ಮನೆಯೊಳಗೆ ಮಹಿಳೆ ಸುರಕ್ಷಿತಳೇ? : ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಪ್ರಶ್ನೆ

7

ಮನೆಯೊಳಗೆ ಮಹಿಳೆ ಸುರಕ್ಷಿತಳೇ? : ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಪ್ರಶ್ನೆ

Published:
Updated:
Deccan Herald

ಮಂಗಳೂರು: ‘ಭಾರತದಲ್ಲಿ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುವ ಬಲಪಂಥೀಯ ಶಕ್ತಿಗಳು ಪ್ರಬಲಗೊಂಡಿರುವ ದಿನಗಳಲ್ಲಿ ಮಹಿಳೆ ಮನೆಯೊಳಗೆ ಸುರಕ್ಷಿತಳಾಗಿದ್ದಾಳೆಯೇ’ ಎಂದು ಸುಪ್ರೀಂಕೋರ್ಟ್‌ ಹಿರಿಯ ವಕೀಲೆ, ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌ ಪ್ರಶ್ನಿಸಿದರು.

ಹೊಸತು ಪತ್ರಿಕೆ, ಎಂ.ಎಸ್‌.ಕೃಷ್ಣನ್‌ ಸ್ಮರಣ ಸಂಸ್ಥೆ, ಸಮದರ್ಶಿ ವೇದಿಕೆಗಳು ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಾಗೂ ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಸಹಯೋಗದಲ್ಲಿ ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ’ ಕುರಿತು ಅವರು ಮಾತನಾಡಿದರು.

ಆರ್‌ಎಸ್‌ಎಸ್‌ ಸೇರಿದಂತೆ ಮನುವಾದಿ ಶಕ್ತಿಗಳು ಮಹಿಳೆಯರು, ಮಕ್ಕಳನ್ನು ಹೆರುವ ಯಂತ್ರಗಳಾಗಿ ಮನೆಯೊಳಗೇ ಇರಬೇಕು ಎಂದು ಪ್ರತಿಪಾದಿಸುತ್ತಿವೆ. ಆದರೆ, ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಶೇಕಡ 80ರಷ್ಟು ಪ್ರಕರಣಗಳು ಮನೆಯೊಳಗೇ ಘಟಿಸುತ್ತಿವೆ ಎಂಬುದು ಅಧ್ಯಯನಗಳಿಂದ ಬಹಿರಂಗವಾಗಿದೆ. ಮನುವಾದಿ ಬಲಪಂಥೀಯ ಶಕ್ತಿಗಳ ಪ್ರಾಬಲ್ಯದ ದಿನಗಳಲ್ಲಿ ಮಹಿಳೆ ಮನೆಯೊಳಗೂ ಸುರಕ್ಷಿತಳಾಗಿ ಉಳಿಯುವುದು ಕಷ್ಟ ಎಂಬ ಅಭಿಪ್ರಾಯ ಮೂಡುತ್ತಿದೆ ಎಂದರು.

‘ಹಿಂದೂ ಧರ್ಮದ ಉಳಿವಿಗೆ ಮಹಿಳೆಯರು ಗಂಡು ಮಕ್ಕಳನ್ನೇ ಹೆರುವ ಯಂತ್ರಗಳಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಬಹಿರಂಗವಾಗಿ ಹೇಳುತ್ತಾರೆ. ಅದರ ರಾಜಕೀಯ ಮುಖವಾಣಿಯಾಗಿರುವ ಬಿಜೆಪಿಯದ್ದೂ ಅದೇ ವಾದ. ಮಹಿಳೆಯರು ಎರಡನೇ ದರ್ಜೆ ನಾಗರಿಕರು ಎಂದು ಪ್ರತಿಪಾದಿಸುವ ಮನುಸ್ಮೃತಿಯನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬಹಿರಂಗವಾಗಿಯೇ ಅಪ್ಪಿಕೊಂಡಿವೆ’ ಎಂದು ಹೇಳಿದರು.

ಲಿಂಗ ತಾರತಮ್ಯ ಒಂದು ಧರ್ಮಕ್ಕೆ ಸೀಮಿತವಲ್ಲ. ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಬಳಸುವುದನ್ನು ಇಸ್ಲಾಂ ಧರ್ಮದ ಹೆಸರಿನಲ್ಲಿ ವಿರೋಧಿಸಲಾಗುತ್ತಿದೆ. ಕೆಥೋಲಿಕ್‌ ಕ್ರೈಸ್ತ ಧರ್ಮೀಯರ ಬೇಡಿಕೆಯಂತೆ ಹಲವು ದೇಶಗಳು ಜೀವಕ್ಕೆ ಅಪಾಯವಿರುವ ಸಂದರ್ಭದಲ್ಲೂ ಗರ್ಭಪಾತಕ್ಕೆ ಅವಕಾಶ ನೀಡುತ್ತಿಲ್ಲ ಎಂದರು.

ಹಕ್ಕುಗಳ ದಮನ:

ಈಗ ದೇಶದ ಆಡಳಿತ ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಗುಂಪುಗಳ ಕೈಯಲ್ಲಿ ಸಿಲುಕಿದಂತೆ ಭಾಸವಾಗುತ್ತಿದೆ. ಆಹಾರ, ಧಾರ್ಮಿಕ ನಂಬಿಕೆ, ಉಡುಗೆ ತೊಡುಗೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಉತ್ಪ್ರೇಕ್ಷಿತ ರಾಷ್ಟ್ರೀಯತೆಯ ಹೆಸರಿನಲ್ಲಿ ಮಹಿಳೆಯರು ಮತ್ತು ದಮನಿತ ಸಮುದಾಯಗಳ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತನ್ನ ಆಯ್ಕೆಗೆ ತಕ್ಕಂತೆ ಬದುಕುವ ಸ್ವಾತಂತ್ರ್ಯ ಮಹಿಳೆಗೆ ದೊರಕಬೇಕು. ದೇಶದಲ್ಲಿ ಯಾವುದೇ ಸರ್ಕಾರವೂ ಮಹಿಳೆಯರಿಗೆ ಈ ವಿಚಾರದಲ್ಲಿ ನ್ಯಾಯ ಒದಗಿಸಿಲ್ಲ. ಎಲ್ಲ ಸಮಯದಲ್ಲೂ ನ್ಯಾಯಾಂಗದಿಂದಲೇ ಅದು ದಕ್ಕಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಎಲ್ಲ ಕಾಲಘಟ್ಟದಲ್ಲೂ ಮಹಿಳೆಯರಿಗೆ ನ್ಯಾಯ ನಿರಾಕರಿಸಲು ಯತ್ನಿಸುತ್ತಲೇ ಬಂದಿವೆ ಎಂದರು.

ತಪ್ಪು ಹುಡುಕಬಾರದು: ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಮಹಿಳೆಯರು ದೇಶದ ದೊಡ್ಡ ಶ್ರಮಿಕ ವರ್ಗ. ಅಸಂಘಟಿತ ವಲಯದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತವೆ. ನಗರದಲ್ಲಿನ ಹಲವು ಮಹಿಳೆಯರು ಕೆಲಸದ ಸ್ಥಳಗಳಲ್ಲಿ ತಮ್ಮ ಮೇಲೆ ನಡೆದಿದ್ದ ದೌರ್ಜನ್ಯದ ಪ್ರಕರಣಗಳನ್ನು ‘ಮೀ ಟೂ’ ಹೆಸರಿನಲ್ಲಿ ಬಹಿರಂಗಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತವೆ ಎಂಬುದು ನಿಜ. ಆದರೆ, ಅದೇ ಕಾರಣಕ್ಕಾಗಿ ಮೀ ಟೂ ಚಳವಳಿಯಲ್ಲಿ ತಪ್ಪು ಹುಡುಕುವುದು ಸಲ್ಲ’ ಎಂದು ಹೇಳಿದರು.

ಭಾರತದ ಸಂವಿಧಾನವು ಎಲ್ಲ ಸ್ತರಗಳಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತದೆ. ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ನ್ಯಾಯಾಂಗ ಮಾತ್ರ ಪಾಲಿಸುತ್ತಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಅವು ತಮಗೆ ಸಂಬಂಧಿಸಿದ ವಿಚಾರಗಳಲ್ಲಿ ಎಂಬ ಭಾವನೆ ಹೊಂದಿವೆ. ಅದು ಬದಲಾಗದಿದ್ದರೆ ಲಿಂಗ ಸಮಾನತೆ ಜಾರಿ ಆಗದು ಎಂದರು.

ಬಿ.ವಿ.ಕಕ್ಕಿಲ್ಲಾಯ ಅವರ ಪುತ್ರ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅತಿಥಿಯನ್ನು ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !