ಪ್ರಿಯಾಂಕಾ: ಕಾಂಗ್ರೆಸ್ ಬ್ರಹ್ಮಾಸ್ತ್ರವೇ? ಬಿಜೆಪಿಯ ಕೈಗಿಟ್ಟ ಅಸ್ತ್ರವೇ?

ಶುಕ್ರವಾರ, ಮಾರ್ಚ್ 22, 2019
21 °C
ಪ್ರಿಯಾಂಕಾ ಹೆಗಲೇರಿರುವ ಹೊಸ ಹೊಣೆ ಬೆಳ್ಳಿಯ ತಟ್ಟೆಯಲ್ಲಿಟ್ಟು ಕೊಟ್ಟ ಅಧಿಕಾರದ ಹುದ್ದೆಯೇನೂ ಅಲ್ಲ

ಪ್ರಿಯಾಂಕಾ: ಕಾಂಗ್ರೆಸ್ ಬ್ರಹ್ಮಾಸ್ತ್ರವೇ? ಬಿಜೆಪಿಯ ಕೈಗಿಟ್ಟ ಅಸ್ತ್ರವೇ?

Published:
Updated:
Prajavani

ನೆಹರೂ-ಗಾಂಧಿ ವಂಶದ ಮರಿಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಕಡೆಗೂ ಸಕ್ರಿಯ ರಾಜಕಾರಣಕ್ಕೆ ಕಾಲಿರಿಸಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ಮರಿಮೊಮ್ಮಗ ರಾಹುಲ್ ರಾಜಕೀಯ ಪ್ರವೇಶ ಇಂದಿನಷ್ಟು ಸಂಚಲನ ಮೂಡಿಸಿರಲಿಲ್ಲ. ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿ ಆಗಲು ಪ್ರಿಯಾಂಕಾ ಅವರಿಗಿರುವ ಅರ್ಹತೆ ಏನು?

 ನೆಹರೂ-ಗಾಂಧಿ ವಂಶದಲ್ಲಿ ಜನಿಸದ ಸಾಮಾನ್ಯ ಕಾರ್ಯಕರ್ತನೊಬ್ಬ ಏಕಾಏಕಿ ಈ ಹುದ್ದೆಗೆ ಏರುವುದು ಸಾಧ್ಯವೇ ಎಂಬ ಪ್ರಶ್ನೆಗಳು ನ್ಯಾಯಸಮ್ಮತ. ಕಾಂಗ್ರೆಸ್ ವಂಶಪಾರಂಪರ್ಯ ಎಂಬ ಊಳಿಗಮಾನ್ಯ ಮೌಲ್ಯಕ್ಕೆ ಜನತಂತ್ರದಲ್ಲಿ ಜಾಗವಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ. ನೆಹರೂ-ಗಾಂಧಿ ಕುಟುಂಬವು ಪಕ್ಷವನ್ನು ಒಂದಾಗಿ ಹಿಡಿದಿಡುವ ಅಂಟಿನಂತೆ ಕೆಲಸ ಮಾಡಿದೆ. 

ನಾಯಕತ್ವವು ಕುಟುಂಬದ ಚೌಕಟ್ಟಿನಿಂದ ಹೊರ ಸರಿದಾಗಲೆಲ್ಲ ವಿಘಟನೆಯ ಭಯ ಈ ಪಕ್ಷವನ್ನು ಕಾಡಿದ್ದು ಹೌದು. ಕುಟುಂಬದ ಚೌಕಟ್ಟಿನಿಂದ ಈ ಪಕ್ಷವನ್ನು ಹೊರಕ್ಕೆ ಒಯ್ದು ಅದನ್ನು ಮುರಿದು ಕಟ್ಟುವ ದಿಟ್ಟತನ ಮತ್ತು ಆತ್ಮವಿಶ್ವಾಸದ ನಾಯಕ ಈ ಪಕ್ಷದಲ್ಲಿ ಇನ್ನಷ್ಟೇ ಹುಟ್ಟಬೇಕಿದೆ. ದೇಶದ ರಾಜಕಾರಣ- ಅಧಿಕಾರ ಗ್ರಹಣ ನೂರು ಕುಟುಂಬಗಳ ವಂಶಪಾರಂಪರ್ಯದ ಉರುಳಿನಲ್ಲಿ ಗಿರಕಿ ಹೊಡೆದಿರುವುದು ಕಟು ವಾಸ್ತವ. 

ಈ ಜಾಡ್ಯ ಒಂದು ರಾಜಕೀಯ ಪಕ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಬಹುದು. ಮತ್ತೊಂದು ಪಕ್ಷದಲ್ಲಿ ತುಸು ಕಡಿಮೆ ಇದ್ದೀತು. ಎಡಪಕ್ಷಗಳು ಮಾತ್ರವೇ ಈ ವ್ಯಾಧಿಗೆ ಅಪವಾದ. ದಶಕಗಳ ಹಿಂದೆ ತೀವ್ರ ಚರ್ಚೆಯ ವಸ್ತುವಾಗಿದ್ದ ವಂಶಪಾರಂಪರ್ಯ ರಾಜಕಾರಣ ಕಾಲದ ಉರುಳಿನಲ್ಲಿ ಸವಕಲಾಗಿದೆ. ಆದರೆ, ಸೈದ್ಧಾಂತಿಕ ರಾಜಕಾರಣ ಮತ್ತು ಸ್ವಸ್ಥ ಜನತಂತ್ರಕ್ಕೆ ವಂಶಪಾರಂಪರ್ಯ ರಾಜಕಾರಣ ಸದಾ ನಿಷಿದ್ಧ. ಹಾಗೆ ನೋಡಿದರೆ ರಾಹುಲ್‌ಗೆ ಹೋಲಿಸಿದರೆ, ಕಾಂಗ್ರೆಸ್ಸಿನ ಒಳ-ಹೊರಗೆ ಪ್ರಿಯಾಂಕಾ ಹೆಚ್ಚು ಜನಪ್ರಿಯರು. ಅಜ್ಜಿ ಇಂದಿರಾ ಗಾಂಧಿ ಅವರನ್ನು ಹೋಲುತ್ತಾರೆ ಮತ್ತು ಅವರಂತೆಯೇ ಆಕ್ರಮಣಕಾರಿ ವರ್ಚಸ್ವಿ ವ್ಯಕ್ತಿತ್ವ ಎಂಬುದು ಕಾಂಗ್ರೆಸ್ಸಿಗರ ನಂಬಿಕೆ. ಆದರೆ ವಂಶ ಪಾರಂಪರ್ಯದ ರಾಜಕಾರಣದಲ್ಲೂ ಗಂಡಾಳಿಕೆಯದೇ ಅಬ್ಬರ. 

ಕುಟುಂಬದ ಮಗಳು ಸಮರ್ಥಳಿದ್ದರೂ ಮಗನಿಗೇ ಮೊದಲ ಮಣೆ. ಉಳಿದೆಲ್ಲ ವಿಕೃತಿಗಳು ಮತ್ತು ಅರೆಕೊರೆಗಳನ್ನು ಅರೆ ಗಳಿಗೆ ಬದಿಗೊತ್ತಿ ನೋಡಿದ್ದೇ ಆದರೆ, ಪ್ರಿಯಾಂಕಾ ಆಗಮನದಿಂದ ಮಗಳೊಬ್ಬಳು ದೇಶ ರಾಜಕಾರಣದ ಮುನ್ನೆಲೆಗೆ ಬರುತ್ತಿದ್ದಾಳೆನ್ನು
ವುದು ಸ್ವಾಗತಾರ್ಹ ಬೆಳವಣಿಗೆ.

ಪ್ರಿಯಾಂಕಾ ಹೆಗಲೇರಿರುವ ಹೊಸ ಹೊಣೆ ಬೆಳ್ಳಿಯ ತಟ್ಟೆಯಲ್ಲಿಟ್ಟು ಕೊಟ್ಟ ಅಧಿಕಾರದ ಹುದ್ದೆಯೇನೂ ಅಲ್ಲ ಎಂಬ ವಾದದಲ್ಲಿ ಹುರುಳಿದೆ. ಇಂದಿರಾ ಗಾಂಧಿ ತೀರಿಕೊಂಡು 35 ವರ್ಷಗಳು ಉರುಳಿವೆ. ಉತ್ತರಪ್ರದೇಶವು ಕಾಂಗ್ರೆಸ್ ಪಕ್ಷದ ಕೈ ಬಿಟ್ಟು 30 ವರ್ಷಗಳೇ ಸಂದಿವೆ. ಪಕ್ಷದ ಸಂಘಟನೆ ಇಲ್ಲಿ ನೆಲ ಕಚ್ಚಿದೆ. ರಾಹುಲ್ ಪ್ರತಿನಿಧಿಸುತ್ತಿರುವ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಅವರ ರಾಯಬರೇಲಿ ಉಳಿಸಿಕೊಳ್ಳಲು ಕೂಡ ಸಮಾಜವಾದಿ ಪಕ್ಷದ ಮರ್ಜಿ ಕಾಯಬೇಕಿರುವ ದುಃಸ್ಥಿತಿ. 2009ರಲ್ಲಿ 21 ಲೋಕಸಭಾ ಸೀಟುಗಳನ್ನು ಗೆದ್ದ ಯಶಸ್ಸನ್ನು ಮಾಧ್ಯಮಗಳು ರಾಹುಲ್ ತಲೆಗೆ ಕಟ್ಟಿದ್ದವು. ಅಂದಿನದು ಚತುಷ್ಕೋನ ಸ್ಪರ್ಧೆ. ಬಿಜೆಪಿ ದುರ್ಬಲವಾಗಿತ್ತು. ಬಿಎಸ್‌ಪಿ ಮತ್ತು ಎಸ್‌ಪಿ ನಡುವೆ ಮೈತ್ರಿ ಇರಲಿಲ್ಲ. 

ಯುಪಿಎ ಸರ್ಕಾರದ ನರೇಗಾ ಯೋಜನೆ ಹಳ್ಳಿಗಾಡಿನಲ್ಲಿ ಒಲವು ಗಳಿಸಿತ್ತು. ಪೂರ್ವ ಉತ್ತರಪ್ರದೇಶದ ರಾಜಕಾರಣ ಪ್ರಿಯಾಂಕಾ ಪಾಲಿಗೆ ಸುಲಭದ ತುತ್ತಲ್ಲ. ಉಗ್ರ ಹಿಂದುತ್ವ ಮತ್ತು ಜಾತಿ ಸಮೀಕರಣವನ್ನು ಹಿಗ್ಗಿಸಿರುವ ದುರ್ಗಮ ಪ್ರಯೋಗ ಶಾಲೆಯಿದು. ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಮರಳಿರುವುದು ಹೌದು. ಆದರೆ ಎದ್ದು ನಿಂತು ಎದೆ ಸೆಟೆಸಲು, ಸವೆಸಬೇಕಿರುವ ಹಾದಿ ಇನ್ನೂ ಬಹುದೂರವಿದೆ. ಪ್ರಿಯಾಂಕಾ ಕೈಯಲ್ಲಿ ಮಂತ್ರದಂಡವೇನೂ ಇಲ್ಲ. 

ಆಕೆಯಿಂದ ಚಮತ್ಕಾರದ ನಿರೀಕ್ಷೆ ಸಾಧುವಲ್ಲ. ಆಕೆ ಸದ್ಯಕ್ಕೆ ವಿಫಲರಾದರೂ, ಕಲಿಕೆಯ ಹಂತವೆಂಬ ರಿಯಾಯಿತಿ ದೊರೆತೀತು. ಆದರೆ ಆಕೆಯ ದೂರ ರಾಜಕೀಯ ಭವಿಷ್ಯದ ಅಜಮಾಸು ರೂಪುರೇಖೆಗಳು ಅಸ್ಪಷ್ಟವಾಗಿಯಾದರೂ ಮೂಡಲಿವೆ. ಚುರುಕು ಮಾತುಗಾರಿಕೆ, ವರ್ಚಸ್ವಿ ವ್ಯಕ್ತಿತ್ವ, ಮಾತಿನ ಏಟಿಗೆ ಎದುರೇಟು ನೀಡುವ ವರಸೆ, ನಡೆನಿಲುವು-ದಿರಿಸು ಹಾಗೂ ರಾಜಕೀಯ ಪ್ರಜ್ಞೆ, ಇಂದಿನ ವ್ಯಕ್ತಿಪೂಜೆ ಕೇಂದ್ರಿತ ರಾಜಕಾರಣದ ಹೆಗ್ಗುರುತುಗಳು. 

ತಮ್ಮ ಅಜ್ಜಿ ಇಂದಿರಾ ಗಾಂಧಿಯಿಂದ ಇವೆಲ್ಲವನ್ನೂ ಬಳುವಳಿ ಪಡೆದವರಂತೆ ತೋರಿಬರುತ್ತಾರೆ ಪ್ರಿಯಾಂಕಾ. ರುಜುವಾತು ಮಾಡಬೇಕಿದ್ದರೆ ಮುಂಬರುವ ದಿನಗಳಲ್ಲಿ ಆಕೆ ಅಗ್ನಿಪರೀಕ್ಷೆಯನ್ನು ಹಾಯಬೇಕಿದೆ. ರಾಹುಲ್ ಕುರಿತು ಸಿನಿಕತನ ತೋರಿರುವ ಒಂದು ವರ್ಗದ ಮತದಾರರನ್ನು ಪ್ರಿಯಾಂಕಾ ಸೆಳೆದಾರು ಎಂಬ ಪಕ್ಷದ ನಿರೀಕ್ಷೆಯ ಎತ್ತರಕ್ಕೆ ಏರುವರೇ? ಕಾಂಗ್ರೆಸ್‌ನ ಈ ‘ಬ್ರಹ್ಮಾಸ್ತ್ರ’ ಉತ್ತರಪ್ರದೇಶದ ಚುನಾವಣಾ ಕಣದಲ್ಲಿ ಬಿಜೆಪಿಯ ಕೈಗೆ ಒಪ್ಪಿಸಿದ ಅನುಕೂಲಕರ ಅಸ್ತ್ರವಾದೀತೇ? ಕಾಲವೇ ಹೇಳಬೇಕು.

ಬರಹ ಇಷ್ಟವಾಯಿತೆ?

 • 26

  Happy
 • 4

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !