ಲೈಕೋಪಿನ್ ಜೀವಸತ್ವದಿಂದ ಹಾಲು ಹೆಚ್ಚಳ

7
ಟೊಮೆಟೊದಲ್ಲಿರುವ ರಾಸಾಯನಿಕ: ಚಿನ್ಮಯ ವಿದ್ಯಾಲಯ ವಿದ್ಯಾರ್ಥಿಗಳ ಹೇಳಿಕೆ

ಲೈಕೋಪಿನ್ ಜೀವಸತ್ವದಿಂದ ಹಾಲು ಹೆಚ್ಚಳ

Published:
Updated:

ಕೋಲಾರ: ‘ಟೊಮೆಟೊ ಹಣ್ಣಿನಲ್ಲಿರುವ ಲೈಕೋಪಿನ್ ಜೀವಸತ್ವವನ್ನು ಪಶು ಆಹಾರದ ರೂಪದಲ್ಲಿ ಜಾನುವಾರುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ’ ಎಂದು ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಾದ ಆರ್.ಶ್ರೀಶ ಮತ್ತು ಅಗಸ್ತ್ಯ ಆರ್.ಕುಮಾರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಟೊಮೆಟೊ ಪ್ರಮುಖ ಬೆಳೆಯಾಗಿದ್ದು, ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಟೊಮೆಟೊ ಬೀದಿಗೆ ಚೆಲ್ಲುತ್ತಾರೆ. ಇದರ ಬದಲು ಟೊಮೆಟೊ ಸರಕನ್ನು ಮೇವಾಗಿ ಜಾನುವಾರುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ’ ಎಂದರು.

‘ಟೊಮೆಟೊದಲ್ಲಿನ ಲೈಕೋಪಿನ್ ಜೀವಸತ್ವದಿಂದ ಪಶು ಆಹಾರ ತಯಾರಿಸುವ ಬಗ್ಗೆ ಸಂಶೋಧನೆ ನಡೆಸಿದ್ದೇವೆ. ರಾಜ್ಯ ವಿಜ್ಞಾನ ಪರಿಷತ್ ಇತ್ತೀಚೆಗೆ ನಡೆಸಿದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಲೈಕೋಪಿನ್ ಜೀವಸತ್ವವನ್ನು ಲಾಭದಾಯಕವಾಗಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದೇವೆ’ ಎಂದು ಹೇಳಿದರು.

‘ಕೋಲಾರ ಮತ್ತು ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ 6 ಸಾವಿರ ಕ್ವಿಂಟಾಲ್‌ ಟೊಮೆಟೊ ಆವಕವಿದ್ದು, ಇದರಲ್ಲಿ ಶೇ 10ರಷ್ಟು ಸರಕು ತಿರಸ್ಕೃತಗೊಳ್ಳುತ್ತಿದೆ. ಟೊಮೆಟೊ ರಸ್ತೆಗೆ ಚೆಲ್ಲುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಟೊಮೆಟೊ ಕೊಳೆಯುವ ಮುನ್ನ ಸಂಸ್ಕರಿಸಿ, ಹಣ್ಣುಗಳಲ್ಲಿನ ಲೈಕೋಪಿನ್‌ ಅಂಶ ಬೇರ್ಪಡಿಸಿ ಪಶು ಆಹಾರವಾಗಿ ಹಸುಗಳಿಗೆ ನೀಡಿದರೆ ಹಾಲಿನ ಪ್ರಮಾಣ ಶೇ 8ರಷ್ಟು ಹೆಚ್ಚಲಿದೆ’ ಎಂದು ವಿವರಿಸಿದರು.

ಸಕಾರಾತ್ಮಕ ಸ್ಪಂದನೆ: ‘ಲೈಕೋಪಿನ್‌ ಜೀವಸತ್ವವನ್ನು ಪಶು ಆಹಾರವಾಗಿ ಬಳಸಬಹುದಾದ ಸಂಗತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಅವರು ಪಶು ಆಹಾರ ಘಟಕ ಸ್ಥಾಪನೆಯ ಭರವಸೆ ನೀಡಿದ್ದಾರೆ. ಎಪಿಎಂಸಿ ಅಧ್ಯಕ್ಷ ನಾಗರಾಜ್ ಅವರು ಸಹ ಪಶು ಆಹಾರ ಘಟಕ ಸ್ಥಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ 1.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಪಶು ಆಹಾರ ಘಟಕ ಸ್ಥಾಪನೆ ಸಂಬಂಧ ಜಿಲ್ಲಾ ನಿರ್ಮಿತಿ ಕೇಂದ್ರದವರು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಬಹುದು’ ಎಂದು ಹೇಳಿದರು.

ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಚಂದ್ರಪ್ರಕಾಶ್, ಪ್ರಾಂಶುಪಾಲ ಅನಂತಪದ್ಮನಾಭ್, ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !