ಚೆನ್ನಮ್ಮ, ಟಿಪ್ಪು ಮೊದಲ ಸ್ವಾತಂತ್ರ್ಯ ಹೋರಾಟಗಾರರು: ಸಿದ್ದರಾಮಯ್ಯ

7
‘ಅವಕಾಶ ವಂಚಿತರು ಒಂದುಗೂಡಿದರೆ ಅದು ಜಾತಿ ಸಂಘಟನೆ ಅಲ್ಲ’

ಚೆನ್ನಮ್ಮ, ಟಿಪ್ಪು ಮೊದಲ ಸ್ವಾತಂತ್ರ್ಯ ಹೋರಾಟಗಾರರು: ಸಿದ್ದರಾಮಯ್ಯ

Published:
Updated:
Prajavani

ಬಾಗಲಕೋಟೆ: ‘ಮಹಾನ್‌ ವ್ಯಕ್ತಿಗಳು ಸಮಾಜದ ಆಸ್ತಿ. ಅವರು ಯಾವುದೇ ಜಾತಿ–ಜನಾಂಗಕ್ಕೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸರ್ಕಾರದಿಂದಲೇ ಅವರ ಜನ್ಮಜಯಂತಿ ಆಚರಣೆಗೆ ಮುಂದಾಗಿದ್ದೆನು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಹುನಗುಂದದಲ್ಲಿ ಶುಕ್ರವಾರ ನಡೆದ ಪಂಚಮಸಾಲಿ ಸಮಾಜದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ’1857ರ ಸಿಪಾಯಿ ದಂಗೆಯೇ ದೇಶದಲ್ಲಿ ಬ್ರಿಟಿಷರ ವಿರುದ್ಧದ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಇತಿಹಾಸ ಹೇಳುತ್ತದೆ. ಅದಕ್ಕೂ ಮುನ್ನ 1799ರಲ್ಲಿ ಟಿಪ್ಪು ಸುಲ್ತಾನ್ ಹಾಗೂ 1834ರಲ್ಲಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅವರ ತ್ಯಾಗ–ಬಲಿದಾನವನ್ನು ನೆನಪಿಸಿಕೊಳ್ಳುವುದು ಆದ್ಯ ಕರ್ತವ್ಯ’ ಎಂದು ಸ್ಮರಿಸಿದರು.

‘ರಾಣಿಚೆನ್ನಮ್ಮ ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲು ಅಲ್ಲ. ಇಡೀ ದೇಶಕ್ಕೆ ತಾಯಿ. ಸಂಗೊಳ್ಳಿ ರಾಯಣ್ಣನಂತಹ ನೆಚ್ಚಿನ ಭಂಟನ ನೆರವಿನಿಂದ ಬ್ರಿಟಿಷರ ವಿರುದ್ಧ ಹೋರಾಟ ಸಂಘಟಿಸಿದ್ದ ಚೆನ್ನಮ್ಮನಿಗೆ ನಮ್ಮವರ ಕುತಂತ್ರವೇ ಮುಳುವಾಯಿತು. ಚೆನ್ನಮ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನಾನು ಆಚರಣೆಗೆ ಮುಂದಾಗಿದ್ದು ರಾಜಕೀಯ ಉದ್ದೇಶಕ್ಕಲ್ಲ. ಬದಲಿಗೆ ಅದರಿಂದ ಸರ್ಕಾರ ತನ್ನನ್ನು ತಾನೇ ಗೌರವಿಸಿಕೊಂಡಂತಾಗಿದೆ’ ಎಂದರು.

‘ಅವಕಾಶ ವಂಚಿತರು ಸಂಘಟನೆ ಮಾಡಿದರೆ ಅದು ಜಾತಿ ಸಂಘಟನೆ ಆಗುವುದಿಲ್ಲ. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಿದರೆ ಜಾತಿ–ಜಾತಿಗಳ ನಡುವೆ ಸಮಾನತೆ ತಾನಾಗಿಯೇ ಮೂಡುತ್ತದೆ ಎಂಬ ಬಸವಾದಿ ಶರಣರ ಸಂದೇಶದಲ್ಲಿ ನಾನು ನಂಬಿಕೆ ಇಟ್ಟಿರುವುದಾಗಿ ಹೇಳಿದ ಸಿದ್ದರಾಮಯ್ಯ, ಇವನಾರವ, ಇವನಾರವ ಹಾಗೂ ಇವ ನಮ್ಮವ, ಇವ ನಮ್ಮವ ಎನ್ನುವ ಎರಡು ವರ್ಗ ನಮ್ಮಲ್ಲಿದೆ’ ಎಂದರು.

ಸಿದ್ದರಾಮಯ್ಯಗೆ ಸನ್ಮಾನ:

ಪಂಚಮಸಾಲಿ ಸಮಾಜದಿಂದ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ನೇಗಿಲು ನೀಡಿ ಬೃಹತ್ ಗಾತ್ರದ ಹಾರ ಹಾಕಿ ಸನ್ಮಾನಿಸಲಾಯಿತು. ರಾಣಿ ಚೆನ್ನಮ್ಮನ ರಾಷ್ಟ್ರೀಯ ಸ್ಮಾರಕ ನಿರ್ಮಿಸಲು, ಇಂಗ್ಲೆಂಡ್‌ನ ವಸ್ತು ಸಂಗ್ರಹಾಲಯದಲ್ಲಿರುವ ರಾಣಿಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಖಡ್ಗಗಳನ್ನು ದೇಶಕ್ಕೆ ಮರಳಿ ತರಿಸಲು ಕ್ರಮ ಕೈಗೊಳ್ಳಲು ಮತ್ತು ಚೆನ್ನಮ್ಮನ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಲಾಯಿತು.

ಸಮಾರಂಭದಲ್ಲಿ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಉದ್ಯಮಿ ಕಮಲಾ ನಿರಾಣಿ, ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿಣಿ ಪಾಟೀಲ, ಹುಬ್ಬಳ್ಳಿ ಪಂಚಮಸಾಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಪಾಲ್ಗೊಂಡಿದ್ದರು.

ಭರ್ಜರಿ ಮೆರವಣಿಗೆ:

ರಾಣಿಚೆನ್ನಮ್ಮನ 240ನೇ ಜಯಂತ್ಯೋತ್ಸವ ಹಾಗೂ 195ನೇ ವಿಜಯೋತ್ಸವದ ಅಂಗವಾಗಿ ಮುಂಜಾನೆ ಬಸವಮಂಟಪದಿಂದ ಸಮಾವೇಶ ಸ್ಥಳಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ರಥದಲ್ಲಿ ಕೂರಿಸಿಕೊಂಡು, ಡೊಳ್ಳು–ಬಾಜಾ ಭಜಂತ್ರಿಯೊಂದಿಗೆ ಹೊರಟ ಮೆರವಣಿಗೆಯಲ್ಲಿ ರಾಣಿ ಚೆನ್ನಮ್ಮನ ಪುತ್ಥಳಿ ಹೊತ್ತ ಆನೆ ಕೂಡ ಗಮನ ಸೆಳೆಯಿತು. ಕುಂಭ ಹೊತ್ತ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಹೆಜ್ಜೆಹಾಕಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ಗಂಟೆಗಟ್ಟಲೇ ಸಂಚಾರ ದಟ್ಟಣೆಯಾಗಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕಿ.ಮೀಗಟ್ಟಲೇ ಸಾಲುಗಟ್ಟಿದವು. ರಸ್ತೆ ಪಕ್ಕದ ಕಟ್ಟಡಗಳು, ಕಾಂಪೌಂಡ್‌ಗಳ ಮೇಲೆ ನಿಂತ ಸಾರ್ವಜನಿಕರು ಮೆರವಣಿಗೆ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !