‘ಒಮ್ಮತದ ನಿರ್ಧಾರ: ಸಚಿವಾಲಯಗಳಿಗೆ ಮನವಿ’

7
ಬಂಡೀಪುರ; ರಾತ್ರಿ ಸಂಚಾರ ನಿಷೇಧ

‘ಒಮ್ಮತದ ನಿರ್ಧಾರ: ಸಚಿವಾಲಯಗಳಿಗೆ ಮನವಿ’

Published:
Updated:

ನವದೆಹಲಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿನ ವಾಹನಗಳ ಸಂಚಾರಕ್ಕೆ ನಿರ್ಬಂಧ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಕೇಂದ್ರದ ಎರಡು ಸಚಿವಾಲಯಗಳನ್ನು ಕೋರಲಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಸಂಚಾರ ನಿರ್ಬಂಧ ತೆರವು ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ನೇತೃತ್ವದ ದ್ವಿಸದಸ್ಯ ಪೀಠದೆದುರು ಅವರು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದರು.

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳು ಭಿನ್ನವಾದ ನಿಲುವು ತಾಳಿವೆ. ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ನಿಟ್ಟಿನಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ. ಆದರೆ, ಇದನ್ನು ವಿರೋಧಿಸಿರುವ ಪರಿಸರ ಮತ್ತು ಅರಣ್ಯ ಸಚಿವಾಲಯವು ಪರ್ಯಾಯ ಮಾರ್ಗದ ಅಭಿವೃದ್ಧಿಗೆ ಒತ್ತು ನೀಡುವಂತೆ ಕೋರಿದೆ. ಹಾಗಾಗಿ ಒಮ್ಮತದ ನಿರ್ಧಾರಕ್ಕೆ ಬರುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಪರ್ಯಾಯ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಹೇರಿರುವ ನಿಷೇಧ ತೆರವುಗೊಳಿಸುವ ಬದಲು ಹಗಲಿನ ವೇಳೆಯೂ ಸಂಚಾರ ನಿಷೇಧಿಸುವಂತೆ ಸೂಚಿಸಬೇಕು. ಇದರಿಂದ ಪ್ರಾಣಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ ಎಂದು ಸ್ವಯಂ ಸೇವಾ ಸಂಘಟನೆಯ ಪರ ವಕೀಲ ಜಿ.ಆರ್‌. ಮೋಹನ್‌ ಹೇಳಿದರು.

ವೇಣುಗೋಪಾಲ್‌ ಅವರ ಹೇಳಿಕೆಯಿಂದಾಗಿ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮೂರು ವಾರಗಳಿಗೆ ಮುಂದೂಡಿತು.

ರಾತ್ರಿ ವೇಳೆ ಈ ಹೆದ್ದಾರಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರಗೆ ವಾಹನ ಸಂಚಾರಕ್ಕೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ಸಮಿತಿಯು ಆಯಾ ರಾಜ್ಯಗಳು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರೂ ಒಮ್ಮತ ವ್ಯಕ್ತವಾಗಿರಲಿಲ್ಲ.

ಅಲ್ಲದೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕುರಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಸ್ತಾವವನ್ನು ವನ್ಯಜೀವಿ ಪರ ಸಂಘಟನೆಗಳು ವಿರೋಧಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !