ಭಾನುವಾರ, ಮಾರ್ಚ್ 7, 2021
30 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ತಾಕೀತು

ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಸ್ವಯಂ ನಿವೃತ್ತಿ ಪಡೆದು ಮನೆಗೆ ಹೋಗಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಗುಡುಗಿದರು.

ಇಲ್ಲಿ ಬುಧವಾರ ನಡೆದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಧಿಕಾರಿಗಳು ತಿಂಗಳಿಗೆ ಸರಿಯಾಗಿ ಸಂಬಳ ತೆಗೆದುಕೊಳ್ಳುತ್ತೀರಿ. ಆದರೆ, ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಲು ಏನು ತೊಂದರೆ?’ ಎಂದು ಪ್ರಶ್ನಿಸಿದರು.

‘ನಿನ್ನೆ ಲೋಕಾಯುಕ್ತ ನ್ಯಾಯಮೂರ್ತಿ ಕೆಜಿಎಫ್‌ಗೆ ಬಂದಿದ್ದರು. ಅವರ ಮುಂದೆ ನಾಲ್ಕು ಮಂದಿ ಬೇಜವಾಬ್ದಾರಿ ಅಧಿಕಾರಿಗಳನ್ನು ನಿಲ್ಲಿಸಿ ಸರಿಯಾದ ಪಾಠ ಕಲಿಸಿದ್ದರೆ ಉಳಿದವರಿಗೆ ಎಚ್ಚರಿಕೆಯ ಪಾಠವಾಗುತ್ತಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಡಿತರ ಚೀಟಿ ಸಿಕ್ಕಿಲ್ಲ ಎಂಬ ಬಗ್ಗೆ ಸಾಕಷ್ಟು ದೂರು ಬಂದಿವೆ. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರಿಗೆ ಸಕಾಲಕ್ಕೆ ಪಡಿತರ ಚೀಟಿ ಒದಗಿಸಬೇಕು. ಸರ್ಕಾರ ಅನೇಕ ಯೋಜನೆ ರೂಪಿಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

ದೂರು ಬಂದಿವೆ: ‘ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಮತ್ತು ಕೆಲ ಅಂಗಡಿಗಳನ್ನು ಸ್ಥಳಾಂತರಿಸಲು ಸಾರ್ವಜನಿಕರಿಂದ ದೂರು ಬಂದಿವೆ. ಲಕ್ಷ್ಮೀಸಾಗರ, ಮರುಮಾಕಲಪಲ್ಲಿ, ಆಲೇರಿ, ಗುಮ್ಮರೆಡ್ಡಿಪುರ, ನೆನುಮನಹಳ್ಳಿ ಸೇರಿದಂತೆ 13 ಗ್ರಾಮಗಳಿಂದ ದೂರು ಸಲ್ಲಿಕೆಯಾಗಿವೆ. ಅಧಿಕಾರಿಗಳು ಶೀಘ್ರವೇ ಈ ಗ್ರಾಮಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ತಿಳಿದು ವರದಿ ನೀಡಿ’ ಎಂದು ಸೂಚಿಸಿದರು.

‘ಅಗತ್ಯ ಇರುವ ಕಡೆ ನ್ಯಾಯಬೆಲೆ ಅಂಗಡಿ ಆರಂಭಿಸಿ. ನಗರ ಪ್ರದೇಶದಲ್ಲಿ 1 ಸಾವಿರ ಪಡಿತರ ಚೀಟಿಗಳಿಗೆ ಒಂದು ನ್ಯಾಯ ಬೆಲೆ ಅಂಗಡಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 500 ಕಾರ್ಡ್‌ಗಳಿಗೆ ಒಂದು ನ್ಯಾಯಬೆಲೆ ಅಂಗಡಿ ಇರಬೇಕು. ಪಡಿತರದಾರರಿಗೆ ತೊಂದರೆ ಆಗದಂತೆ ಆಹಾರ ಸಾಮಗ್ರಿ ಒದಗಿಸಬೇಕು’ ಎಂದು ಹೇಳಿದರು.

ಪ್ರಯಾಣಿಕರು ವಿರಳ: ‘ಶ್ರೀನಿವಾಸಪುರದಲ್ಲಿ ಹೊಸ ಬಸ್ ನಿಲ್ದಾಣ ಆರಂಭಿಸಿದ್ದು, ಅಲ್ಲಿಗೆ ಪ್ರಯಾಣಿಕರು ಬರುವುದು ವಿರಳ. ಹೀಗಾಗಿ ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಸಂಚರಿಸುತ್ತಿವೆ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಹೊಸ ಬಸ್ ನಿಲ್ದಾಣದಿಂದಲೇ ಬಸ್‌ಗಳು ಹೊರಡಬೇಕು. ಆಗ ಪ್ರಯಾಣಿಕರು ಆ ನಿಲ್ದಾಣಕ್ಕೆ ಬರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹಳೇ ನಿಲ್ದಾಣದಿಂದ ಬಸ್‌ಗಳು ಹೊರಡುವುದನ್ನು ತಕ್ಷಣವೇ ನಿಲ್ಲಿಸಿ. ಅಗತ್ಯವಿದ್ದರೆ ಹೊಸ ಬಸ್ ನಿಲ್ದಾಣದಿಂದ ಹೊರಟು ಹಳೇ ನಿಲ್ದಾಣಕ್ಕೆ ಹೋಗಲಿ’ ಎಂದರು.

‘ವಕ್ಫ್‌ ಬೋರ್ಡ್‌ನಿಂದ ₹ 2.22 ಕೋಟಿ ಹಣ ಬಂದಿದ್ದರೂ ಬಳಕೆ ಮಾಡಿಲ್ಲ. ಮಸೀದಿಗಳ ದುರಸ್ತಿ ಹಾಗೂ ಖಬರಸ್ಥಾನ ಅಭಿವೃದ್ಧಿಗೆ ಈ ಹಣ ಬಳಸಿಕೊಂಡು ಗುಣಮಟ್ಟದ ಕೆಲಸ ಮಾಡಿ’ ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಜ್ ಸೆಪಟ್, ವಿಧಾನಸಭಾಧ್ಯಾಕ್ಷ ಕೆ.ಆರ್‌.ರಮೇಶ್‌ಕುಮಾರ್ ಅವರ ಆಪ್ತ ಕಾರ್ಯದರ್ಶಿ ರೂಪಶ್ರೀ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು