ಶುಕ್ರವಾರ, ಮಾರ್ಚ್ 5, 2021
27 °C
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

ಪಂಚ ರಾಜ್ಯ ಫಲಿತಾಂಶ: ಲೋಕಸಭೆಗೆ ದಿಕ್ಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ 3 ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದ್ದು, ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘3 ರಾಜ್ಯಗಳ ಜತೆಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದ್ದು, ಅಧಿಕಾರಕ್ಕೇರುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದಕ್ಕೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಸಾಕ್ಷಿಯಾಗಲಿದೆ. ಹಿಂದಿನ ಲೋಕಸಭಾ ಚುನಾವಣೆ ವೇಳೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗ ವಿಶ್ವಾಸ ಕಳೆದುಕೊಂಡಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಸಚಿವಾಕಾಂಕ್ಷಿ ಶಾಸಕರ ಫೋನ್‌ ಕರೆ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಮಾಡಿರುವ ಆರೋಪ ತಳ್ಳಿ ಹಾಕಿದ ಸಚಿವರು, ‘ಬಿಜೆಪಿ ಮುಖಂಡರು ಈ ಹಿಂದೆ ಮಾಡಿದ್ದನ್ನು ಜ್ಞಾಪಿಸಿಕೊಂಡು ದೂರುತ್ತಿದ್ದಾರೆ. ಫೋನ್ ಕದ್ದಾಲಿಕೆ ಬಿಜೆಪಿಯ ದುರಾಭ್ಯಾಸ. ಅದು ಕಾಂಗ್ರೆಸ್‌ನ ಕೆಲಸವಲ್ಲ. ನಮ್ಮದೇ ಶಾಸಕರ ಫೋನ್‌ ಕರೆ ಕದ್ದಾಲಿಕೆ ಮಾಡುವ ಅಗತ್ಯವೂ ಇಲ್ಲ’ ಎಂದರು.

ಸುಳ್ಳು ಆರೋಪ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಲೆಕ್ಕಕ್ಕೆ ಸಿಗದ ಮೊತ್ತದ ಬಗ್ಗೆ ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಬಿಜೆಪಿ ಸುಳ್ಳು ಆರೋಪ ಮಾಡಿದೆ. ಸಾಮಾನ್ಯವಾಗಿ ಯಾವುದೇ ಯೋಜನೆಯ ಅಂದಾಜು ವೆಚ್ಚ ನಿಗದಿಯಾದ ನಂತರ ಅದು ಕಾರ್ಯಗತವಾಗುಷ್ಟರಲ್ಲಿ ವಿಳಂಬವಾಗಿ ಯೋಜನೆ ಗಾತ್ರ ಹೆಚ್ಚಳವಾಗುತ್ತದೆ. ಇದನ್ನು ಅವ್ಯವಹಾರ ಎನ್ನಲಾಗದು’ ಎಂದು ಸ್ಪಷ್ಟಪಡಿಸಿದರು.

‘ಸಿಎಜಿ ವರದಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಹೋಗಲಿದೆ. ಅಲ್ಲಿ ವಿಪಕ್ಷದವರೇ ಅಧ್ಯಕ್ಷರಾಗಿರುತ್ತಾರೆ. ಅಲ್ಲಿ ವರದಿ ಪರಾಮರ್ಶಿಸಿ ನಂತರ ಆರೋಪ ಮಾಡಲಿ. ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ₹ 618 ಕೋಟಿ ವಿವಿಧ ಖಾತೆಗಳಲ್ಲಿ ಉಳಿದಿರುವ ಆರೋಪ ಕೇಳಿಬಂದಿತ್ತು ಆ ಹಣ ವಾಪಸ್‌ ತರಿಸಿ ಬಳಕೆ ಮಾಡಲಾಗಿದೆ. ಆದರೆ, ಬಿಜೆಪಿ ವಾಸ್ತವ ಮರೆಮಾಚಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ’ ಎಂದು ಕಿಡಿಕಾರಿದರು.

ಬದ್ಧತೆ ಇಲ್ಲ: ‘ಬರ ನಿರ್ವಹಣೆಯಲ್ಲಿ ವಿಫಲ ಎಂದು ಆರೋಪಿಸುವ ಬದಲು ಬಿಜೆಪಿಯವರಿಗೆ ಬದ್ಧತೆ ಇದ್ದರೆ ಕೇಂದ್ರದ ಮೇಲೆ ಒತ್ತಡ ತಂದು ಬರ ಮತ್ತು ಬೆಳೆ ನಷ್ಟ ಪರಿಹಾರಕ್ಕಾಗಿ ರಾಜ್ಯಕ್ಕೆ ಹೆಚ್ಚಿನ ಹಣ ಮಂಜೂರು ಮಾಡಿಸಲಿ’ ಎಂದು ಸವಾಲು ಹಾಕಿದರು.

‘ಬರದಲ್ಲೂ ರಾಜಕೀಯ ಮಾಡುವ ಬಿಜೆಪಿಯವರಿಗೆ ಬದ್ಧತೆ ಇಲ್ಲ. ಕೇಂದ್ರದ ಮೇಲೆ ಬರ ಪರಿಹಾರಕ್ಕೆ ಒತ್ತಡ ಹಾಕುವುದಿರಲಿ ಅಲ್ಲಿ ಹೋಗಿ ಕೇಳುವ ಮನಸ್ಸು ಸಹ ಇಲ್ಲ. ಅವರದು ಬರೀ ನಾಟಕ, ಮೊಸಳೆ ಕಣ್ಣೀರು’ ಎಂದು ಲೇವಡಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು