ಡಿಸಿ ಎದುರು ನೋವು ತೋಡಿಕೊಂಡರು!

7
ಖರೀದಿ ಕೇಂದ್ರಗಳಲ್ಲಿ ಗ್ರೇಡರ್‌ಗಳ ಷರತ್ತಿಗೆ ಬೆಚ್ಚಿಬಿದ್ದ ರೈತರು

ಡಿಸಿ ಎದುರು ನೋವು ತೋಡಿಕೊಂಡರು!

Published:
Updated:
Prajavani

ಬಾಗಲಕೋಟೆ: ತೊಗರಿ ಖರೀದಿ ವೇಳೆ ಕೇಂದ್ರದ ಸಿಬ್ಬಂದಿ ವಿಧಿಸಿದ ಷರತ್ತುಗಳಿಂದ ಕೆರಳಿದ ರೈತರು ಗುರುವಾರ ಸಂಜೆ ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಬಂದು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಎದುರು ತಮ್ಮ ಅಳಲು ತೋಡಿಕೊಂಡರು.

ಮಾರುಕಟ್ಟೆಗೆ ಒಯ್ದಿದ್ದ ತೊಗರಿಯನ್ನು ರೈತರು ಟ್ರ್ಯಾಕ್ಟರ್ ಸಮೇತ ಜಿಲ್ಲಾಡಳಿತ ಭವನಕ್ಕೆ ತಂದಿದ್ದರು.

ಸರ್ಕಾರದ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾಗಿರುವ ಸಂಸ್ಥೆಯ ಗ್ರೇಡರ್‌ಗಳು ಇಲ್ಲಿನ ಎಪಿಎಂಸಿಯಲ್ಲಿ ಗುರುವಾರ ಇಡೀ ದಿನ ಕೇವಲ 9 ಮಂದಿ ರೈತರಿಂದ ಮಾತ್ರ ತೊಗರಿ ಖರೀದಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಊಟಕ್ಕೆ ತೆರಳಿದ ಗ್ರೇಡರ್‌ಗಳು ಸಂಜೆ 4.30 ಆದರೂ ವಾಪಸ್ ಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ಎದುರು ತಮ್ಮ ಗೋಳು ತೋಡಿಕೊಂಡರು.

ನಂತರ ಗ್ರೇಡರ್‌ಗಳನ್ನು ಕರೆದು ಅವರಿಂದ ವಿವರಣೆ ಪಡೆದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ‘ನಿಮಗಿರುವ ಚೌಕಟ್ಟಿನಲ್ಲಿ ತೊಗರಿ ಖರೀದಿಸಿ ಆದರೆ ಮಾನವೀಯತೆ ಮರೆಯಬೇಡಿ. ಮಳೆಯಾಗದ ಕಾರಣ ಗುಣಮಟ್ಟ ಒಂದಷ್ಟು ಕಡಿಮೆಯಾಗಿದೆ. ನಿಯಮಾವಳಿಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದರೆ ರೈತರು ನೆಮ್ಮದಿಯಿಂದ ಬದುಕಲು ನೆರವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಉನ್ನತ ಅಧಿಕಾರಿಗಳಿಗಿಂತ ಹೆಚ್ಚಿನ ಜವಾಬ್ದಾರಿ ಗ್ರೇಡರ್‌ ಮೇಲಿದೆ. ನೀವು ರೈತರು ತಂದ ಕಾಳು ತಿರಸ್ಕರಿಸಿದರೆ ಅವರ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ. ಬೇರೆ ಊರಿನಿಂದ ಟ್ರಾಕ್ಟರ್‌ ಬಾಡಿಗೆ ಮಾಡಿಕೊಂಡು ಬಂದು ಬೆಳಿಗ್ಗೆಯಿಂದ ಬಿಸಿಲಿನಲ್ಲಿ ನಿಂತಿರುತ್ತಾರೆ. ಕಾಳು ವಾಪಸ್ ಒಯ್ದು ಮತ್ತೆ ತರಬೇಕಾದರೆ ಅವರಿಗಾಗುವ ಕಷ್ಟ ಯೋಚಿಸಿ’ ಎಂದು ಪ್ರಶ್ನಿಸಿದರು.

‘ಶುಕ್ರವಾರದಿಂದ ಬೆಳಿಗ್ಗೆ 9 ರಿಂದ ಖರೀದಿ ಪ್ರಕ್ರಿಯೆ ಆರಂಭಿಸಿ ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆ ಕೇಂದ್ರದಲ್ಲಿಯೇ ಮಾಡುತ್ತೇನೆ’ ಎಂದರು.

ಜಿಲ್ಲಾಡಳಿತ ಭವನಕ್ಕೆ ಅಹವಾಲು ಹೊತ್ತು ತಾಲ್ಲೂಕಿನ ಬೇವೂರು, ಹಳ್ಳೂರ ಗ್ರಾಮಸ್ಥರು ಬಂದಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !