‘ದೇಶದ ಚಾಲಕ ಶಕ್ತಿ ಸಂವಿಧಾನ’

7
ಸಂವಿಧಾನ ಓದು ಅಭಿಯಾನಕ್ಕೆ ಕೈಜೋಡಿಸಿದ ಸಂಘಟನೆಗಳು

‘ದೇಶದ ಚಾಲಕ ಶಕ್ತಿ ಸಂವಿಧಾನ’

Published:
Updated:
Deccan Herald

ಬಾಗಲಕೋಟೆ: ‘ಪಾಳೆಗಾರಿಕೆ, ಸಾಮ್ರಾಜ್ಯಶಾಹಿ, ವಸಾಹತುಶಾಹಿ ವ್ಯವಸ್ಥೆ ಹಿಮ್ಮೆಟ್ಟಿಸಿ ಪ್ರಜೆಗಳ ಕೈಗೆ ರಾಜಕೀಯ ಅಧಿಕಾರ ಕೊಟ್ಟು ಅದು ಸರಿದಾರಿಯಲ್ಲಿ ಸಾಗಲು ಇರುವ ಚಾಲಕ ಶಕ್ತಿಯೇ ಸಂವಿಧಾನ‘ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಂವಿಧಾನ ಓದು’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮಲ್ಲಿನ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ದೇಶವನ್ನು ಅರ್ಥಮಾಡಿಕೊಳ್ಳಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ನಮ್ಮ ಬೇರು, ಧರ್ಮ, ಜಾತಿಗಳು,ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ತಿಳಿದುಕೊಳ್ಳಬೇಕು. ಒಂದೊಂದು ಕ್ಷೇತ್ರದ ಬಗ್ಗೆಯೂ ಕನಿಷ್ಠ ತಿಳಿವಳಿಕೆ ಇದ್ದರೆ ಸಾಕು’ ಎಂದರು.

‘ರಾಜಕಾರಣದಲ್ಲಿನ ಮೌಲ್ಯ ಕುಸಿತ, ಮೂಲಭೂತವಾದ, ಕೋಮುವಾದ, ಭಯೋತ್ಪಾದನೆ, ಅಪರಾಧೀಕರಣ ಹೆಚ್ಚಿರುವ ಇಂದಿನ ವಿಪ್ಲವಗಳಿಗೆ ಸಂವಿಧಾನದ ತಿಳಿವಳಿಕೆ ಹಾಗೂ ಅದರ ಆಶಯಗಳ ಪಾಲನೆ ಮಾತ್ರ ಮದ್ದು ಆಗಿದೆ. ಭಿನ್ನ ಧರ್ಮ, ವಿಚಾರ, ಆಹಾರ, ಉಡುಪು, ಬದುಕಿನ ಕ್ರಮದ ನಡುವೆ ಬಹುತ್ವದ ಹಾದಿಯಲ್ಲಿ ಒಟ್ಟಾಗಿ ಗೌರವದಿಂದ, ಶಾಂತಿಯುತವಾಗಿ ಸಾಗಲು ಸಂವಿಧಾನ ದಾರಿದೀಪವಾಗಲಿದೆ’ ಎಂದು ಹೇಳಿದರು.

‘ಗುಪ್ತರು, ಮೌರ್ಯರು, ಮೊಘಲರು, ಬ್ರಿಟಿಷರು ಜೊತೆಗೆ 600 ಮಂದಿ ಸಣ್ಣ ಸಣ್ಣ ಸಂಸ್ಥಾನಗಳ ಅರಸರು ಈ ನೆಲವನ್ನು ಸ್ವತಂತ್ರವಾಗಿ ಆಳಿದ್ದಾರೆ. ಅವರ ಆಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯಲಾಯಿತು. ನಂತರ ಗಡಿ ಗುರುತಿಸಿ ರಾಷ್ಟ್ರಗೀತೆ, ಧ್ವಜ, ಲಾಂಛನ ಎಲ್ಲವನ್ನೂ ನಿಗದಿಪಡಿಸಲಾಯಿತು. ಅಸಲಿಗೆ ದೇಶದ ಪರಿಕಲ್ಪನೆ ಪರಿಪೂರ್ಣಗೊಂಡಿದ್ದೇ ಸಂವಿಧಾನ ರಚನೆಯ ನಂತರ’ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಕಟ್ಟಿ, ‘ಸಂವಿಧಾನದತ್ತ ಪ್ರಜಾಪ್ರಭುತ್ವ ವ್ಯವಸ್ಥೆ ಯಾವುದೇ ಹಂತದಲ್ಲಿ ಎಡವಲು ಸಾಧ್ಯವಿಲ್ಲ. ಹಾಗಾಗಿ ಸಂವಿಧಾನ ಓದು ಕೇವಲ ನ್ಯಾಯಾಧೀಶರು,ವಕೀಲರು, ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ದೇಶದ ಎಲ್ಲ ಜನರೂ ಓದಬೇಕು’ ಎಂದರು.

ಸಮಾರಂಭದಲ್ಲಿ ನಾಗಮೋಹನದಾಸ್ ಅವರು ಬರೆದ ಸಂವಿಧಾನ ಓದು ಪುಸ್ತಕವನ್ನು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಬಿಡುಗಡೆ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಬಿ.ಪಾಟೀಲ, ಎಸ್ಪಿ ಸಿ.ಬಿ.ರಿಷ್ಯಂತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಜಾತಾ ಪಾಟೀಲ, ಎಸ್.ಸಿ.ನಂದಿಮಠ ಕಾನೂನು ಕಾಲೇಜಿನ ಪ್ರಾಚಾರ್ಯೆ ಎಂ.ಪಿ.ಚಂದ್ರಿಕಾ, ಇಳಕಲ್ ಜನಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್, ಸಮುದಾಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಬದ್ನೂರ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !