ನಕಲಿ ನೋಟು ಕೊಟ್ಟು ಕುರಿ ಒಯ್ದರು!

7
ರಸ್ತೆ ಬದಿ ಕುರಿ ಮೇಯಿಸುತ್ತಿದ್ದ ವೃದ್ದೆಗೆ ಇಬ್ಬರು ಯುವಕರಿಂದ ವಂಚನೆ, ಮೂರು ದಿನಗಳ ಬಳಿಕ ಬಯಲಿಗೆ ಬಂದ ಪ್ರಕರಣ

ನಕಲಿ ನೋಟು ಕೊಟ್ಟು ಕುರಿ ಒಯ್ದರು!

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನಹಳ್ಳಿಯ ಕದಿರಮ್ಮ ಹರಿಜನ ಎಂಬ ವೃದ್ದೆಗೆ ಇಬ್ಬರು ವಂಚಕರು ಇತ್ತೀಚೆಗೆ ₹2,000 ಮುಖಬೆಲೆಯ ಐದು ನಕಲಿ ನೋಟುಗಳನ್ನು ಕೊಟ್ಟು, ಕುರಿಯೊಂದನ್ನು ತೆಗೆದುಕೊಂಡು ಹೋಗಿ ವಂಚನೆ ಮಾಡಿದ್ದಾರೆ.

ಕದಿರಮ್ಮ ಅವರು ಫೆ.3 ರಂದು ಮಧ್ಯಾಹ್ನ 3.30ರ ಸುಮಾರಿಗೆ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿ ಮುನಿಯಪ್ಪ, ವೆಂಕಟಮ್ಮ ಎಂಬುವರೊಂದಿಗೆ ತಮ್ಮ ಆರು ಕುರಿ ಮೇಯಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಕದಿರಮ್ಮ ಅವರ ಬಳಿ ಬಂದ ಇಬ್ಬರು ಯುವಕರ ಪೈಕಿ ಒಬ್ಬಾತ ತೆಲುಗಿನಲ್ಲಿ ಕುರಿಯೊಂದನ್ನು ಮಾರಾಟ ಮಾಡುವಂತೆ ದುಂಬಾಲು ಬಿದ್ದಿದ್ದಾನೆ.

ಆಗ ಕದಿರಮ್ಮ ಮಕ್ಕಳನ್ನು ಕೇಳದೆ ತಾನು ಕುರಿ ಮಾರುವುದಿಲ್ಲ ಎಂದು ನಿರಾಕರಿಸಿದ್ದಾರೆ. ಆಗ ಸ್ವಲ್ಪ ದೂರ ಹೋದಂತೆ ಮಾಡಿ ವಾಪಸ್‌ ಬಂದ ಯುವಕರು ₹2,000 ನೋಟುಗಳ ಕಟ್ಟೊಂದನ್ನು ತೆಗೆದು ಐದು ನೋಟುಗಳನ್ನು ಕದಿರಮ್ಮ ಅವರಿಗೆ ನೀಡಿ ಈಗಲಾದರೂ ಕುರಿ ನೀಡುವಂತೆ ಕೇಳಿಕೊಂಡಿದ್ದಾರೆ. ಉತ್ತಮ ಬೆಲೆ ಸಿಕ್ಕಿದೆ ಎಂಬ ಆಸೆಗೆ ಕದಿರಮ್ಮ ಆ ಯುವಕರಿಗೆ ಗಂಡು ಕುರಿಯೊಂದನ್ನು ಕೊಟ್ಟು ಕಳುಹಿಸಿದ್ದಾರೆ.

ಯುವಕರು ನೀಡಿದ ₹2,000 ಮುಖಬೆಲೆಯ ಐದು ನೋಟುಗಳನ್ನು ತನ್ನ ಬಳಿ ಭದ್ರವಾಗಿಟ್ಟುಕೊಂಡಿದ್ದ ಕದಿರಮ್ಮ, ಆ ಹಣ ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಆಪತ್ತಿನ ಕಾಲಕ್ಕೆ ಅನುಕೂಲವಾಗುತ್ತದೆ ಎಂದು ಕುರಿ ಮಾರಿದ ವಿಚಾರ ಮಕ್ಕಳಿಗೂ ತಿಳಿಸಿರಲಿಲ್ಲ.

ಆದರೆ ತನ್ನ ಸಹೋದರನಿಗೆ ಆರೋಗ್ಯ ಸರಿ ಇಲ್ಲ ಎಂಬುದು ತಿಳಿದು ಬುಧವಾರ ಅವರು ಊರಿಗೆ ಹೋಗಿ ಬರುವ ಖರ್ಚಿಗಾಗಿ ತಮ್ಮ ಬಳಿ ಇದ್ದ ನೋಟುಗಳ ಪೈಕಿ ಒಂದನ್ನು ತೆಗೆದುಕೊಂಡು ಪಕ್ಕದ ಮನೆಯವರ ಬಳಿ ಚಿಲ್ಲರೆಗಾಗಿ ವಿಚಾರಿಸಲು ಹೋದಾಗ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ.

ವಂಚಕರು ಕದಿರಮ್ಮ ಅವರಿಗೆ ಮಾರುಕಟ್ಟೆಯಲ್ಲಿ ದೊರೆಯುವ ಮಕ್ಕಳ ಆಟಕ್ಕಾಗಿ ಬಳಕೆ ಮಾಡುವ ನೋಟುಗಳನ್ನು ನೀಡಿದ್ದಾರೆ. ಆ ನೋಟುಗಳ ಮೇಲೆ ‘ಚಿಲ್ಡ್ರನ್‌ ಬ್ಯಾಂಕ್ ಆಫ್‌ ಇಂಡಿಯಾ’ ಎಂದು ಮುದ್ರಿಸಲಾಗಿದ್ದು, ನೋಟಿನ ಸಂಖ್ಯೆಗಳ ಜಾಗದಲ್ಲಿ ಸೊನ್ನೆಗಳಿವೆ. ಮಕ್ಕಳಿಗೂ ತಿಳಿಸದೆ ದುಡ್ಡಿನಾಸೆಗೆ ವಂಚಕರಿಗೆ ಕುರಿ ಕೊಟ್ಟು ಕಳುಹಿಸಿದ ಕದಿರಮ್ಮ ಇದೀಗ ಗೋಳಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !