ಕೋಲಾರ: ಜಿಲ್ಲೆಯಲ್ಲಿ ಜನರ ರಕ್ತ ಹೀರುವ ತಿಗಣೆಗಳಿವೆ

ಕೋಲಾರ: ‘ಜಿಲ್ಲೆಯಲ್ಲಿ ಜನರ ರಕ್ತ ಹೀರುವ ತಿಗಣೆಗಳಿದ್ದು, ಈ ಬಗ್ಗೆ ಜನ ಜಾಗೃತರಾಗಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಕ್ಕೂಟವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಬಂದು ಜನರಿಗೆ ತೊಂದರೆ ಕೊಡುವವರು ತಿಗಣೆಗಿಂತಲೂ ಬಹಳ ಅಪಾಯಕಾರಿ’ ಎಂದರು.
‘ಸಂವಿಧಾನವು ದೇಶದ ಧರ್ಮಗ್ರಂಥ. ಸಂವಿಧಾನದ ಹೆಸರಲ್ಲಿ ಅಧಿಕಾರಕ್ಕೇರಿ ಅದರ ವಿರುದ್ಧವಾಗಿ ನಡೆದುಕೊಳ್ಳುವವರು ಹೆಚ್ಚಾಗಿದ್ದಾರೆ. ಸಂವಿಧಾನ ವಿರೋಧಿಗಳಿಗೆ ಕನಿಷ್ಠ ಗ್ರಾಮ ಪಂಚಾಯಿತಿ ಸದಸ್ಯರಾಗಲು ಬಿಡಬಾರದು’ ಎಂದು ವಾಗ್ದಾಳಿ ನಡೆಸಿದರು.
‘ಇಸ್ಲಾಂ ಧರ್ಮೀಯರಿಗೆ ಕುರಾನ್, ಹಿಂದೂಗಳಿಗೆ ಭಗವದ್ಗೀತೆ ಹಾಗೂ ಕ್ರೈಸ್ತರಿಗೆ ಬೈಬಲ್ ನಂಬಿಕೆಯಾದರೆ. ಶೋಷಿತ ಜನರಿಗೆ ಸಂವಿಧಾನವೇ ಮಹಾಗ್ರಂಥ. ಸಂವಿಧಾನ ಒಂದು ಹೇಳಿದರೆ ನೀವೊಂದು ಹೇಳಬೇಡಿ, ಸಂವಿಧಾನ ತಿಳಿಯದೆ ಸುಳ್ಳು ಹೇಳಬೇಡಿ. ವಾಸ್ತವಾಂಶ ಅರ್ಥ ಮಾಡಿಕೊಳ್ಳುವವರು ಮಾತ್ರ ಜನಪ್ರತಿನಿಧಿಗಳಾಗಲು ಯೋಗ್ಯರು’ ಎಂದರು.
ಸಂಚು ವಿಫಲ: ‘ನಸೀರ್ ಅಹಮ್ಮದ್ ವಿಧಾನಸಭೆ ಪ್ರವೇಶಿಸಲು ಸಾಕಷ್ಟು ಅಡೆತಡೆ ಎದುರಾದವು. ರಾಜ್ಯಸಭೆಗೆ ಆಯ್ಕೆಯಾಗುವ ಪ್ರಯತ್ನದಲ್ಲಿದ್ದಾಗ ಅವರ ವಾಹನ ಅಪಘಾತಕ್ಕೀಡಾಯಿತು. ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪುವಂತೆ ಮಾಡಲು ವಿರೋಧಿಗಳು ನಡೆಸಿದ ಸಂಚು ವಿಫಲವಾಯಿತು’ ಎಂದು ಟೀಕಿಸಿದರು.
‘ಸಮಾಜದಲ್ಲಿ ಹಲವು ಬಗೆಯ ಜನರಿದ್ದಾರೆ. ನಸೀರ್ ಅಹಮ್ಮದ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿದ್ದರಿಂದ ಅಲ್ಪಸಂಖ್ಯಾತರಿಗೆ ಮಾನ್ಯತೆ ಸಿಕ್ಕಿತು. ಜತೆಗೆ ಅಲ್ಪಸಂಖ್ಯಾತ ಸಮುದಾಯದವರು ನಿಟ್ಟುಸಿರು ಬಿಡುವಂತಾಯಿತು. ನಾವೆಲ್ಲಾ ಒಟ್ಟಾಗಿರಲು ಈ ಕಾರ್ಯಕ್ರಮ ನಡೆಸಲಾಗಿದೆ. ಇದಕ್ಕೊಂದು ಸದುದ್ದೇಶವಿದ್ದು, ಇದು ಇಲ್ಲಿಗೆ ಕೊನೆಗೊಳ್ಳಬಾರದು. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಬೇಕು’ ಎಂದರು.
ಡ್ರಾಮಾ ಕಂಪನಿಗಳು: ‘ಚುನಾವಣೆಯಲ್ಲಿ ಗೆದ್ದು ಪ್ರಮಾಣಪತ್ರ ಪಡೆದವರೆಲ್ಲಾ ನಾಯಕರಲ್ಲ. ಜನರ ವಿಶ್ವಾಸ ಗಳಿಸುವವನು ನಿಜವಾದ ನಾಯಕ. ಅಂಬೇಡ್ಕರ್ ಹೆಸರೇಳಿಕೊಂಡು ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಜೀವನದಲ್ಲಿ ಅವಮಾನ ಅನುಭವಿಸಿದ ಮಹನೀಯರನ್ನು ಅವಮಾನಿಸುವ ಬದಲು ಅವರ ಫೋಟೊ ಹಾಕಿ, ಇಲ್ಲವೇ ಅವರ ಆದರ್ಶ ಪಾಲಿಸಿ’ ಎಂದು ಸಲಹೆ ನೀಡಿದರು.
‘ಸಮಾಜದಲ್ಲಿ ಇತ್ತೀಚೆಗೆ ಡ್ರಾಮಾ ಕಂಪನಿಗಳು ಹೆಚ್ಚುತ್ತಿವೆ. ಹಿಂದಿನ ಅಸಲಿ ಡ್ರಾಮಾ ಕಂಪನಿಗಳ ವಾರಸುದಾರರು ಬಣ್ಣ ಹಾಕಿಕೊಂಡು ಸಂದೇಶ ನೀಡುವ ಮೂಲಕ ಜೀವನ ನಡೆಸುತ್ತಿದ್ದರು. ಆದರೆ, ರಾಜಕಾರಣಿಗಳು ಇಂದು ದುಡ್ಡಿಗಾಗಿ ಪ್ರಾಣ ಬಿಡುವ ನಾಟಕವಾಡುತ್ತಿದ್ದಾರೆ’ ಎಂದು ವಿಷಾದಿಸಿದರು.
ವ್ಯವಸ್ಥೆ ಕೆಟ್ಟಿದೆ: ‘ರಾಷ್ಟ್ರ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ರಾಜಕೀಯ ವ್ಯವಸ್ಥೆ ಕೆಟ್ಟಿದೆ. ಇದನ್ನು ಇಲ್ಲಿಗೆ ಮಟ್ಟಹಾಕಲು ನಡೆಸುತ್ತಿರುವ ಪ್ರಯತ್ನಕ್ಕೆ ಸದಾ ಬೆಂಬಲ ನೀಡುತ್ತೇನೆ’ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
‘ಸನ್ಮಾನವು ಜವಾಬ್ದಾರಿ ಹೆಚ್ಚಿಸುತ್ತದೆ. ನಸೀರ್ ಅಹಮ್ಮದ್ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಮರಿಸಿದರು.
‘ಜಿಲ್ಲೆಯಲ್ಲಿ ರಾಜಕೀಯ ಪರಿವರ್ತನೆಗೆ ಕೈಗೊಂಡಿರುವ ಪ್ರಯತ್ನಕ್ಕೆ ನನ್ನ ಸಹಕಾರವಿದೆ. ನಾನು ಸಹ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.
ಅಲ್ಪಸಂಖ್ಯಾತರ ಧ್ವನಿ: ‘ನಸೀರ್ ಅಹಮ್ಮದ್ ಅವಿಭಜಿತ ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಧ್ವನಿಯಾಗಿದ್ದಾರೆ, ರಾಜಕೀಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ಕುಮಾರ್ ಹಾಗೂ ನನ್ನ ತಂದೆ ಚೌಡರೆಡ್ಡಿ ಚಾಪು ಮೂಡಿಸಿದ್ದರು. ಓಟ್ ಬ್ಯಾಂಕ್ಗಾಗಿ ದಲಿತ ಸಮುದಾಯವನ್ನು ಛಿದ್ರಗೊಳಿಸಿ ಆಳುತ್ತಿರುವ ವ್ಯಕ್ತಿ ವಿರುದ್ದ ಸಂಘಟಿತ ಹೋರಾಟ ನಡೆಸುತ್ತೇವೆ’ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಪರೋಕ್ಷವಾಗಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಬಿ.ಪಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕ ಎಂ.ಎಲ್.ಅನಿಲ್ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಹಿದ್, ಕೃಷ್ಣಪ್ಪ ಪಾಲ್ಗೊಂಡಿದ್ದರು.