ಬಿಸಿಯೂಟ ಸೇವನೆ: 23 ಬಾಲಕಿಯರು ಅಸ್ವಸ್ಥ

ಗುರುವಾರ , ಮಾರ್ಚ್ 21, 2019
24 °C
ಬೇವೂರು: ಅಡುಗೆಗೆ ಹುಳು ಮಿಶ್ರಿತ ಧಾನ್ಯ ಬಳಕೆ ಗ್ರಾಮಸ್ಥರ ಆರೋಪ

ಬಿಸಿಯೂಟ ಸೇವನೆ: 23 ಬಾಲಕಿಯರು ಅಸ್ವಸ್ಥ

Published:
Updated:
Prajavani

ಬೆನಕಟ್ಟಿ (ಬಾಗಲಕೋಟೆ): ಸಮೀಪದ ಬೇವೂರಿನ ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 23 ಕ್ಕೂ ಬಾಲಕಿಯರು ಅಸ್ವಸ್ಥಗೊಂಡಿದ್ದಾರೆ.

ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿದ ಕೆಲ ಸಮಯದ ನಂತರ ಮೂವರು ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡರು. ನಂತರ ಇನ್ನಷ್ಟು ಮಕ್ಕಳು ಗಾಬರಿಗೊಂಡು ಹೊಟ್ಟೆ ನೋವಿನಿಂದ ಬಳಲಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಶಿಕ್ಷಕರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಅವರಲ್ಲಿ 20 ಮಕ್ಕಳನ್ನು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. 

ಜನರ ಆಕ್ರೋಶ: ಮಕ್ಕಳು ಅಸ್ವಸ್ಥರಾದ ಸುದ್ದಿ ತಿಳಿದು ಶಾಲೆಯತ್ತ ದೌಡಾಯಿಸಿದ ಪಾಲಕರು, ಹುಳು ಮಿಶ್ರಿತ ಧಾನ್ಯ ಬಳಸಿ ಅಡುಗೆ ಮಾಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದರು. ಆಹಾರ ಪದಾರ್ಥಗಳ ಕಳಪೆ ಗುಣಮಟ್ಟದ ಬಗ್ಗೆ  ಹಲವು ಬಾರಿ ಶಿಕ್ಷಕರು ಹಾಗೂ ಅಡುಗೆ ತಯಾರಕರ ಗಮನಕ್ಕೆ ತಂದರೂ ನಿರ್ಲಕ್ಷ ತೋರುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಶಿಕ್ಷಕರು ಹಾಗೂ ಅಡುಗೆ ಮೇಲ್ವಿಚಾರಕರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳ ಭೇಟಿ: ಮಕ್ಕಳ ಅಸ್ವಸ್ಥಗೊಂಡ ವಿಷಯ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಎ.ಎನ್.ದೇಸಾಯಿ, ಡಿಡಿಪಿಐ ಬಿ.ಎಚ್.ಗೋನಾಳ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎನ್.ಬಿ.ಗೊರವರ ಗ್ರಾಮಕ್ಕೆ ಬಂದು ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ಉಪವಿಭಾಗಾಧಿಕಾರಿ ಜಯಾ ಸ್ಥಳಕ್ಕೆ ಬಂದು ಧಾನ್ಯಗಳ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದರು.

ಮಕ್ಕಳ ಆರೋಗ್ಯ ವಿಚಾರಿಸಿದ ಚರಂತಿಮಠ
ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ 20 ಮಕ್ಕಳನ್ನು ದಾಖಲಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಶಾಸಕ ವೀರಣ್ಣ ಚರಂತಿಮಠ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

‘ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಅವರನ್ನು ಮತ್ತೊಮ್ಮೆ ತಪಾಸಣೆಗೊಳಪಡಿಸಿ ಬಳಿಕ ಮನೆಗೆ ಕಳುಹಿಸಲಾಗುತ್ತದೆ’ ಎಂದು ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !