ಸ್ವಚ್ಛ ಗ್ರಾಮದಿಂದ ಆರೋಗ್ಯಯುತ ಜೀವನ: ಕೆ.ಯಾಲಕ್ಕಿಗೌಡ ಹೇಳಿಕೆ

7
ಗ್ರಾಪಂ ಪಿಡಿಒ, ಅಧ್ಯಕ್ಷರಿಗೆ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ

ಸ್ವಚ್ಛ ಗ್ರಾಮದಿಂದ ಆರೋಗ್ಯಯುತ ಜೀವನ: ಕೆ.ಯಾಲಕ್ಕಿಗೌಡ ಹೇಳಿಕೆ

Published:
Updated:
Prajavani

ಮಂಡ್ಯ: ‘ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆಯುವಲ್ಲಿ ಭಾರತಕ್ಕೆ ಸ್ವಚ್ಛತಾ ಸಮಸ್ಯೆಯೇ ಅಡ್ಡಿಯಾಗಿದೆ. ಪ್ರತಿ ಮನೆಮನೆಯಿಂದಲೂ ಸ್ವಚ್ಛತಾ ಆಂದೋಲನ ಆರಂಭಗೊಳ್ಳಬೇಕು. ಆ ಮೂಲಕ ನಮ್ಮ ದೇಶ ವಿಶ್ವದ ಸ್ವಚ್ಛ ಹಾಗೂ ಬಲಿಷ್ಠ ರಾಷ್ಟ್ರಗಳ ಪಟ್ಟಿಗೆ ಸೇರಲು ಎಲ್ಲರೂ ನೆರವಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.

ಸ್ವಚ್ಛ ಭಾರತ ಆಂದೋಲನದ ಅಡಿ ಜಿಲ್ಲಾ ಪಂಚಾಯಿತಿ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರಿಗಾಗಿ ಆಯೋಜಿಸಿದ್ದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

‘ಬಾಹ್ಯಾಕಾಶ ಹಾಗೂ ವಿಜ್ಞಾನ ಕ್ಷೇತ್ರದ ಸಾಧನೆಯಿಂದಾಗಿ ವಿಶ್ವದ 141 ದೇಶಗಳು ನಮ್ಮ ದೇಶದ ನೆರವು ಮತ್ತು ಮಾರ್ಗದರ್ಶನ ಪಡೆಯುತ್ತಿವೆ. ಆದರೆ ನಮ್ಮ ದೇಶದ ಬಹುತೇಕ ಗ್ರಾಮಗಳು ಕಸದ ರಾಶಿ ಹಾಗೂ ತಿಪ್ಪೆಗಳಿಂದ ಕೂಡಿವೆ. ಇದರಿಂದ ದೇಶದ ಗೌರವಕ್ಕೆ ಧಕ್ಕೆಯಾಗಿದೆ. ನಮ್ಮ ಹಳ್ಳಿಯ ಸ್ವಚ್ಛತಾ ಕಾರ್ಯವನ್ನು ಸರ್ಕಾರ ಮಾಡತ್ತದೆ ಎಂದು ಕಾಯುವ ಬದಲು ನಮ್ಮ ಹಳ್ಳಿಯ ಸ್ವಚ್ಛತೆಯನ್ನು ನಾವೇ ಮಾಡಿಕೊಳ್ಳಬೇಕು. ಸ್ವಚ್ಛ ಗ್ರಾಮದಿಂದ ಆರೋಗ್ಯಯುತ ಜೀವನ ಸಾಧ್ಯ. ಮಕ್ಕಳಿಗೆ ಉತ್ತಮ ನಾಗರಿಕ ಗುಣ ಬೆಳೆಸಬಹುದು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾಪಂಚಾಯಿತಿ ಯೋಜನಾ ಅಧಿಕಾರಿ ಶ್ರೀನಿವಾಸ್ ಮಾತನಾಡಿ ‘ನಾವು ಬೀಸಾಡುವ ಕಸವನ್ನು ತ್ಯಾಜ್ಯವೆಂದು ಪರಿಗಣಿಸದೆ ಸಂಪನ್ಮೂಲ ಎಂದು ಪರಿಗಣಿಸಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಆಧುನಿಕ ಆಹಾರ ಪದ್ಧತಿಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ತ್ಯಾಜ್ಯ ನಿರ್ವಹಣೆ ಕಷ್ಟವಾಗಿದೆ. ಶೇ 80 ರಷ್ಟು ಹೆಚ್ಚು ಕಾಯಿಲೆಗಳು ಕಲುಷಿತ ನೀರಿನಿಂದ ಬರುತ್ತವೆ. ಹೀಗಾಗಿ ಉತ್ತಮ ತ್ಯಾಜ್ಯ ನಿರ್ವಹಣೆ ಮೂಲಕ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಬೇಕು ’ ಎಂದರು.

‘ನಾವು ಬಿಸಾಡುವ ಕಸವನ್ನು ಮನೆಯಲ್ಲಿಯೇ ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯ ವಿಶ್ವಕ್ಕೆ ಮಹಾಮಾರಿಯಾಗಿದ್ದು, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ. ಪ್ಲಾಸ್ಟಿಕ್ ಸುಡುವುದರಿಂದ ವಾಯು ಮಾಲಿನ್ಯ, ಭೂಮಿಯಲ್ಲಿ ಹೂಳುವುದರಿಂದ ನೀರು ಇಂಗದೆ ಅಂತರ್ಜಲ ಕುಸಿಯುತ್ತದೆ. ಪ್ಲಾಸ್ಟಿಕ್ ರಾಶಿ ಹಾಕಿದ ಪ್ರದೇಶದಲ್ಲಿ ಹಸು, ನಾಯಿ ಹಾಗೂ ಹಂದಿ ಸೇರಿ ಇತರೆ ಪ್ರಾಣಿಗಳು ರೋಗ ಹರಡುತ್ತವೆ’ ಎಂದರು.

‘ಇಂದು ಹಾಲು, ಆಹಾರ ಪದಾರ್ಥ, ನೀರು ಹಾಗೂ ಗಾಳಿಯಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ಅಂಶಗಳು ಸೇರಿದೆ. 2050 ವೇಳೆಗೆ ಭೂಮಿಯ ಮೇಲೆ ಸಮುದ್ರದ ನೀರಿಗಿಂತ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಸಮುದ್ರದ ನೀರು ಹಸಿರಾಗಿದ್ದು, ಜಲಮಾಲಿನ್ಯ ಗೋಚರಿಸುತ್ತಿದೆ. ಒಂದು ಪ್ಲಾಸ್ಟಿಕ್ ಕೊಳೆಯಲು 300 ವರ್ಷ ಬೇಕಾಗುತ್ತದೆ. ಹೀಗಾಗಿ ಸುಧಾರಿತ ತಂತ್ರಜ್ಞಾನ ಬಳಕೆ ಮಾಡುತ್ತಾ, ಪ್ಲಾಸ್ಟಿಕ್ ಮರುಬಳಕೆ, ಪ್ರತ್ಯೇಕ ನಿರ್ವಹಣೆ ಹಾಗೂ ಹಸಿ ಕಸದಿಂದ ಮೀಥೇನ್ ಗ್ಯಾಸ್ ಉತ್ಪಾದನೆ ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸಿಕೊಳ್ಳಬೇಕು’ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಯೋಜನಾ ಅಧಿಕಾರಿ ಸಿ.ಗಣಪತಿ ನಾಯಕ್, ನಾಗಾರಜು, ಸತೀಶ್, ಚಂದ್ರಮೌಳಿ, ಡಾ.ಅನಂತರಾಜು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕ ಬಿ.ವಿ.ನಂದೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !