಿಂಗ್‌ ಆಸ್ಪತ್ರೆ ಹೊರತುಪಡಿಸಿ ಅಲ್ಲಿಂದ ಆಂಧ್ರಪ್ರದೇಶದ ಗಡಿವರೆಗೆ ಎಸ್‌ಎನ್‌ಆರ್‌ ಮಾದರಿಯ ಸುಸಜ್ಜಿತ ಆಸ್ಪತ್ರೆ ಎಲ್ಲೂ ಇಲ್ಲ’ ಎಂದು ಹೇಳಿದರು.

‘ರಮೇಶ್‌ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಹೆಚ್ಚು ಮುತುವರ್ಜಿ ವಹಿಸಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಲ ವೈದ್ಯಕೀಯ ಸೇವೆ ಸಿಗುವಂತೆ ಮಾಡಿದ್ದಾರೆ. ಇದರಿಂದ ಜಿಲ್ಲೆಯ ಜತೆಗೆ ಗಡಿ ಭಾಗದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ರೋಗಿಗಳಿಗೂ ಅನುಕೂಲವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್‌ ಮತ್ತು ಡಯಾಲಿಸಿಸ್ ಸೇವೆ, ಆಯುಷ್ಮಾನ್ ಆರೋಗ್ಯ ಕರ್ನಾಟಕ ಹಾಗೂ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಪುಟ್ಟ ಮಕ್ಕಳಿಗೂ ಇಲ್ಲಿ ತೀವ್ರ ನಿಗಾ ಘಟಕ ವ್ಯವಸ್ಥೆ ಮಾಡಿರುವುದರಿಂದ ಆಸ್ಪತ್ರೆಗೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿದೆ. ರಾಜ್ಯ ಸರ್ಕಾರ ಬಡ ರೋಗಿಗಳಿಗೆ ಇಷ್ಟು ವೈದ್ಯಕೀಯ ಸೇವೆ ಕಲ್ಪಿಸಿರುವುದು ಅಭಿನಂದನಾರ್ಹ’ ಎಂದು ಶ್ಲಾಘಿಸಿದರು.

ವೈದ್ಯರ ಕೊರತೆ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ಸಂಬಂಧ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಆರೋಗ್ಯ ಇಲಾಖೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿಯಾಗಿ ವೈದ್ಯರ ಸಮಸ್ಯೆ ಪರಿಹರಿಸುವಂತೆ ಮಾತನಾಡುತ್ತೇನೆ. ಯಾವುದೇ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಒಪ್ಪಿದರೆ ನೇಮಕಾತಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಬೇಕೆಂಬ ಮನೋಭಾವ ವೈದ್ಯರಲ್ಲಿ ಮೂಡಬೇಕು’ ಎಂದು ಸಲಹೆ ನೀಡಿದರು.

‘ರಾಷ್ಟ್ರ ಮಟ್ಟದಲ್ಲೇ ಹೆಸರಾದ ಕ್ಷಯ ರೋಗದ ಆಸ್ಪತ್ರೆ ಜಿಲ್ಲೆಯಲ್ಲಿತ್ತು. ಆದರೆ, ಕಾರಣಾಂತರದಿಂದ ಈ ಆಸ್ಪತ್ರೆ ಮುಚ್ಚಲಾಗಿದೆ. ಅದರ ಭಾಗವಾಗಿ ಔಷಧ ನಿರೋಧಕ ಕ್ಷಯ ರೋಗ ಚಿಕಿತ್ಸಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಗುತ್ತಿಗೆ ಸಿಬ್ಬಂದಿಗೆ 5 ತಿಂಗಳಿನಿಂದ ವೇತನ ಬಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಗುತ್ತಿಗೆದಾರರ ಜತೆ ಚರ್ಚಿಸಿ ಶೀಘ್ರವೇ ವೇತನ ನೀಡುವಂತೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.