ಡಿ.17ಕ್ಕೆ ಬೆಳಗಾವಿ ಚಲೋ

7

ಡಿ.17ಕ್ಕೆ ಬೆಳಗಾವಿ ಚಲೋ

Published:
Updated:

ಕೋಲಾರ: ‘ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರವು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದನ್ನು ಖಂಡಿಸಿ ಡಿ.17ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ರಿಪಬ್ಲಿಕನ್‌ ಪಾರ್ಟಿ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷ ಮತ್ತು ಸಮತಾ ಸೈನಿಕ ದಳ ವತಿಯಿಂದ ಬೆಳಗಾವಿ ಚಲೋ ಹಾಗೂ ಭೀಮಶಕ್ತಿ ಅಧಿವೇಶನ ನಡೆಯಲಿದ್ದು, ಜಿಲ್ಲೆಯಿಂದ 1 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ದಲಿತರ 12 ಬೇಡಿಕೆ ಈಡೇರಿಸುವಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುತ್ತದೆ’ ಎಂದರು.

‘ಸಮ್ಮಿಶ್ರ ಸರ್ಕಾರದ 6 ತಿಂಗಳ ಸಾಧನೆ ಶೂನ್ಯ. ರೈತ ವಿರೋಧಿಯಾಗಿರುವ ಈ ಸರ್ಕಾರ ಬಡವರು ಮತ್ತು ದಲಿತರ ಪರವಾದ ಕಾರ್ಯಕ್ರಮ ರೂಪಿಸುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಸಮರ್ಪಕವಾಗಿ ಸಾಲ ಮನ್ನಾ ಮಾಡುತ್ತಿಲ್ಲ’ ಎಂದು ದೂರಿದರು.

‘ಸಾಲ ನೀಡಿರುವ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ಜಾರಿ ಮಾಡಿ ಕಿರುಕುಳ ನೀಡುತ್ತಿರುವುದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕುಮಾರಸ್ವಾಮಿ ಅವರು ಹೊಲ ಗದ್ದೆಗಳಿಗೆ ಹೋಗಿ ಬರುವ ನಾಟಕವಾಡುತ್ತಾ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಹಣದ ದಂಧೆ: ‘ಸರ್ಕಾರ ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಯೋಜನೆ ಜಾರಿ ಮಾಡುತ್ತಿಲ್ಲ. ಭೂಮಿ ಹೊಂದಿರುವ ಸಾವಿರಾರು ಕೃಷಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಬಡವರನ್ನು ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಇಂದಿರಾ ಕ್ಯಾಂಟಿನ್ ಯೋಜನೆ ಹಣ ಮಾಡುವ ದಂಧೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್ಸಿ, ಎಸ್ಟಿ ನೌಕರರಿಗೆ ಹಿಂಬಡ್ತಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು. ಭೂ ಪರಭಾರೆ ನಿಷೇಧ ಕಾಯ್ದೆ ವಿರುದ್ಧ ಧ್ವನಿ ಎತ್ತಬೇಕು. ದಲಿತರ ಅಭ್ಯುದಯಕ್ಕೆ ರೂಪಿಸಿರುವ ಶಾಸಕರ ಅಧ್ಯಕ್ಷತೆ ಸಮಿತಿ ರದ್ದಾಗಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ ಮೀಸಲಾತಿ ತರಬೇಕು. ಸರ್ಕಾರದ ಯೋಜನೆಗಳ ಆದಾಯ ಮಿತಿ ಮಾನದಂಡ ತೆಗೆಯಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಯ್ಯ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಚಿಟ್ಟಿಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !