ಆಧಾರ್‌: ಪ್ರಧಾನಿ ಕಚೇರಿಗೆ ಪತ್ರ

7
ಆಧಾರ್ ಕಾರ್ಡ್ ನೀಡುವ ಮತ್ತು ತಿದ್ದುಪಡಿ ಮಾಡುವ ಕಾರ್ಯದಲ್ಲಿ ಆಗುತ್ತಿರುವ ಸಮಸ್ಯೆ ತಪ್ಪಿಸುವಂತೆ ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮನವಿ

ಆಧಾರ್‌: ಪ್ರಧಾನಿ ಕಚೇರಿಗೆ ಪತ್ರ

Published:
Updated:

ಚಿಕ್ಕಬಳ್ಳಾಪುರ: ಹೊಸದಾಗಿ ಆಧಾರ್ ಕಾರ್ಡ್ ನೀಡುವ ಮತ್ತು ಕಾರ್ಡ್ ತಿದ್ದುಪಡಿ ಮಾಡುವ ಕಾರ್ಯದಲ್ಲಿ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ನಗರದ ನಿವಾಸಿ, ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

‘ಹೊಸದಾಗಿ ಆಧಾರ್ ಕಾರ್ಡ್ ನೀಡುವ ಮತ್ತು ಕಾರ್ಡ್ ತಿದ್ದುಪಡಿ ಮಾಡುವ ಕಾರ್ಯವನ್ನು ಬ್ಯಾಂಕ್ ಹಾಗೂ ಗ್ರಾಮ ಪಂಚಾಯತಿಗಳಿಗೆ ವಹಿಸಿರುವುದು ನಾಗರಿಕರನ್ನು ಗೊಂದಲಕ್ಕೆ ದೂಡಿದ್ದು, ಬ್ಯಾಂಕ್‌ಗಳು ಸರಿಯಾಗಿ ಸ್ಪಂದಿಸದೆ ನಾಗರಿಕರನ್ನು ಅಲೆದಾಡಿಸುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಬ್ಯಾಂಕ್‌ ಶಾಖೆಗಳಲ್ಲಿ ಆಧಾರ್ ಕಾರ್ಡ್ ನೀಡುವ ಮತ್ತು ಕಾರ್ಡ್ ತಿದ್ದುಪಡಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಕೆನರಾ ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ಶಾಖೆಗಳಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಕೆಲಸಗಳನ್ನು ನಿಲ್ಲಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಆಧಾರ್ ಕಾರ್ಡ್‌ಗಾಗಿ ನಾಗರಿಕರು ನಾಲ್ಕಾರು ಬಾರಿ ಬ್ಯಾಂಕ್‌ ಶಾಖೆಗಳಿಗೆ ಭೇಟಿ ನೀಡಿದಾಗ ಟೋಕನ್ ನೀಡಿ ತಿಂಗಳುಗಟ್ಟಲೇ ಅಲೆದಾಡಿಸಲಾಗುತ್ತಿದೆ. ಹರಸಾಹಸ ಪಟ್ಟು ಕಾರ್ಡ್‌ನಲ್ಲಿ ತಪ್ಪಾದ ಮಾಹಿತಿ ತಿದ್ದುಪಡಿ ಮಾಡಿಸಿ ಬಂದರೆ ಸಿಬ್ಬಂದಿ ಅಜಾಗರೂಕತೆಯಿಂದ ತಪ್ಪುಗಳು ಹಾಗೇ ಉಳಿದು ಜನರು ಪುನಃ ಬ್ಯಾಂಕ್‌ಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಉಲ್ಲೇಖಿಸಲಾಗಿದೆ.

‘ಗ್ರಾಮ ಪಂಚಾಯಿತಿಗಳಲ್ಲಿ ಈ ಕೆಲಸಕ್ಕೆ ಅಗತ್ಯ ಕೌಶಲವಿಲ್ಲದ ಸಿಬ್ಬಂದಿ ನಿಯೋಜಿಸಲಾಗಿದ್ದು, ಅವರು ಜನರು ವಿವಿಧ ಸಬೂಬು ಹೇಳಿ ಅಲೆದಾಡುತ್ತಿದ್ದಾರೆ. ಈ ಬಗ್ಗೆ ದೂರು ಹೇಳಲು 1947 ಸಹಾಯವಾಣಿಗೆ ಕರೆ ಮಾಡಿದರೆ ಅಲ್ಲಿ ಕೂಡ ಸರಿಯಾದ ಮಾಹಿತಿ ನೀಡದೆ ಜನರನ್ನು ವಂಚಿಸಲಾಗುತ್ತಿದೆ’ ಎಂದು ಆರೋಪಿಸಲಾಗಿದೆ.

‘ದೇಶದಲ್ಲಿ ತಂತ್ರಜ್ಞಾನವು ಅಗಾಧವಾಗಿ ಬೆಳೆದಿರುವಾಗ ಒಂದು ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಮಾಡಿಸಿಕೊಳ್ಳಲು ಜನಸಾಮಾನ್ಯರು ಸಮಯ ವ್ಯರ್ಥ ಮಾಡಿಕೊಂಡು, ಹಣ ಕಳೆದುಕೊಂಡು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ನಾಗರಿಕರಿಗೆ ನೆಮ್ಮದಿ ಕಲ್ಪಿಸಲು ಕ್ರಮಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !