ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ತಂತ್ರಾಂಶ

7
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ

ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ತಂತ್ರಾಂಶ

Published:
Updated:

ಮಂಗಳೂರು: ದೇಶದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಇಆರ್‌ಒ ನೆಟ್‌ ಎಂಬ ಹೊಸ ತಂತ್ರಾಂಶ ಬಳಕೆಗೆ ಕೇಂದ್ರ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಈ ತಂತ್ರಾಂಶದ ಪ್ರಾಯೋಗಿಕ ಬಳಕೆ ಆರಂಭವಾಗಿದೆ.

‘ಸದ್ಯ ಆಯಾ ರಾಜ್ಯಗಳು ಪ್ರತ್ಯೇಕವಾದ ಎಲ್ಕಟೋರಲ್‌ ರೋಲ್ಸ್‌ ಮ್ಯಾನೇಜ್‌ಮೆಂಟ್ ಸಿಸ್ಟಂ (ಇಆರ್‌ಎಂಎಸ್‌) ತಂತ್ರಾಂಶ ಬಳಸಿ ಮತದಾರರ ಪಟ್ಟಿ ಪರಿಷ್ಕರಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಎಲೆಕ್ಟೋರಲ್‌ ರಿಜಿಸ್ಟ್ರೇಷನ್‌ ಆಫೀಸರ್ ನೆಟ್‌ (ಇಆರ್‌ಒ ನೆಟ್‌) ಎಂಬ ಹೊಸ ತಂತ್ರಾಂಶವನ್ನು ದೇಶದಾದ್ಯಂತ ಬಳಕೆಗೆ ತರಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಇದು ಅಂತರರಾಜ್ಯ ಮಟ್ಟದಲ್ಲಿನ ನಕಲಿ ಮತದಾರರನ್ನು ಗುರುತಿಸಲು ನೆರವಾಗಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಆರ್‌ಎಂಎಸ್‌ ಆಯಾ ರಾಜ್ಯಗಳಿಗೆ ಸೀಮಿತವಾದುದು. ಅದರಲ್ಲಿ ಎರಡು ಜಿಲ್ಲೆಗಳಲ್ಲಿನ ಮತದಾರರ ಹೆಸರುಗಳನ್ನು ಮಾತ್ರ ಪರಿಶೀಲಿಸಬಹುದು. ಆದರೆ, ಇಆರ್‌ಒ ನೆಟ್‌ ಜಾರಿಯಾದರೆ ಇಡೀ ದೇಶದ ಮತದಾರರ ವಿವರಗಳು ಒಂದೇ ಕಡೆ (ಡೇಟಾ ಬೇಸ್‌) ಸಿಗುತ್ತವೆ. ಆಗ ನಕಲಿ ಮತದಾರರನ್ನು ಪರಿಶೀಲಿಸಲು ಸುಲಭವಾಗುತ್ತದೆ. ಹೊಸ ನೋಂದಣಿಗೆ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನೂ ತಂತ್ರಾಂಶದ ಮೂಲಕ ಪರಿಶೀಲಿಸಿ ಅನುಮೋದಿಸುವ ಕ್ರಮ ಜಾರಿಗೆ ಬರುತ್ತದೆ ಎಂದರು.

‘ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇಆರ್‌ಒ ನೆಟ್‌ ತಂತ್ರಾಂಶದ ಬಳಕೆ ಆರಂಭವಾಗಿದೆ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹೊಸ ನೋಂದಣಿಗೆ ಸಲ್ಲಿಕೆಯಾದ ತಲಾ 100 ಅರ್ಜಿಗಳನ್ನು ಈ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಿ ಪರಿಶೀಲಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ವಿವರಿಸಿದರು.

ಒಂದೇ ಸಹಾಯವಾಣಿ: ಈಗ ಮತದಾರರ ಪಟ್ಟಿಯಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ದೇಶದಾದ್ಯಂತ ಒಂದೇ ದೂರವಾಣಿ ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಮತದಾರರು ನೇರವಾಗಿ ಟೋಲ್‌ ಫ್ರೀ ಸಂಖ್ಯೆ 1950ಗೆ ಕರೆ ಮಾಡಬಹುದು. ಅವರು ಇರುವ ಪ್ರದೇಶವನ್ನು ಆಧರಿಸಿ ಆಯಾ ಜಿಲ್ಲೆಯ ಚುನಾವಣಾ ವಿಭಾಗಕ್ಕೆ ಕರೆ ವರ್ಗಾವಣೆಯಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !