ಎನ್‌ಜಿಟಿ ಆದೇಶ ವಜಾ ಕೋರಿ ‘ಸುಪ್ರೀಂ’ಗೆ ಮೇಲ್ಮನವಿ

7

ಎನ್‌ಜಿಟಿ ಆದೇಶ ವಜಾ ಕೋರಿ ‘ಸುಪ್ರೀಂ’ಗೆ ಮೇಲ್ಮನವಿ

Published:
Updated:

ನವದೆಹಲಿ: ಬೆಂಗಳೂರಿನ ಕೆರೆಗಳ ಸುತ್ತಲಿನ 75 ಮೀಟರ್ ಪ್ರದೇಶದ ಬಫರ್ ವಲಯದ ನಿಯಮ ರೂಪಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಆದೇಶ ವಜಾಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಿದೆ.

‘ಕೆರೆಗಳ ಬಳಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ ಖರೀದಿಸಿರುವ ಅಂದಾಜು 30,000 ಜನ ಆತಂಕ ಎದುರಿಸುತ್ತಿದ್ದು, ಎನ್‌ಜಿಟಿ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಲಾದ ಈ ಅರ್ಜಿಯ ವಿಚಾರಣೆಯನ್ನು ಮುಂದಿನ ಮಂಗಳವಾರ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಎಸ್‌. ಅಬ್ದುಲ್‌ ನಜೀರ್‌ ಅವರಿದ್ದ ಪೀಠ ತಿಳಿಸಿದೆ.

ಕೆರೆಗಳ ಸಂರಕ್ಷಣೆಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಯಮಾವಳಿ ಕಡೆಗಣಿಸಿ ಎನ್‌ಜಿಟಿ ಆದೇಶ ನೀಡಿದೆ ಎಂದು ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ನ್ಯಾಯಪೀಠಕ್ಕೆ ತಿಳಿಸಿದರು.

ರಾಜ್ಯ ಸರ್ಕಾರದ ಪರವಾನಗಿ ಪಡೆದು ಕೆರೆಗಳ ಸುತ್ತ ಕಟ್ಟಲಾಗಿರುವ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಎನ್‌ಜಿಟಿ ಆದೇಶದಿಂದಾಗಿ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅವರು ವಿವರಿಸಿದರು.

ಸ್ವಯಂಸೇವಾ ಸಂಸ್ಥೆಯಾದ ಫಾರ್ವರ್ಡ್‌ ಫೌಂಡೇಷನ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿ ಪ್ರಧಾನ ಪೀಠವು, ಬೆಂಗಳೂರಿನ ಕೆರೆಗಳ ಸುತ್ತಲಿನ ಬಫರ್‌ ವಲಯಕ್ಕೆ ಸಂಬಂಧಿಸಿದಂತೆ ಮೊದಲಿದ್ದ 50 ಮೀಟರ್‌, 35 ಮೀಟರ್‌ ಹಾಗೂ ರಾಜಕಾಲುವೆಗಳ 25 ಮೀಟರ್‌ ವ್ಯಾಪ್ತಿಯನ್ನು 75 ಮೀಟರ್‌ಗೆ ವಿಸ್ತರಿಸಿ 2016ರ ಮೇ 4ರಂದು ಆದೇಶ ನೀಡಿತ್ತು.

ಅಗರ ಮತ್ತು ಬೆಳ್ಳಂದೂರು ಕೆರೆಗಳ ವ್ಯಾಪ್ತಿಯಲ್ಲಿ ಪರಿಸರಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದ ಎರಡು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ₹ 139.85 ಕೋಟಿ ದಂಡ ವಿಧಿಸಿತ್ತು. ಆದರೆ, ದಂಡ ವಿಧಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !