ಗಣರಾಜ್ಯೋತ್ಸವ ಯಶಸ್ಸಿಗೆ ಸಹಕರಿಸಿ

7

ಗಣರಾಜ್ಯೋತ್ಸವ ಯಶಸ್ಸಿಗೆ ಸಹಕರಿಸಿ

Published:
Updated:
Prajavani

ಕೋಲಾರ: ‘ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ನಗರದ ಶಾಲೆಗಳ ಸಾಂಸ್ಕೃತಿಕ ಹಾಗೂ ಪಥಸಂಚಲನ ತಂಡಗಳು ಪೂರ್ವ ತಯಾರಿ ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ತಿಳಿಸಿದರು.

ಗಣರಾಜ್ಯೋತ್ಸವದ ಸಿದ್ಧತೆ ಸಂಬಂಧ ಇಲ್ಲಿ ಬುಧವಾರ ನಡೆದ ನಗರದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಶಾಲೆಗಳ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕು’ ಎಂದರು.

‘ಮಕ್ಕಳನ್ನು ಈಗಿನಿಂದಲೇ ಕಾರ್ಯಕ್ರಮಕ್ಕೆ ಸಿದ್ಧಗೊಳಿಸಿ. ಎಲ್ಲಾ ಶಾಲೆಗಳಲ್ಲೂ ಬೆಳಿಗ್ಗೆ ಧ್ವಜಾರೋಹಣ ಹಾಗೂ ಕಾರ್ಯಕ್ರಮ ನಡೆಸಬೇಕು. ಬಳಿಕ ಶಾಲೆಯ ಸಾಂಸ್ಕೃತಿಕ ಹಾಗೂ ಪಥಸಂಚಲನ ತಂಡಗಳ ಸದಸ್ಯರನ್ನು ಬೆಳಿಗ್ಗೆ 8-.30ಕ್ಕೆ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಕರೆದುಕೊಂಡು ಬರಬೇಕು’ ಎಂದು ಸೂಚಿಸಿದರು.

‘ದೇಶ ಗಣರಾಜ್ಯವಾದ ಮತ್ತು ಏಕತೆಯ ಸುದಿನವಾದ ಗಣರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಶಿಸ್ತು, ಸಂಯಮ ಕಾಪಾಡಬೇಕು. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು. ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ’ ಎಂದು ಹೇಳಿದರು.

22ಕ್ಕೆ ತಾಲೀಮು: ‘ಗಣರಾಜ್ಯೋತ್ಸವದಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ಟಿ.ಚನ್ನಯ್ಯ ರಂಗಮಂದಿರದಲ್ಲಿ ಜ.22ರಂದು ನಡೆಯಲಿದೆ’ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಮಾಹಿತಿ ನೀಡಿದರು.

’ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ನೇತೃತ್ವದಲ್ಲಿ ಜ.24ರಂದು ಮಧ್ಯಾಹ್ನ 2 ಗಂಟೆಗೆ ಹಾಗೂ 25ರಂದು ಬೆಳಿಗ್ಗೆ 10ಕ್ಕೆ ಪಥಸಂಚಲನದ ತಾಲೀಮು ನಡೆಯಲಿದೆ. ಎಲ್ಲಾ ಶಾಲಾ ತಂಡಗಳು ತಪ್ಪದೇ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶ್ರೀರಾಮರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !