ಜನ ನಕಲಿ ಕ್ಲಿನಿಕ್‌ಗೆ ಹೋಗಬೇಡಿ

7

ಜನ ನಕಲಿ ಕ್ಲಿನಿಕ್‌ಗೆ ಹೋಗಬೇಡಿ

Published:
Updated:

ಕೋಲಾರ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಎಲ್ಲಾ ಬಗೆಯ ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದು, ಜನರು ಯಾವುದೇ ಕಾರಣಕ್ಕೂ ನಕಲಿ ಕ್ಲಿನಿಕ್‌ಗಳಿಗೆ ಹೋಗಬಾರದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸಿ 160ಕ್ಕೂ ಹೆಚ್ಚು ಅನಧಿಕೃತ ಕ್ಲಿನಿಕ್‌ ಬಂದ್‌ ಮಾಡಿಸಿದ್ದೇವೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅನ್ವಯ ನಕಲಿ ವೈದ್ಯರು ಯಾರು ಮತ್ತು ಅನಧಿಕೃತ ವೈದ್ಯರು ಯಾರು ಎಂಬ ಬಗ್ಗೆ ಜನರಿಗೆ ಮಾಹಿತಿ ತಲುಪಿದೆ. ಜನ ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕು’ ಎಂದರು.

‘ಕೆಲ ವೈದ್ಯರು ಪಾರಂಪರಿಕವಾಗಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದು, ವೃತ್ತಿ ಮುಂದುವರಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಹೋಗಿ ಅವರು ಹೇಳುವ ನಿಯಮದಂತೆ ನಡೆದುಕೊಳ್ಳಿ ಎಂದು ಈ ವೈದ್ಯರಿಗೆ ಸಲಹೆ ನೀಡಿದ್ದೇವೆ’ ಎಂದು ತಿಳಿಸಿದರು.

ನೀಲಗಿರಿ ತೆರವು: ‘ನೀಲಗಿರಿ ಬೆಳೆಗೆ ಹೆಚ್ಚಿನ ಪ್ರಮಾಣದ ನೀರು ಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ನೀಲಗಿರಿ ಮರ ತೆರವು ಮಾಡಲೇಬೇಕಿದೆ. ಅಲ್ಲದೇ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀಲಗಿರಿ ತೆರವುಗೊಳಿಸಬೇಕೆಂದು ಸರ್ಕಾರವೇ ಆದೇಶ ನೀಡಿದೆ’ ಎಂದು ವಿವರಿಸಿದರು.

‘ಸರ್ಕಾರಿ ಜಾಗಗಳಲ್ಲಿ ಬಹುತೇಕ ನೀಲಗಿರಿ ಮರ ತೆರವು ಮಾಡಲಾಗಿದೆ. ಅರಣ್ಯ ಇಲಾಖೆಯ ಕೆಲ ಜಾಗದಲ್ಲಿ ಹಾಗೂ ಖಾಸಗಿ ಜಮೀನುಗಳಲ್ಲಿ ನೀಲಗಿರಿ ಇನ್ನೂ ಇದೆ. ಕೆಲವರು ವ್ಯವಸಾಯ ಮಾಡದೆ ಜಮೀನು ಉಳಿಸಿಕೊಳ್ಳುವುದಕ್ಕಾಗಿ ನೀಲಗಿರಿ ಹಾಕಿ ಬೇರೆಡೆ ವಾಸ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ತೆರವು ಮಾಡುವಂತೆ ಸೂಚಿಸಲಾಗುತ್ತದೆ. ನೀಲಗಿರಿಗೆ ಪರ್ಯಾಯವಾಗಿ ನರ್ಸರಿಗಳಲ್ಲಿ ಸಸಿ ಬೆಳೆಯಲಾಗುತ್ತಿದ್ದು, ರೈತರು ಕೋರಿಕೆ ಸಲ್ಲಿಸಿದರೆ ಸಸಿ ನೀಡಲಾಗುವುದು’ ಎಂದು ಹೇಳಿದರು.

ಮನೆ ತೆರವುಗೊಳಿಸುತ್ತಿಲ್ಲ: ‘ಜಿಲ್ಲೆಯ ಕೆಲವೆಡೆ ಚಿರತೆ ಸೆರೆ ಹಿಡಿದು ಬೇರೆಡೆಗೆ ಬಿಡಲಾಗುತ್ತಿದೆ. ಸೆರೆಯಾದ ಚಿರತೆಗಳನ್ನು ಸ್ಥಳೀಯವಾಗಿ ಎಲ್ಲಿಯೂ ಬಿಡುತ್ತಿಲ್ಲ. ಕೋಲಾರಮ್ಮ ಕೆರೆ ಅಂಗಳದಲ್ಲಿನ ಒತ್ತುವರಿದಾರರ ಮನೆಗಳನ್ನು ನಾವು ತೆರವುಗೊಳಿಸುತ್ತಿಲ್ಲ. ಬದಲಿಗೆ ಅವರೇ ಸ್ವಯಂಪ್ರೇರಿತರಾಗಿ ಮನೆ ತೆರವು ಮಾಡಿ ಬೇರೆ ಜಾಗಕ್ಕೆ ತೆರಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !