ಬುಧವಾರ, ಫೆಬ್ರವರಿ 24, 2021
24 °C
ಅದುರಿದ ಭಾರತದ ಬ್ಯಾಟಿಂಗ್ ಪಡೆ

ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್: ಚೇತೇಶ್ವರ್ ಪೂಜಾರ ಶತಕದ ಚಿತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್: ಟೆಸ್ಟ್‌ ಕ್ರಿಕೆಟ್‌ ಪರಿಣತ ಬ್ಯಾಟ್ಸ್‌ಮನ್‌ ಹೇಗಿರಬೇಕು ಎಂಬುದನ್ನು ಭಾರತದ ಚೇತೇಶ್ವರ್ ಪೂಜಾರ ಮತ್ತೊಮ್ಮೆ ಸಾಬೀತು ಮಾಡಿದರು.

ಆಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆವರು ಭಾರತದ ಪಾಲಿಗೆ ಆಪದ್ಭಾಂಧವರಾದರು. ಆರಂಭಿಕ ಜೋಡಿ ಮುರಳಿ ವಿಜಯ್, ಕೆ.ಎಲ್. ರಾಹುಲ್, ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಅವರೆಲ್ಲರೂ ಊಟದ ವಿರಾಮಕ್ಕೆ ಮುನ್ನವೇ ಪೆವಿಲಿಯನ್ ಸೇರಿದ್ದ ಸಂದರ್ಭದಲ್ಲಿ ಸಹನೆಯಿಂದ ಬ್ಯಾಟಿಂಗ್ ಮಾಡಿದ ಪೂಜಾರ (123; 246ಎಸೆತ, 7ಬೌಂಡರಿ, 2ಸಿಕ್ಸರ್) ಚೆಂದದ ಶತಕ ಶತಕ ದಾಖಲಿಸಿದರು. ದಿನದಾಟದ ಅಂತ್ಯಕ್ಕೆ ಭಾರತವು 87.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 250 ರನ್‌ ಗಳಿಸಿ ಗೌರವ ಉಳಿಸಿಕೊಳ್ಳಲೂ ಅವರು ಕಾರಣರಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆತಿಥೇಯ ಬೌಲರ್‌ಗಳ ವೇಗದ ‘ಬಿಸಿ’ ಬೇಗನೆ ತಟ್ಟಿತು. 86 ರನ್‌ಗಳಾಗುವಷ್ಟರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಮರಳಿ ಗೂಡು ಸೇರಿಕೊಂಡರು.  ಆದರೆ ರಾಜ್‌ಕೋಟ್‌ನ ಪೂಜಾರ ಮಾತ್ರ ರಾಜನಾದರು. ಏಕಾಂಗಿ ಹೋರಾಟ ನಡೆಸಿದರು. ಸುಂದರ ಕವರ್ ಡ್ರೈವ್, ಕಟ್‌ಗಳ ಆಟದ ರಸದೌತಣ ನೀಡಿದರು. ಅವರನ್ನು ಎಲ್‌ಬಿ ಬಲೆಗೆ ಕೆಡವಲು ಮತ್ತು ದೊಡ್ಡ ಹೊಡೆತ ಆಡಿ ಕ್ಯಾಚ್‌ ನೀಡುವಂತೆ ಮಾಡಲು ಬೌಲರ್‌ಗಳು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಆದರೆ ಸಂಜೆ ಅವರು ರನ್‌ಔಟ್ ಆಗುವುದರೊಂದಿಗೆ ದಿನದಾಟ ಅಂತ್ಯವಾಯಿತು.

ಚೆಂಡು ಉತ್ತಮವಾಗಿ ಬೌನ್ಸ್‌ ಮತ್ತು ಸ್ವಿಂಗ್ ಆಗುತ್ತಿದ್ದ ಪಿಚ್‌ನಲ್ಲಿ ನೆಲಕಚ್ಚಿ ಆಡುವ ಅಗತ್ಯವಿತ್ತು. ಆದರೆ, ತಾಳ್ಮೆ ಕಳೆದುಕೊಂಡಂತೆ ಆಡಿದ  ಉಳಿದ ಬ್ಯಾಟ್ಸ್‌ಮನ್‌ಗಳು ದಂಡ ತೆತ್ತರು. ತಂಡವನ್ನು ಆತಂಕಕ್ಕೆ ತಳ್ಳಿದರು. ಈಚೆಗೆ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿದ್ದ ಮುರಳಿ ವಿಜಯ್ ಮತ್ತು ಅರ್ಧಶತಕ ಹೊಡೆದಿದ್ದ ಕನ್ನಡಿಗ ರಾಹುಲ್ ಆಟ ಇಲ್ಲಿ ನಡೆಯಲಿಲ್ಲ. ಈಚೆಗೆ ಸತತ ವೈಫಲ್ಯ ಅನುಭವಿಸುತ್ತಿರುವ ರಾಹುಲ್ ಮತ್ತೊಮ್ಮೆ ನಿರಾಶರಾದರು. ಆಫ್‌ಸ್ಟಂಪ್ ಹೊರಗೆ ಸಾಗುತ್ತಿದ್ದ ಚೆಂಡನ್ನು ಕೆಣಕಿದರು. ಕೆಟ್ಟ ಹೊಡೆತ ಪ್ರಯೋಗಿಸಿ ಔಟಾದರು. ವಿಜಯ್ ಕೂಡ ಅದೇ ತಪ್ಪು ಮಾಡಿದರು.

ಏಳನೇ ಓವರ್‌ನಲ್ಲಿ ನಾಯಕ ವಿರಾಟ್ ಫ್ರಂಟ್‌ ಫುಟ್‌ ಡ್ರೈವ್‌ ಮಾಡಿದರು. ಚೆಂಡು ಗಲ್ಲಿಯತ್ತ ಬಿರುಸಿನಿಂದ ಚಿಮ್ಮಿದ ಚೆಂಡನ್ನು ಫೀಲ್ಡರ್ ಉಸ್ಮಾನ್ ಖ್ವಾಜಾ ಜಿಗಿದು ಹಿಡಿದ ರೀತಿ ಅಮೋಘವಾಗಿತ್ತು. ‘ಈ ೃತುವಿನ ಅತ್ಯಮೋಘ ಕ್ಯಾಚ್’  ಎಂದು ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದವರಿಂದ ಉಸ್ಮಾನ್ ಮೆಚ್ಚುಗೆಗೆ ಪಾತ್ರರಾದರು. ಉಪನಾಯಕ ಅಜಿಂಕ್ಯ ರಹಾನೆ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ರೋಹಿತ್ ಶರ್ಮಾ (37; 61ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ವಲ್ಪ ಮಟ್ಟಿಗೆ ಹೋರಾಟ ಮಾಡಿದರು. ಪೂಜಾರ ಜೊತೆಗೆ ಐದನೇ ವಿಕೆಟ್‌ಗೆ 45 ರನ್‌ ಸೇರಿಸಿದರು. 

ಆದರೆ, ಲಭಿಸಿದ ಒಂದು ಜೀವದಾನವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್‌ನಲ್ಲಿ ಔಟಾದರು. ರಿಷಭ್ ಪಂತ್  ಬಂದವರೇ ಬಿರುಸಿನ ಆಟಕ್ಕೆ ಕುದುರಿಕೊಂಡರು. 25 ರನ್‌ಗಳ ಕಾಣಿಕೆ ನೀಡಿ ಮರಳಿದರು. ಆರ್. ಅಶ್ವಿನ್ ಕೂಡ ಪಂತ್ ರೀತಿಯಲ್ಲಿಯೇ ಆಡಿದರು. ಇಷ್ಟೆಲ್ಲದರ ನಡುವೆಯೂ ಪೂಜಾರ ಗಟ್ಟಿಯಾಗಿ ನಿಂತು ಆಡಿದರು. ಬೌಲರ್‌ಗಳನ್ನು ಕಾಡಿದರು.

ಪುಟಾಣಿ ಪೋರನಿಗೆ ವಿರಾಟ್ ವಿಕೆಟ್ ಪಡೆಯುವ ಗುರಿ!

ಆಸ್ಟ್ರೇಲಿಯಾ ತಂಡದಲ್ಲಿ ಪುಣಾಣಿ ಬಾಲಕನೊಬ್ಬ ಸ್ಥಾನ ಪಡೆದಿದ್ದಾರೆ. ಆರು ವರ್ಷದ ಆರ್ಚಿ ಷಿಲ್ಡರ್ ಆತಿಥೇಯ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾನೆ. ಈ ಬಾಲಕನಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸುವ ಗುರಿ ಇದೆಯಂತೆ.

ಗುರುವಾರ ಬೆಳಿಗ್ಗೆ ತಂಡದ ಪಟ್ಟಿಯಲ್ಲಿ ಈ ಹೆಸರು ಮೂಡಿಬಂದಾಗ ಹಲವರಿಗೆ ಅಚ್ಚರಿಯಾಗಿತ್ತು.  ಆದರೆ ಕೆಲವೇ ಕ್ಷಣಗಳ ನಂತರ ಆಸ್ಟ್ರೇಲಿಯಾ ತಂಡದ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. 12ನೇ ಆಟಗಾರನಾಗಿ ಸ್ಥಾನ ಪಡೆದಿರುವ ಈ ಬಾಲಕನಿಗೆ ಹೃದ್ರೋಗವಿದೆ. ಆದರೆ, ಈ ಹುಡುಗನಿಗೆ ಕ್ರಿಕೆಟ್‌ ಎಂದರೆ ಜೀವ. ಕೆಲವು ವರ್ಷಗಳ ಕಾಲ ಚಿಕಿತ್ಸೆ ಪಡೆಯುವಾಗಲೂ ಪಂದ್ಯಗಳನ್ನು ವೀಕ್ಷಿಸುವುದನ್ನು ನಿಲ್ಲಿಸಿರಲಿಲ್ಲ. ಇದೀಗ ಚೇತರಿಸಿಕೊಂಡಿರುವ ಈ ಬಾಲಕನನ್ನು ಸಂತಸಪಡಿಸಲು ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಸ್ಥಾನ ನೀಡಿದೆ.


ಆಸ್ಟ್ರೇಲಿಯಾ ಆಟಗಾರರೊಂದಿಗೆ ಆರ್ಚಿ ಷಿಲ್ಡರ್

‘ಎಲ್ಲ ಆಟಗಾರರಿಗೂ ಈ ಪೋರ ಈಗ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದಾನೆ. ಸೌಮ್ಯ ಸ್ವಭಾವದ ಆರ್ಚಿ ಎಲ್ಲರೊಂದಿಗೆ ಬೆರೆತು ಆಟದಲ್ಲಿ ಭಾಗವಹಿಸುತ್ತಾನೆ. ಓಡಾಡುತ್ತಾನೆ’ ಎಂದು ತಂಡದ ಸಿಬ್ಬಂದಿ ಹೇಳುತ್ತಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್‌ ಗಳಿಸುತ್ತೇನೆ ಎಂದು ಆರ್ಚಿ ಹೇಳಿದ್ದಾನೆಂದೂ  ತಂಡದ ಮೂಲಗಳು ತಿಳಿಸಿವೆ. ಭಾರತದ ಕ್ರಿಕೆಟಿಗರನ್ನೂ ಈತ ಭೇಟಿಯಾಗಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು