’ಮಹಿ’ ತವರಿನಂಗಳದಲ್ಲಿ ಸೋಲಿನ ಕಹಿ: ವಿರಾಟ್ ಶತಕಕ್ಕೆ ಒಲಿಯದ ಜಯ

ಬುಧವಾರ, ಮಾರ್ಚ್ 27, 2019
26 °C
ಆಸ್ಟ್ರೇಲಿಯಾಕ್ಕೆ ಸರಣಿ ಜಯದ ಆಸೆ ಜೀವಂತ

’ಮಹಿ’ ತವರಿನಂಗಳದಲ್ಲಿ ಸೋಲಿನ ಕಹಿ: ವಿರಾಟ್ ಶತಕಕ್ಕೆ ಒಲಿಯದ ಜಯ

Published:
Updated:

ರಾಂಚಿ: ಆಸ್ಟ್ರೇಲಿಯಾದ ಆರಂಭಿಕ ಜೋಡಿ ಶುಕ್ರವಾರ ತಮ್ಮ ತಂಡದ ಗೆಲುವಿಗೆ ಕಾರಣವಾಯಿತು. ಆದರೆ, ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಎಡವಿದರು. ಇದರಿಂದಾಗಿ ಭಾರತ ತಂಡವು 32 ರನ್‌ಗಳಿಂದ ಸೋಲಿನ ಕಹಿ ಅನುಭವಿಸಿತು.

ಭಾರತದ ‘ಮಾಜಿ ನಾಯಕ’ ಮಹೇಂದ್ರಸಿಂಗ್ ಧೋನಿ ಅವರ ತವರೂರಿನ ಅಂಗಳದಲ್ಲಿ ಗೆಲುವಿನ ಹೊನಲು ಹರಿಸಲು ನಾಯಕ ವಿರಾಟ್ ಕೊಹ್ಲಿಯ ಶತಕದ ಕಾಣಿಕೆಯೂ ವ್ಯರ್ಥವಾಯಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಸರಣಿ ಜಯದ ಆಸೆಗೆ ಮರುಜೀವ ಲಭಿಸಿತು. ಪ್ರವಾಸಿ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋತಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆದ್ದು, ಇನ್ನೆರಡುಪಂದ್ಯಗಳಲ್ಲಿ ಜಯಿಸುವ ಆತ್ಮವಿಶ್ವಾಸ ತುಂಬಿಕೊಂಡಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತದ ನಿರ್ಧಾರವು ದುಬಾರಿಯಾಯಿತು. ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ (93; 99ಎಸೆತ, 10ಬೌಂಡರಿ, 3ಸಿಕ್ಸರ್) ಮತ್ತು ಉಸ್ಮಾನ್ ಖ್ವಾಜಾ (104; 113ಎ, 11ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್‌ಗೆ 193 ರನ್‌ಗಳನ್ನು ಸೇರಿಸಿ ದಾಖಲೆ ಬರೆದರು. ಈ ಗಟ್ಟಿ ಅಡಿಪಾಯದ ಮೇಲೆ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 313 ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸಿತು.

ಸರಣಿಯುದ್ದಕ್ಕೂ ಫಾರ್ಮ್‌ ಕೊರತೆ ಅನುಭವಿಸಿದ್ದ ಫಿಂಚ್ ಇಲ್ಲಿ ಮಿಂಚಿದರು. ಉಸ್ಮಾನ್  ಖ್ವಾಜಾ ಏಕದಿನ ಕ್ರಿಕೆಟ್‌ ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. 32ನೇ ಓವರ್‌ನಲ್ಲಿ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಅವರು ಫಿಂಚ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ, ಜೊತೆಯಾಟವನ್ನು ಮುರಿದರು. ಶಾನ್ ಮಾರ್ಷ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಅವರ ವಿಕೆಟ್‌ಗಳನ್ನೂ ಕಬಳಿಸಿದರು.

ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್  (47;31ಎಸೆತ, 3ಬೌಂಡರಿ, 3ಸಿಕ್ಸರ್)  ಮಿಂಚಿನ ವೇಗದ ಬ್ಯಾಟಿಂಗ್ ಮಾಡಿದರು. ಮಾರ್ಕಸ್ ಸ್ಟೊಯಿನಿಸ್ ಕೂಡ 31 ರನ್‌ಗಳ ಕಾಣಿಕೆ ನೀಡಿದರು.

ವಿರಾಟ್ ಮಿಂಚು: ಬ್ಯಾಟಿಂಗ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿಯೂ ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಲಯ ತಪ್ಪಿದರು. 

ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಸತತ ಮೂರನೇ ಪಂದ್ಯದಲ್ಲಿಯೂ  ಬೇಗನೆ ನಿರ್ಗಮಿಸಿದರು.  ನಾಲ್ಕನೇ ಓವರ್‌ನಲ್ಲಿ ಕೆಟ್ಟ ಹೊಡೆತವಾಡಿ ವಿಕೆಟ್ ಕೊಟ್ಟರು. ಐದನೇ ಓವರ್‌ನಲ್ಲಿ ರೋಹಿತ್  ಚೆಂಡಿನ ಚಲನೆಯನ್ನು ಅರಿಯುವಲ್ಲಿ ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.  ಇನ್ನೊಂದು ಬದಿಯಲ್ಲಿದ್ದ ವಿರಾಟ್ ಆಟಕ್ಕೆ ಕುದುರಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ, ಅಂಬಟಿ ರಾಯುಡು ಕೂಡ ಪ್ಯಾಟ್ ಕಮಿನ್ಸ್‌ ವೇಗದ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು.  ಆಗ ಕೊಹ್ಲಿ ಜೊತೆಗೂಡಿದ ‘ಸ್ಥಳೀಯ ಕಣ್ಮಣಿ’ ಧೋನಿ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು.

ಒಂದೆಡೆ ಕೊಹ್ಲಿ ವೇಗವಾಗಿ ರನ್‌ ಗಳಿಸುತ್ತಿದ್ದರೆ, ಧೋನಿ ತಾಳ್ಮೆಯಿಂದ ಆಡುತ್ತಿದ್ದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 59 ರನ್‌ ಸೇರಿಸಿದರು. ಆದರೆ 20ನೇ ಓವರ್‌ನಲ್ಲಿ ಆ್ಯಡಂ ಜಂಪಾ ಹಾಕಿದ ಸ್ಪಿನ್ ಎಸೆತದಲ್ಲಿ ಧೋನಿ ಆಟ ಮುಗಿಯಿತು.  ತಮ್ಮ ತವರಿನ ಅಂಗಳದಲ್ಲಿ ಧೋನಿಗೆ ಇದು ಬಹುತೇಕ ಕೊನೆಯ ಪಂದ್ಯವಾಗಿದೆ.

ಅದರೆ, ಇನ್ನೊಂದೆಡೆ ವಿರಾಟ್ ಮಾತ್ರ ದಿಟ್ಟ ಆಟವಾಡಿದರು. ನಾಗಪುರ ಪಂದ್ಯದಲ್ಲಿಯೂ ಶತಕ ಬಾರಿಸಿದ್ದ ಅವರು ಇಲ್ಲಿಯೂ ಬೌಲರ್‌ಗಳ ಬೆವರಿಳಿಸಿದರು.

ಅವರಿಗೆ ಕೇದಾರ್ ಜಾಧವ್ (26; 39ಎ, 3ಬೌಂ) ಉತ್ತಮ ಜೊತೆ ನೀಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 88 ರನ್‌ ಸೇರಲು ಕಾರಣರಾದರು.  ವಿಜಯಶಂಕರ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲ ತೋರಿಸಿದರು. 30 ಎಸೆತಗಳಲ್ಲಿ 32 ರನ್ ಗಳಿಸಿದ ಅವರು  ವಿರಾಟ್ ಜೊತೆಗೆ 5 ವಿಕೆಟ್‌ಗೆ 36 ರನ್‌ ಪೇರಿಸಿದರು. ಆದರೆ 38ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಕೂಡ ಜಂಪಾ ಅವರ ನಿಧಾನಗತಿಯ ಎಸೆತಕ್ಕೆ ಏಮಾರಿದರು. ಕ್ಲೀನ್‌ಬೌಲ್ಡ್ ಆದರು. ಆಗ ತಂಡದ ಗೆಲುವಿನ ಕನಸು ಬಹುತೇಕ ಕಮರಿತು. ನಂತರ ವಿಜಯಶಂಕರ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಅವರ  ಹೋರಾಟವು ಗೆಲುವಿನ ದಡ ಮುಟ್ಟಲು ಸಾಕಾಗಲಿಲ್ಲ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !