ಇ–ಸ್ವತ್ತು ಅರ್ಜಿ ವಿಲೇವಾರಿ ಮಾಡಿ

7
ಸಭೆಯಲ್ಲಿ ಪಿಡಿಒಗಳಿಗೆ ಜಿ.ಪಂ ಅಧ್ಯಕ್ಷೆ ಗೀತಮ್ಮ ಸೂಚನೆ

ಇ–ಸ್ವತ್ತು ಅರ್ಜಿ ವಿಲೇವಾರಿ ಮಾಡಿ

Published:
Updated:
Prajavani

ಕೋಲಾರ: ‘ಇ–ಸ್ವತ್ತಿನ ಸಮಸ್ಯೆ ಕಾರಣಕ್ಕೆ ಮಹಿಳೆಯೊಬ್ಬರು ಮಕ್ಕಳೊಂದಿಗೆ ಜಿ.ಪಂ ಕಚೇರಿಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುವ ಮಟ್ಟಕ್ಕೆ ಸಮಸ್ಯೆ ಗಂಭೀರವಾಗಿದೆ. ಇದರ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿ 2-3 ತಿಂಗಳಾದರೂ ಯಾವುದೇ ಕೆಲಸವಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಮಹಿಳೆಯೊಬ್ಬರು ಮಕ್ಕಳೊಂದಿಗೆ ಕಚೇರಿಗೆ ಬಂದು ಸಮಸ್ಯೆ ಬಗೆಹರಿಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದರು.

‘ಇಷ್ಟರ ಮಟ್ಟಕ್ಕೆ ಸಮಸ್ಯೆ ಜಟಿಲಗೊಳಿಸುವುದು ಸರಿಯಲ್ಲ. ಇ–ಸ್ವತ್ತಿಗೆ ಸಂಬಂಧಿಸಿದಂತೆ ಯಾವ ದಾಖಲೆಪತ್ರಗಳು ಬೇಕೆಂದು ಸೂಚನಾ ಫಲಕದಲ್ಲಿ ಹಾಕಿ. ತಿಂಗಳುಗಟ್ಟಲೇ ಅರ್ಜಿ ಬಾಕಿ ಇರಿಸಿಕೊಳ್ಳದೆ ಆಗಾಗ್ಗೆ ವಿಲೇವಾರಿ ಮಾಡಿ’ ಎಂದು ಸೂಚಿಸಿದರು.

‘ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣವೇ ಸ್ಪಂದಿಸಬೇಕು. ಸಹಾಯಕ ಕಾರ್ಯ ನಿರ್ವಹಣಾಧಿಕಾರಿಗಳು ಹೆಚ್ಚಿನ ಸಮಯವನ್ನು ಗ್ರಾಮಗಳಿಗೆ ಮೀಸಲಿಡಿ. ವಾಟರ್‌ಮನ್‌ಗಳನ್ನು ಪಿಡಿಒಗಳು ಹತೋಟಿಯಲ್ಲಿಟ್ಟುಕೊಂಡು ನಿಷ್ಠೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿ’ ಎಂದು ತಿಳಿಸಿದರು.

ಬೇಜವಾಬ್ದಾರಿ ವರ್ತನೆ: ‘ಕರಸಂಗ್ರಹಗಾರರು ಪಿಡಿಒಗಳ ನಿಯಂತ್ರಣದಲ್ಲಿಲ್ಲ. ಮನಬಂದಂತೆ ತೆರಿಗೆ ವಸೂಲಿ ಮಾಡಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ‘ಸರ್ಕಾರದ ಹಣ ₹ 1 ದುರ್ಬಳಕೆಯಾದರೂ ಅಪರಾಧ. ಕರಸಂಗ್ರಹಗಾರರು ವಸೂಲಿ ಮಾಡುವ ತೆರಿಗೆಯನ್ನು ಮರುದಿನವೇ ಬ್ಯಾಂಕ್‌ಗೆ ಪಾವತಿಸಬೇಕು. 2 ದಿನ ತಡವಾದರೂ ಅದು ತಪ್ಪು. ಪಿಡಿಒಗಳು ಹಣ ಮರುಪಾವತಿ ಪರಿಶೀಲಿಸಿದ ಬಳಿಕವೇ ಸಹಿ ಮಾಡಬೇಕು. ಆ ನಂತರವೂ ತಪ್ಪಾದರೆ ಇಬ್ಬರ ವಿರುದ್ಧವೂ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕೊಳವೆ ಬಾವಿಯಲ್ಲಿ ನೀರು ಬತ್ತಿದ ನಂತರ ಅದರ ಪಂಪ್‌, ಮೋಟರ್, ಕೇಬಲ್, ಪ್ಯಾನಲ್ ಬೋರ್ಡ್ ಎಲ್ಲಿ ಹೋಗುತ್ತವೆ ಎಂಬುದು ತಿಳಿಯುತ್ತಿಲ್ಲ. ಕೊಳವೆ ಬಾವಿ ಉಪಕರಣಗಳ ವಿವರವನ್ನು ದಾಖಲೆ ಪುಸ್ತಕದಲ್ಲಿ ನಮೂದು ಮಾಡಬೇಕು. ಜತೆಗೆ ಉಪಕರಣಗಳನ್ನು ಒಂದೆಡೆ ದಾಸ್ತಾನು ಮಾಡಬೇಕು. ನೀರಿನ ವಿಚಾರವಾಗಿ ತೊಂದರೆ ನೀಡದಂತೆ ಬೆಸ್ಕಾಂನವರಿಗೆ ಸೂಚಿಸಿದ್ದೇವೆ’ ಎಂದರು.

ಗ್ರಾಮಕ್ಕೆ 24 ಸಿಸ್ಟನ್‌: ಕುಡಿಯುವ ನೀರಿಗೆ ಸಂಬಂಧಿಸಿದಂತೆ 70 ಮನೆಗಳಿರುವ ಸಣ್ಣ ಹಳ್ಳಿಯೊಂದರಲ್ಲೇ 24 ಸಿಸ್ಟನ್‌ ಅಳವಡಿಸಿರುವ ಸಂಗತಿ ಗಮನಕ್ಕೆ ಬಂದಿದೆ’ ಎಂದು ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯ ಅರುಣ್‌ಪ್ರಸಾದ್‌, ‘ನಾನು ಹಲವು ತಿಂಗಳಿಂದ ಕೇಳುತ್ತಿದ್ದರೂ ಒಂದೇ ಒಂದು ಸಿಸ್ಟಿನ್ ಕೊಟ್ಟಿಲ್ಲ. ಆ ಗ್ರಾಮಕ್ಕೆ ಹೇಗೆ 24 ಸಿಸ್ಟನ್‌ ಕೊಟ್ಟಿದ್ದೀರಿ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತೀರಾ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಿರುದ್ಧ ಕಿಡಿಕಾರಿದರು.

ಆಗ ಸಿಇಒ, ‘ನಿಮಗೆ ಒಂದು ಗ್ರಾಮದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ನಿಮ್ಮ ಸ್ವಂತ ಹಣದಲ್ಲಿ ಸಿಸ್ಟನ್‌ ಹಾಕಿಸಿಕೊಡಿ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡಬೇಡಿ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದರು.

ಜನರ ಹಿಂದೇಟು: ‘ನರೇಗಾ ಕಾಮಗಾರಿಗಳ ಬಿಲ್‌ ಆಗುತ್ತಿಲ್ಲ. ಹೀಗಾಗಿ ಜನರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪಿಡಿಒಗಳು ಗ್ರಾ.ಪಂಯಲ್ಲೇ ಇದ್ದು ಸಾರ್ವಜನಿಕರ ಕೆಲಸ ಮಾಡಬೇಕು. ಪಿಡಿಒ ತಪ್ಪು ಮಾಡಿದರೆ ವರ್ಗಾವಣೆ ಮಾಡುವ ಅಧಿಕಾರವನ್ನು ಸಿಇಒ ಅವರಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ವಿವಿಧ ಗ್ರಾ.ಪಂ ಅಧ್ಯಕ್ಷರು ಮನವಿ ಮಾಡಿದರು.

‘ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಯಾವುದೇ ಸಭೆಗೆ ಬರುವುದಿಲ್ಲ’ ಎಂದು ತಾ.ಪಂ ಉಪಾಧ್ಯಕ್ಷೆ ಸಿ.ಲಕ್ಷ್ಮೀ ದೂರಿದರು. ಜಿ.ಪಂ ಸದಸ್ಯರಾದ ರೂಪಶ್ರೀ, ವೆಂಕಟಲಕ್ಷ್ಮಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !