ಬೆಂಗರೆಯಲ್ಲಿ ಗಸ್ತು ಹೆಚ್ಚಿಸಲು ಆಗ್ರಹ

7
ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಪ್ರತಿಧ್ವನಿ

ಬೆಂಗರೆಯಲ್ಲಿ ಗಸ್ತು ಹೆಚ್ಚಿಸಲು ಆಗ್ರಹ

Published:
Updated:
Deccan Herald

ಮಂಗಳೂರು: ಇತ್ತೀಚೆಗೆ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ತೋಟ ಬೆಂಗರೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಾದಕದ್ರವ್ಯ ವ್ಯಸನಿಗಳ ಹಾವಳಿ ಹೆಚ್ಚಿದ್ದು, ತಕ್ಷಣದಿಂದಲೇ ಪೊಲೀಸ್ ಗಸ್ತು ಹೆಚ್ಚಿಸಬೇಕೆಂಬ ಬೇಡಿಕೆ ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ಸದಾಶಿವ, ‘ಪೊಲೀಸರ ಭಯವಿಲ್ಲದ ಕಾರಣ ಬೆಂಗರೆಯಲ್ಲಿ ದಲಿತ ಯುವತಿ ಮೇಲೆ ಹಗಲಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಯಿತು. ಪಣಂಬೂರು ಠಾಣೆಯ ಪೊಲೀಸರು ಸರಿಯಾಗಿ ಗಸ್ತು ತಿರುಗುತ್ತಿಲ್ಲ. ಪಿಸಿಆರ್‌ ವಾಹನಗಳಿಂದ ಇಳಿಯವುದೇ ಇಲ್ಲ. ಇದರಿಂದಾಗಿ ಬೆಂಗರೆ ಮತ್ತು ತಣ್ಣೀರುಬಾವಿ ಪ್ರದೇಶದಲ್ಲಿ ಮದ್ಯ, ಮಾದಕವ್ಯಸನಿಗಳ ಹಾವಳಿ ಹೆಚ್ಚಾಗಿದೆ’ ಎಂದು ದೂರಿದರು.

‘ಬೆಂಗರೆ ಮತ್ತು ತಣ್ಣೀರುಬಾವಿ ಪ್ರದೇಶದಲ್ಲಿ ಈಗಾಗಲೇ ಗಸ್ತು ಹೆಚ್ಚಿಸಲಾಗಿದೆ. ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಜರುಗಿಸಲಾಗುವುದು’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಉತ್ತರಿಸಿದರು.

ಪೊಲೀಸರಿಗೆ ಅಭಿನಂದನೆ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ವಿವಿಧ ದಲಿತ ಸಂಘಟನೆಗಳ ಮುಖಂಡರು ನಗರದ ಪೊಲೀಸರನ್ನು ಅಭಿನಂದಿಸಿದರು. ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸಂತ್ರಸ್ತೆಗೆ ನ್ಯಾಯ ದೊರಕಿಸಲು ನೆರವಾಗುವಂತೆ ಮನವಿ ಮಾಡಿದರು.

‘ಸಂತ್ರಸ್ತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 4.12 ಲಕ್ಷ ಪರಿಹಾರ ವಿತರಿಸಲಾಗಿದೆ. ಆಕೆಗೆ ಸರ್ಕಾರಿ ನೌಕರಿ ನೀಡುವಂತೆ ಶಿಫಾರಸು ಮಾಡಲು ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ನಾಗರಿಕ ಹಕ್ಕುಗಳ ರಕ್ಷಣಾ ನಿರ್ದೇಶನಾಲಯದ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

ಗಂಡನಿಂದ ಕಿರುಕುಳ:

‘ವಾಮಂಜೂರಿನ ಮಂಜುಳಾ ಎಂಬುವವರು ಎಂಟು ವರ್ಷದ ಹಿಂದೆ ಗ್ಲಾಡಿನ್‌ ಎಂಬುವವರನ್ನು ಮದುವೆಯಾಗಿದ್ದು, ಪತಿಯ ಕುಟುಂಬ ಕಿರುಕುಳ ನೀಡುತ್ತಿದೆ’ ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ದೂರು ಹೇಳಿದರು.

ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡುವಂತೆ ಸೂಚಿಸಿದ ಡಿಸಿಪಿ, ‘ಆರಂಭದಲ್ಲಿ ಪತಿಯ ಕುಟುಂಬದವರನ್ನು ಕರೆಸಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು. ಮಹಿಳೆಯ ಪತಿ ಮತ್ತು ಆಕೆಯ ಕುಟುಂಬ ಸಹಕರಿಸದಿದ್ದರೆ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

ದಲಿತರ ಮೇಲೆ ದೌರ್ಜನ್ಯ ನಡೆದಿರುವ ಕುರಿತು ದೂರು ನೀಡಿದರೆ ಬಜ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸುವುದಿಲ್ಲ ಎಂದು ಕೈಕಂಬದ ಉಮೇಶ್‌ ಎಂಬುವವರು ಆರೋಪಿಸಿದರು. ದೂರಿನ ಪ್ರತಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವಂತೆ ಡಿಸಿಪಿ ಸೂಚಿಸಿದರು.

‘ಉಳ್ಳಾಲ ಠಾಣೆಯಲ್ಲಿ ಮಾಸಿಕ ಕುಂದುಕೊರತೆ ಸಭೆ ನಡೆಸುತ್ತಿಲ್ಲ. ಉಳ್ಳಾಲದ ದಲಿತ ಕಾಲೋನಿಗಳ ಪ್ರದೇಶದಲ್ಲಿ ಪುಂಡರು, ಮಾದಕ ವ್ಯಸನಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಿ’ ಎಂದು ಗಿರೀಶ್‌ಕುಮಾರ್‌ ಆಗ್ರಹಿಸಿದರು.

ಸೂಟರ್‌ಪೇಟೆ ನಿವಾಸಿ ಎಸ್‌.ಟಿ.ಈಶ್ವರ್‌ ಮಾತನಾಡಿ, ‘ಸೂಟರ್‌ಪೇಟೆಯ ಕೆಲವು ರಸ್ತೆಗಳಲ್ಲಿ ಮಧ್ಯರಾತ್ರಿ ವೇಳೆ ಮದ್ಯ ಮತ್ತು ಮಾದಕ ವ್ಯಸನಿಗಳ ಹಾವಳಿ ಇದೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವುದೇ ವ್ಯಕ್ತಿಗಳಿಗೆ ಅನ್ಯಾಯ ಆಗಿರುವುದು ಮತ್ತು ಅಕ್ರಮ ನಡೆದಿರುವುದು ಕಂಡುಬಂದಲ್ಲಿ ಮಾಹಿತಿ ಒದಗಿಸಬೇಕು ಎಂದು ವೇದಮೂರ್ತಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !