ಅಲ್ಪ ಓದಿನಿಂದ ಜೊಳ್ಳು ಸಾಹಿತ್ಯ: ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಬುಧವಾರ, ಮಾರ್ಚ್ 20, 2019
26 °C
‘ಪ್ರೊ.ಗಂಗಾಧರಮೂರ್ತಿ ಅವರ ಬದುಕು ಮತ್ತು ಬರಹ ಆತ್ಮೀಯ ಕಾರ್ಯಕ್ರಮ

ಅಲ್ಪ ಓದಿನಿಂದ ಜೊಳ್ಳು ಸಾಹಿತ್ಯ: ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಒಂದು ತಲೆಮಾರಿನ ಹಿಂದಿನವರು ಬಹಳ ಓದಿ ಕಡಿಮೆ ಬರೆಯುತ್ತಿದ್ದರು. ಹೀಗಾಗಿ ಅಂದು ಸತ್ವಶೀಲ ಸಾಹಿತ್ಯ ಹೆಚ್ಚು ಕಾಣುತ್ತಿತ್ತು. ಆದರೆ ಈಗೆಲ್ಲ ಕಡಿಮೆ ಓದಿ ಬಹಳ ಬರೆಯುವುದು ಆಗುತ್ತಿದೆ. ಅದರಿಂದ ಜೊಳ್ಳು ಸಾಹಿತ್ಯ ಬರುತ್ತಿದೆ’ ಎಂದು ನಿಡುಮಾಮಿಡಿ ಮಾನವ ಧರ್ಮ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಪ್ರೊ.ಗಂಗಾಧರಮೂರ್ತಿ ಅವರ ಬದುಕು ಮತ್ತು ಬರಹ ಆತ್ಮೀಯ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ವಿದ್ಯಾವಂತರು, ಪದವೀಧರರೆಲ್ಲ ಜ್ಞಾನಿಗಳು ಎಂದು ಹೇಳಲಾಗದು. ಪದವಿಗಾಗಿ ಪಡೆಯುವ ಶಿಕ್ಷಣಕ್ಕಿಂತ ಜ್ಞಾನಕ್ಕಾಗಿ ಪಡೆಯುವ ಶಿಕ್ಷಣ ಭಿನ್ನವಾಗಿರುತ್ತದೆ. ಪದವಿ, ವಿದ್ಯೆಗಿಂತ ಅದರ ಆಚೆಗಿನ ಜ್ಞಾನ ಸಂಪತ್ತು ಪಡೆಯುವುದು ನಿಜವಾದ ವಿದ್ಯಾರ್ಥಿಯ ಲಕ್ಷಣ. ನಾವು ಯಾವುದೋ ಒಂದಕ್ಕೆ ಸೀಮಿತವಾದಾಗ ನಮ್ಮ ವ್ಯಕ್ತಿತ್ವದ ಬೆಳವಣಿಗೆ ನಿಂತು ಹೋಗುತ್ತದೆ’ ಎಂದು ಹೇಳಿದರು.

‘ಸಮುದಾಯದ ಚಟುವಟಿಕೆಗಳಲ್ಲಿ, ಜನಪರ ಚಳವಳಿಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಂಗಾಧರ ಮೂರ್ತಿ ಅವರು ಒಬ್ಬರು. ನೈಜ, ಪ್ರಖರ ಚಿಂತಕರಲ್ಲಿ ಒಬ್ಬರಾದ ಅವರು ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಸಂಘಟನೆಗೆ ಹೆಚ್ಚು ಸಮಯ ವಿನಿಯೋಗಿಸಿದರು. ಶ್ರೇಷ್ಠ ಲೇಖಕರ ಕೃತಿಗಳನ್ನು ಅನುವಾದಿಸಿ ಪ್ರಕಟಪಡಿಸುವ ಕೆಲಸ ಮಾಡಿದರು. ಒಂದರ್ಥದಲ್ಲಿ ಅವರು ಇಂದಿಗೂ ವಿದ್ಯಾರ್ಥಿಯೇ ಆಗಿದ್ದಾರೆ’ ಎಂದು ತಿಳಿಸಿದರು.

‘ಗಂಗಾಧರಮೂರ್ತಿ ಅವರು ಬಹಳ ಓದಿದ್ದಾರೆ. ಆದರೆ ಕಡಿಮೆ ಬರೆದಿದ್ದಾರೆ. ಅವರು ಬರೆದಿದ್ದರೆ ನೂರಾರು ಪುಸ್ತಕಗಳನ್ನು ಬರೆಯಬಹುದಿತ್ತು. ಆದರೆ ಅವರು ಜ್ಞಾನದ ನಿಲುಗಡೆಗೆ ಒಳಗಾಗಲಿಲ್ಲ. ಎಲ್ಲ ಸೈದ್ದಾಂತಿಕ ಮಾರ್ಗಗಳಲ್ಲಿನ ಒಳಿತನ್ನು ಸ್ವೀಕಾರ ಮಾಡುತ್ತ, ಯಾವುದೇ ಒಂದು ಸಿದ್ಧಾಂತಕ್ಕೆ ಕಟ್ಟುಬೀಳದೆ ಜ್ಞಾನಮಾರ್ಗದಲ್ಲಿ ನಡೆದು ಸತ್ವಪೂರ್ಣ ಶಕ್ತಿ ಪಡೆದು ಮಾನವತೆಯ ದೃಷ್ಟಿ ಮೈಗೂಡಿಸಿಕೊಂಡರು’ ಎಂದರು.

‘ಗಂಗಾಧರಮೂರ್ತಿ ಅವರು ಜಾತಿ, ವೈಚಾರಿಕತೆ ಕಾರಣಕ್ಕೆ ನಿಂದನೆ, ಹಲ್ಲೆ, ಅಪಮಾನಕ್ಕೆ ಗುರಿಯಾಗಬೇಕಾಯಿತು. ಆದರೂ ಅವರು ದೃತಿಗೆಡಲಿಲ್ಲ. ಸಾಮಾಜಿಕ ಕಾಳಜಿಗೆ ಬದ್ಧತೆಯಿಂದ ಬದುಕಿದ ಲೇಖಕ, ಹೋರಾಟಗಾರ, ಚಿಂತಕ, ಬರಹಗಾರನ ಹಿಂದೆ ದೊಡ್ಡ ನೋವು, ತ್ಯಾಗ ಇರುತ್ತದೆ. ಅದು ಗಂಗಾಧರಮೂರ್ತಿ ಅವರ ಕುಟುಂಬದಲ್ಲೂ ಇದೆ’ ಎಂದು ಹೇಳಿದರು.

‘ವರ್ಗ ಸಂಘದ ಗುರಿಯನ್ನು ಹೊಂದದ ಜಾತಿ ಸಂಘರ್ಷ ಗುರಿ ಮುಟ್ಟಲು ಸಾಧ್ಯವಿಲ್ಲ. ಆದ್ದರಿಂದ ಜಾತಿ ಸಂಘರ್ಷವನ್ನು ಬಿಟ್ಟುಕೊಟ್ಟ ವರ್ಗ ಸಂಘರ್ಷ ಅದು ಅಪರಿಪೂರ್ಣವಾಗಿಯೇ ಉಳಿದುಕೊಳ್ಳುತ್ತದೆ. ಈ ದೇಶ ಜಾತಿ ರಹಿತವಾಗಲಾರದು. ನಾವು ಜಾತಿ ತಾರತಮ್ಯದ ವಾತಾವರಣ ಹೋಗುವಂತಹ ವಾತಾವರಣ ನಿರ್ಮಾಣವಾಗಬಹುದೇ ವಿನಾ ಜಾತಿ ರಹಿತ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ‘ನಮ್ಮದು 4,635 ಜಾತಿಗಳನ್ನು ಹೊಂದಿರುವ ಬಹುತ್ವದ ಭಾರತ. ಅದನ್ನು ನಾವು ಕಾಪಾಡಿಕೊಳ್ಳಬೇಕಿದೆ. ಇವತ್ತು ದೇಶದಲ್ಲಿ ಒಂದೇ ಸಂಸ್ಕೃತಿ, ಆಹಾರ, ಉಡುಗೆಗೆ ಫರ್ಮಾನು ಹೊರಡಿಸುತ್ತಿರುವ ಈ ಹೊತ್ತಿನಲ್ಲಿ ನಾವು ಸಂವಿಧಾನ ರಕ್ಷಿಸಿ, ಓದಿ, ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕಾಗಿದೆ. ಆ ವಿಚಾರದಲ್ಲಿ ನಮಗೆ ಗಂಗಾಧರಮೂರ್ತಿ ಮಾದರಿಯಾಗುತ್ತಾರೆ’ ಎಂದು ಹೇಳಿದರು.

‘ದೇಶ ಎಂದರೆ ಅದು ಕೇವಲ ಭಾರತದ ಭೂಪಟ, ಕೇವಲ ಮಣ್ಣಲ್ಲ. ಅದು ಜನರ ಇತಿಹಾಸ. ಆ ಇತಿಹಾಸ ತಿಳಿದು ಕೊಟ್ಟಿರುವ ನ್ಯಾಯವೇ ಸಂವಿಧಾನ. ಈ ದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೆ ನಮಗೆ ನಮ್ಮ ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನದ ಬಗ್ಗೆ ನಮಗೆ ಹೆಮ್ಮೆ, ಗೌರವ ಇರಬೇಕು. ಅದರ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಗೌರಿಬಿದನೂರು ನ್ಯಾಷನಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣಮ್ಮ, ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ನಯಾಜ್ ಅಹಮದ್, ಆದಿಮ ಸಂಸ್ಕೃತಿ ಕೇಂದ್ರ ಅಧ್ಯಕ್ಷ ಮುನಿಸ್ವಾಮಿ, ಶಾಂತಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸಿ.ಎಂ.ಮುನಿಯಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !