ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು: ಶಾಸಕ ಡಾ.ಕೆ.ಸುಧಾಕರ್

7
ಸಂಚಲನ ಮೂಡಿಸಿದ ಹೇಳಿಕೆ

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು: ಶಾಸಕ ಡಾ.ಕೆ.ಸುಧಾಕರ್

Published:
Updated:
Prajavani

ಚಿಕ್ಕಬಳ್ಳಾಪುರ: ‘ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಯಾರಿಗೆ ಗೊತ್ತಿದೆ? ಯಾವುದನ್ನು ನಿರಾಕರಿಸಲಾಗುವುದಿಲ್ಲ. ಪದೇ ಪದೇ ನನ್ನನ್ನೇ ಗುರಿ ಮಾಡುತ್ತಿದ್ದರೆ ಮಾಡಲಿ ಬಿಡಿ. ನಾನು ದೊಡ್ಡ ಹೀರೋ ಆಗುತ್ತೇನೆ. ಗುರಿ ಮಾಡಿದಷ್ಟು ಒಳ್ಳೆಯದೇ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ನಿಗಮ, ಮಂಡಳಿಯಲ್ಲಿ ಒಂದು ಅವಕಾಶ ನೀಡಿ ಎಂದು ನಾನು ಕೇಳಿಲ್ಲ. ಬದಲು ನಮ್ಮ ಕ್ಷೇತ್ರದಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಹೈಕಮಾಂಡ್‌ಗೆ ಕೇಳಿದ್ದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಖಂಡರ ಬಳಿ ಕರೆದುಕೊಂಡು ಹೋಗಿ ಅವರಿಗೊಂದು ಅಧ್ಯಕ್ಷ ಹುದ್ದೆ ಕೊಡಿಸುವಂತೆ ಮನವಿ ಮಾಡಿದ್ದೆ’ ಎಂದು ತಿಳಿಸಿದರು.

‘ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿರುವುದು ಕಾಂಗ್ರೆಸ್ ಹೈಕಮಾಂಡ್. ಆದ್ದರಿಂದ ಕಾಂಗ್ರೆಸ್‌ ಶಿಫಾರಸು ಮಾಡಿದ ಪಟ್ಟಿಯಲ್ಲಿ ಮುಖ್ಯಮಂತ್ರಿ ಅವರು ಕೆಲ ಹೆಸರು ಕೈಬಿಟ್ಟಿದ್ದರೆ ಅದಕ್ಕೆ ನಮ್ಮ ಹೈಕಮಾಂಡೇ ಉತ್ತರ ಕೊಡಬೇಕು. ಹೈಕಮಾಂಡ್‌ ಈ ಬಗ್ಗೆ ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಭಾವಿಸಿರುವೆ’ ಎಂದರು.

‘ನಮ್ಮ ಹೆಸರು ಎರಡನೇ ಪಟ್ಟಿ ಬರುತ್ತೋ ಏನೋ ಗೊತ್ತಿಲ್ಲ. ಇನ್ನೊಂದು ಪಟ್ಟಿಗೆ ಕಾಯೋಣ. ಸಮ್ಮಿಶ್ರ ಸರ್ಕಾರಕ್ಕೆ ಉಜ್ವಲ ಭವಿಷ್ಯವಿದೆ ಎಂದು ರಾಹುಲ್ ಗಾಂಧಿ ಅವರು ನಂಬಿದ್ದಾರೆ. ಈ ಸರ್ಕಾರ ಮುಂದುವರಿಯಬೇಕು ಎನ್ನುವುದು ನಮ್ಮೆಲ್ಲರ ಆಶಯ. ಲೋಕಸಭೆ ಸ್ಥಾನಗಳ ಹಂಚಿಕೆ ವಿಚಾರವಾಗಿ ನಮ್ಮ ನಾಯಕರು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೈತ್ರಿ ಮಾಡಿಕೊಳ್ಳುವುದರಲ್ಲಿ ಜೆಡಿಎಸ್‌ನವರೇ ಉತ್ತಮ. ಮೈತ್ರಿಯನ್ನು ಅವರಿಗಿಂತ ಚೆನ್ನಾಗಿ ಮಾಡಿಕೊಂಡು ಹೋಗಲು ಇನ್ಯಾರಿಗೂ ಗೊತ್ತಿಲ್ಲ. ಅವರಿಗೆ ಎಲ್ಲರ ಜತೆ ಹೇಗೆ ಮೈತ್ರಿ ಮಾಡಬೇಕು ಎನ್ನುವುದು ಗೊತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಡಾ.ಕೆ.ಸುಧಾಕರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿತ್ತು. ಆದರೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಶಿಫಾರಸು ಮಾಡಿದ್ದ 19 ಶಾಸಕರ ಪಟ್ಟಿಯ ಪೈಕಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೇಮಕಾತಿ ಆದೇಶದಿಂದ ಕೆಲ ಶಾಸಕರ ಹೆಸರನ್ನು ಕೈ ಬಿಟ್ಟಿದ್ದಾರೆ.

ಮುಖ್ಯಮಂತ್ರಿ ಅವರು ನೇಮಕಾತಿಯಿಂದ ಕೈಬಿಟ್ಟಿರುವವರ ಪಟ್ಟಿಯಲ್ಲಿರುವ, ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವ ಸುಧಾಕರ್ ಅವರು ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ...

ಎಸ್‌ಎಸ್‌ಎಲ್‌ಸಿ ಪಾಸಾಗದವರ ಬಳಿ ಎರಡೆರಡು ಖಾತೆ: ಸುಧಾಕರ್

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !