ನಿಷ್ಕಾಮ ಕರ್ಮಯೋಗಿ ಶಿವಕುಮಾರ ಸ್ವಾಮೀಜಿ

7

ನಿಷ್ಕಾಮ ಕರ್ಮಯೋಗಿ ಶಿವಕುಮಾರ ಸ್ವಾಮೀಜಿ

Published:
Updated:

ಹಲವು ಮುನಿಪುಂಗವರ ತಪೋಭೂಮಿಯಾಗಿ ಬೆಳಗಿದ ಮಹಾನ್ ಪರಂಪರೆ ಹೊಂದಿರುವ ಸಿದ್ಧಗಂಗಾ ಮಠವು ಹಲವು ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದರೂ, ಇಂದು ಜಾತಿ ಮತ ಪಂಥಗಳ ಎಲ್ಲೆ ಮೀರಿ ಜನಮಾನಸದಲ್ಲಿ ನೆಲೆಯೂರಲು ಕಾರಣೀಭೂತರಾದವರು ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯಾಗಿರುವ ಕರ್ಮಯೋಗಿ ಶಿವಕುಮಾರ ಮಹಾಸ್ವಾಮಿಯವರು. ತ್ರಿವಿಧ ದಾಸೋಹಿಗಳಾಗಿದ್ದ ಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಸಾಂಸ್ಕೃತಿಕ..... ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರು.

ಪರರ ಹಿತಕ್ಕಾಗಿ ನಿಷ್ಕಾಮ ಕರ್ಮ ಮಾಡಿ, ತನ್ಮೂಲಕ ಭಗವಂತನನ್ನು ತುಷ್ಟಿಗೊಳಿಸುವುದರಲ್ಲಿಯೇ ಬದುಕಿನ ಸಾರ್ಥಕತೆ ಇದೆ ಎಂಬುದನ್ನು ತಮ್ಮ ಬಾಳಿನ ಮೂಲಕ ತೋರಿಸಿದ ವಿಭೂತಿ ಪುರುಷರು.  ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ವಿಶಾಲ ಮನೋಭೂಮಿಕೆಯೊಂದಿಗೆ ತಮ್ಮ ಜೀವಿತಾವಧಿಯನ್ನು ಸಮಾಜದ ಒಳಿತಿಗಾಗಿ ತೊಡಗಿಸಿಕೊಂಡ ಗುರುಶ್ರೇಷ್ಠರು.

ನಾಡಿನೆಲ್ಲೆಡೆಯಿಂದ ಬರುವ ಸಾವಿರಾರು ನಿರ್ಗತಿಕ ಹಾಗೂ ಬಡ ಮಕ್ಕಳಿಗೆ ಅಕ್ಷರ, ಅನ್ನ ಹಾಗೂ ಆಶ್ರಯವನ್ನು ನೀಡಿ ಅವರ ಬದುಕನ್ನು ಕಟ್ಟಿಕೊಡುವುದರಲ್ಲಿ ಮುಂಚೂಣಿಯಲ್ಲಿರುವ ಸಿದ್ಧಗಂಗಾ ಮಠದ ಹೆಸರಿಗೆ ಮತ್ತಷ್ಟು ಮೆರಗು ತಂದವರು. ಲೋಕೋಪಕಾರಕ್ಕಾಗಿಯೇ ಜನ್ಮ ತಳೆದ ಶಿವಕುಮಾರ ಮಹಾಸ್ವಾಮಿ ತಮ್ಮ ನಿಷ್ಕಾಮ ಸೇವೆಯ ಮೂಲಕವೇ ಆಧುನಿಕ ಬಸವಣ್ಣ ಎನಿಸಿದ್ದರು.

ಸತ್ಕಾರ್ಯಗಳ ಅನುಷ್ಠಾನದಲ್ಲಿ ನಿರತರಾಗಿದ್ದ ಮಹಾಸ್ವಾಮಿ ಇಳಿವಯಸ್ಸಿನಲ್ಲೂ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉತ್ಕರ್ಷದಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಂಡಿದ್ದುದು ಅನನ್ಯ, ಅನುಕರಣೀಯ. ಅವರ ನಿಷ್ಕಾಮ ಬದುಕು ಎಲ್ಲರಿಗೂ ಆದರ್ಶ.

ನಮ್ಮ ನಾಡಿನಲ್ಲಿ ಬಹುತೇಕ ಎಲ್ಲ ಜಾತಿ, ಪಂಗಡ, ಮತಗಳಿಗೂ ಒಬ್ಬೊಬ್ಬ ಗುರುಗಳಿದ್ದಾರೆ. ಆದರೆ ಕರ್ಮಯೋಗಿಗಳೆಂದು, ಧರ್ಮಯೋಗಿಗಳೆಂದು ಸುವಿಖ್ಯಾತರಾಗಿ ಧರ್ಮಪ್ರಜ್ಞೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ವರೂ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತಿದ್ದ ಸಿದ್ಧಗಂಗಾ ಮಠದ ಪರಮಪೂಜ್ಯರು ಜಾತಿ, ಮತ, ಧರ್ಮಗಳ ಪರಿಧಿಯನ್ನು ಮೀರಿ ಜನಮಾನಸದಲ್ಲಿ ಬೆಳಗಿದವರು. 

ಶತಾಯುಷಿಯಾದ ನಂತರವೂ ತಮ್ಮ ಅಪ್ರತಿಮ ಸೇವಾ ಕೈಂಕರ್ಯದ ಮೂಲಕ ಈ ಪುಣ್ಯನೆಲದ ಮಣ್ಣನ್ನು ಪುನೀತಗೊಳಿಸುವ ಪವಿತ್ರ ಕಾರ್ಯದಲ್ಲಿ ನಿರತರಾಗಿದ್ದುದು ನಾಡಿಗರೆಲ್ಲರ ಸೌಭಾಗ್ಯ. ಸಿದ್ಧಗಂಗಾ ಮಠದ ಸರ್ವಾಂಗೀಣ ಪ್ರಗತಿಗೆ ಪೂಜ್ಯರು ಕೈಗೊಂಡ ಕಾರ್ಯಗಳು ಆದರಣೀಯವೂ ಅನುಕರಣೀಯವೂ ಆಗಿವೆ. ಶ್ರೀಗಳ ಧರ್ಮಬೋಧನೆಗಳು ಜನರ ಅಂಧಕಾರವನ್ನು ನೀಗಿಸುವಲ್ಲಿ ದಿವ್ಯೌಷಧಿ. ಲೋಕ ಕಲ್ಯಾಣಕ್ಕಾಗಿ ಸಂಕಲ್ಪಿಸಿದ ಸಕಲವನ್ನೂ ಸಾಕಾರಗೊಳಿಸಿರುವ ಮಹಾಸ್ವಾಮಿಗಳಿಂದಾಗಿ ಸಿದ್ಧಗಂಗೆಯು ಇಂದು ಜನಮನ ಬೆಳಗುವ ಜ್ಞಾನಕೇಂದ್ರವಾಗಿದೆ.

ನಮ್ಮ ಗುರುಗಳಾದ ಜಗದ್ಗುರು ಬಾಲಗಂಗಾಧರನಾಥ ಮಹಾಸ್ವಾಮಿ  ಹಾಗೂ ಶಿವಕುಮಾರ ಮಹಾಸ್ವಾಮಿ ಪರಸ್ಪರ ಗೌರವಾದರಣೀಯರಾಗಿದ್ದರು. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯುವ ಧರ್ಮಸಭೆಗಳಲ್ಲಿ ಸಿದ್ಧಗಂಗಾ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅನುಗ್ರಹ ಸಂದೇಶಗಳು ಯಾವತ್ತೂ ಸಮಾಜಕ್ಕೆ ದಾರಿದೀಪ.

ಸಿದ್ಧಗಂಗಾ ಮಠವನ್ನು ಸರ್ವಧರ್ಮ ಸಮನ್ವಯ ಕೇಂದ್ರವನ್ನಾಗಿ ಬೆಳಗಿಸಿದ ಪರಮಪೂಜ್ಯರು ಶಿವೈಕ್ಯರಾದುದರಿಂದ ನಾಡಿಗಷ್ಟೇ ಅಲ್ಲ ಇಡೀ ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಪೂಜ್ಯರ ಅಗಲಿಕೆಯಿಂದ ದುಃಖಿತರಾಗಿರುವ ಭಕ್ತವೃಂದಕ್ಕೆ ಹಾಗೂ ಶಿಷ್ಯ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನೂ, ಮಹಾಸ್ವಾಮಿಗಳವರ ಆತ್ಮಕ್ಕೆ ಚಿರಶಾಂತಿಯನ್ನೂ ನೀಡಲೆಂದು ಆದಿಚುಂಚನಗಿರಿ ಶ್ರೀ ಕ್ಷೇತ್ರದ ದೈವ ಶ್ರೀ ಕಾಲಭೈರವೇಶ್ವರಸ್ವಾಮಿಯಲ್ಲಿ ಅಂತರಂಗ ಪೂರ್ವಕವಾಗಿ ಪ್ರಾರ್ಥಿಸುತ್ತೇವೆ.

(ಲೇಖಕರು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು)

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !