ಕಡಲ್ಕೊರೆತ ತಡೆಗೆ ₹155 ಕೋಟಿ: ಯು.ಟಿ.ಖಾದರ್

7
ಜಿಲ್ಲಾ ಉಸ್ತುವಾರಿ ಸಚಿವ

ಕಡಲ್ಕೊರೆತ ತಡೆಗೆ ₹155 ಕೋಟಿ: ಯು.ಟಿ.ಖಾದರ್

Published:
Updated:

ಮಂಗಳೂರು: ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನಲ್ಲಿ ಕಡಲ್ಕೊರೆತ ತಡೆಗೆ ಕೈಗೆತ್ತಿಕೊಂಡಿರುವ ಯೋಜನೆಯಡಿ ಎರಡನೇ ಹಂತದಲ್ಲಿ ₹ 155 ಕೋಟಿ ಮೊತ್ತದ ಎರಡು ಕಾಮಗಾರಿಗಳಿಗೆ ಮಂಜೂರಾತಿ ದೊರಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಭಾಷ್‌ನಗರ, ಹಿಲರಿನಗರ, ಕೈಕೋ ವ್ಯಾಪ್ತಿಯಲ್ಲಿ 450 ಮೀಟರ್‌ ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ₹ 21.09 ಕೋಟಿ ಮಂಜೂರು ಮಾಡಲಾಗಿದೆ. ಸೋಮೇಶ್ವರ, ಉಚ್ಚಿಲ, ತಲಪಾಡಿಯಲ್ಲಿ ಕಡಲ್ಕೊರೆತ ತಡೆಗೆ ₹ 134 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ’ ಎಂದರು.

ಎರಡನೇ ಕಾಮಗಾರಿಯಲ್ಲಿ ಸೋಮೇಶ್ವರ, ಉಚ್ಚಿಲ, ತಲಪಾಡಿಯಲ್ಲಿ ಎರಡು ಬೃಹತ್‌ ರೀಫ್‌ಗಳನ್ನು ನಿರ್ಮಿಸಲಾಗುತ್ತದೆ. ₹ 24 ಕೋಟಿ ವೆಚ್ಚದಲ್ಲಿ ಆರು ಬರ್ನ್‌ಗಳನ್ನು ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಂಡರೆ ಕಡಲ್ಕೊರೆತದಿಂದ ಹೆಚ್ಚು ಹಾನಿಯಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಿದರು.

ಸುರತ್ಕಲ್‌, ಸಸಿಹಿತ್ಲು ಸೇರಿದಂತೆ ಈ ಭಾಗದ ಎಲ್ಲ ಪ್ರದೇಶಗಳಲ್ಲೂ ಎಡಿಬಿ ಸಾಲದಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ಆರಂಭಿಸಲಾಗುತ್ತದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿವೆ. ಉಳ್ಳಾಲದ ಕೋಟೆಪುರ ಮತ್ತು ಮುಕ್ಕಚ್ಚೇರಿ ಭಾಗದಲ್ಲಿ ಮೊದಲ ಹಂತದ ಕಾಮಗಾರಿ ನಡೆಸಲಾಗಿತ್ತು. ಅಲ್ಲಿ ದೊಡ್ಡ ಚಂಡ ಮಾರುತಗಳು ಬಂದಾಗಲೂ ಯಾವುದೇ ಹಾನಿಯಾಗಿಲ್ಲ ಎಂದರು.

ವರ್ತುಲ ರಸ್ತೆಗೆ ಪ್ರಸ್ತಾವ: ಭವಿಷ್ಯದಲ್ಲಿ ಮಂಗಳೂರು ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಹೊಸ ವರ್ತುಲ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ರೂಪಿಸಲಾಗುತ್ತಿದೆ. ಉಚ್ಚಿಲದಿಂದ ಅಸೈಗೋಳಿ ಮೂಲಕ ಮೆಲ್ಕಾರ್‌ ತಲುಪಿ ಅಲ್ಲಿಂದ ಬಂಟ್ವಾಳ, ಮೂಡುಬಿದಿರೆ ಮಾರ್ಗವಾಗಿ ಮೂಲ್ಕಿ ತಲುಪುವಂತೆ ರಸ್ತೆ ನಿರ್ಮಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ತೊಕ್ಕೊಟ್ಟು– ಮೆಲ್ಕಾರ್‌ ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರ್ಯಸಾಧುವಲ್ಲ ಎಂಬ ವರದಿ ಬಂದಿದೆ. ಈ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದ್ದರಿಂದ ಹೊಸ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮಾಲೋಚನಾ ಸಭೆ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಬಜೆಟ್ ಪೂರ್ವ ಸಮಾಲೋಚನಾ ಸಭೆ ನಡೆಸಲಾಗುವುದು. ಶಾಸಕರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ರಾಜಕೀಯರಹಿತವಾಗಿ ಚರ್ಚೆ ನಡೆಸಿ, ಆಯಾ ಇಲಾಖೆಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !