ಭಾನುವಾರ, ಸೆಪ್ಟೆಂಬರ್ 20, 2020
21 °C
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌

ಅಂಗವಿಕಲರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ಅಂಗವಿಕಲರಿಗೆ ಎಲ್ಲಾ ರೀತಿಯ ಕಾನೂನು ರಕ್ಷಣೆ ಇದೆ. ಅದನ್ನು ಜಾರಿಗೆ ತರುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ. ಬಸವರಾಜ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಿಗೆ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸಕಾಲದಲ್ಲಿ ಒದಗಿಸಬೇಕು. ಉದ್ಯೋಗದಲ್ಲಿಯೂ ಸರಿಯಾದ ರೀತಿಯಲ್ಲಿ ಮೀಸಲಾತಿ ದೊರೆಯಬೇಕು. 1955ರ ಅಂಗವಿಕಲರ ಹಕ್ಕುಗಳ ರಕ್ಷಣೆ ಅಧಿನಿಯಮ 2016ರಲ್ಲಿ ತಿದ್ದುಪಡಿಯಾಗಿದೆ. ಈ ಬಗ್ಗೆ ನ್ಯಾಯಂಗ ಇಲಾಖೆ ವತಿಯಿಂದ ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ನುಡಿದರು.

ಅಂಗವಿಕಲರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ, ದಬ್ಬಾಳಿಕೆ ನಡೆದರೆ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ. ಜಿಲ್ಲಾ ಕಾನೂನು ಸೇವಾ ವಿಭಾಗದ ಮೂಲಕ ಕಾನೂನು ನೆರವು ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ವಿಶೇಷ ವ್ಯಕ್ತಿಗಳಿಗೆ ಅನುಕಂಪ ಸೂಚಿಸುವ ಬದಲು ಸಮಾನ ಅವಕಾಶಗಳನ್ನು ಸೃಷ್ಟಿಸಿ ಸಮಾಜದಲ್ಲಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರ ನೀಡಬೇಕು. ಅವರಲ್ಲಿರುವ ಪ್ರತಿಭೆ ಹೊರತರಲು ಪ್ರೋತ್ಸಾಹ, ನೆರವು, ತರಬೇತಿ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪ್ರೀತಂ ಜೆ. ಗೌಡ, ಸರ್ಕಾರಿ ಹುದ್ದೆಗಳಲ್ಲಿ ಅಂಗವಿಕಲರಿಗೆ ಇರುವ ಮೀಸಲಾತಿ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ತಾವು ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್, ಅಂಗವಿಕಲರು ಸಮಾಜಕ್ಕೆ ಹೊರೆಯಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಧನೆ ಮಾಡುವತ್ತ ಗಮನ ಹರಿಸಬೇಕು. ಸಾರ್ವಜನಿಕರು, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮ, ಸಿ.ಡಿ.ಪಿ.ಓ. ದೇವರಾಜ್, ಅಂಗವಿಕಲರ ಸಂಘದ ಅಧ್ಯಕ್ಷ ಸಣ್ಣಸ್ವಾಮಿ, ದೇವರಾಜ್ ಅರಸು, ಜಿಲ್ಲಾ ಅಂಗವಿಕಲರ, ಹಿರಿಯ ನಾಗರೀಕರ ಕಲ್ಯಾಣ ಅಧಿಕಾರಿ ಟಿ. ಮಲ್ಲೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.