ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಜೋರು ಗಾಳಿ, ಆಲಿಕಲ್ಲು ಸಹಿತ ಮಳೆಗೆ ವ್ಯಾಪಕ ಹಾನಿ

ಮಂಗಳವಾರ, ಏಪ್ರಿಲ್ 23, 2019
31 °C

ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಜೋರು ಗಾಳಿ, ಆಲಿಕಲ್ಲು ಸಹಿತ ಮಳೆಗೆ ವ್ಯಾಪಕ ಹಾನಿ

Published:
Updated:
Prajavani

ಬಾಗಲಕೋಟೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಸಂಜೆ ಕೆಲ ಹೊತ್ತು ಸುರಿದ ಆಲಿಕಲ್ಲು ಮಿಶ್ರಿತ ಮಳೆ ಹಾಗೂ ಜೋರುಗಾಳಿಗೆ ಹೆಚ್ಚಿನ ಹಾನಿಯುಂಟಾಗಿದೆ.

ಬಾಗಲಕೋಟೆ ನಗರ ಹಾಗೂ ನವನಗರದಲ್ಲಿ ಮಳೆ ಬೀಳದಿದ್ದರೂ ರಾತ್ರಿ ಬೀಸಿದ ಜೋರುಗಾಳಿ ದೂಳಿನ ಮೋಡ ನೆಲ–ಮುಗಿಲನ್ನು ಒಂದು ಮೂಡಿತ್ತು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿ ಬೀಸಿದ ಜೋರು ಗಾಳಿಯ ಆಟಾಟೋಪಕ್ಕೆ ಒಂದು ಗಂಟೆ ಕಾಲ ನಗರದ ನಿವಾಸಿಗಳು ತತ್ತರಿಸಿದರು.

ಮಳೆ–ಗಾಳಿಗೆ ಬೆಳೆ ಹಾನಿ

ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ, ಬೇವೂರು, ಮನ್ನಿಕಟ್ಟಿ, ಬೈರನಟ್ಟಿ ಭಾಗದಲ್ಲಿ ಮಳೆ–ಗಾಳಿಗೆ ಬಾಳೆ, ದಾಳಿಂಬೆ ತೋಟಗಳು ನೆಲಕಚ್ಚಿವೆ. ಹೊಲಗಳಲ್ಲಿದ್ದ ಕಡಲೆ ರಾಶಿ ಗಾಳಿಯ ರಭಸಕ್ಕೆ ಹಾರಿ ಹೋಗಿದೆ. ಹಲವೆಡೆ ವಿದ್ಯುತ್ ಕಂಬಗಳು ನೆಲ ಕಚ್ಚಿದ ಪರಿಣಾಮ ಗ್ರಾಮೀಣ ಭಾಗ ರಾತ್ರಿ ಕತ್ತಲಲ್ಲಿ ಮುಳುಗಿದ್ದು, ಸೋಮವಾರ ಮಧ್ಯಾಹ್ನದವರೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ. ಹಾಗಾಗಿ ಕುಡಿಯುವ ನೀರಿಗೂ ತೊಂದರೆ ಉಂಟಾಗಿತ್ತು.


ಬೆನಕಟ್ಟಿಯಲ್ಲಿ ಕಟ್ಟಡದ ತಗಡು ಹಾರಿ ಹೋಗಿದೆ

ಬೆನಕಟ್ಟಿಯ ಲಕ್ಷ್ಮಣ ಬೆಣ್ಣೂರ ಎಂಬುವವರಿಗೆ ಸೇರಿದ ಎರಡು ಎಕರೆ ತೋಟದಲ್ಲಿ ಫಲಭರಿತ ಬಾಳೆ ನೆಲ ಕಚ್ಚಿದೆ. ಭೀಮನಗೌಡ ಬಾಳಕ್ಕನವರ ಅವರ ಒಂದು ಎಕರೆ ತೋಟ ಕೂಡ ನಾಶವಾಗಿದೆ. ದುಂಡಪ್ಪ ಹಾಗೂ ಗಿರೀಶ ಯಡಹಳ್ಳಿ ಅವರಿಗೆ ಸೇರಿದ ದಾಳಿಂಬೆ ಗಿಡಗಳು ಹಾನಿಗೊಳಗಾಗಿವೆ. ಮಾವಿನ ಗಿಡಗಳಲ್ಲಿ ಹೂವು, ಹೀಚು ಉದುರಿಬಿದ್ದು ನಷ್ಟ ಉಂಟಾಗಿದೆ. ಗ್ರಾಮದ ಕೆಲವು ಮನೆ ಹಾಗೂ ಜಮೀನಿನ ಶೆಡ್‌ಗಳಲ್ಲಿನ ಪತ್ರಾಸು, ತಗಡು ಹಾರಿಹೋಗಿವೆ.

ನಗರದಲ್ಲೂ ಗುಡುಗು–ಮಿಂಚಿನ ಆರ್ಭಟ ಜೋರಾಗಿದ್ದರೂ ಮಳೆ ಹನಿಯಲಿಲ್ಲ. ಕೆಲ ಹೊತ್ತು ನವನಗರದಲ್ಲೂ ವಿದ್ಯುತ್ ವ್ಯತ್ಯಯವಾಗಿತ್ತು. ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಆಯುಕ್ತ ಗಣಪತಿ ಪಾಟೀಲ ತಿಳಿಸಿದ್ದಾರೆ.

* ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹಾನಿಗೀಡಾದ ಗ್ರಾಮಗಳಿಗೆ ಸೋಮವಾರ ಕಳುಹಿಸಿದ್ದೇನೆ. ಅವರಿಂದ ವರದಿ ಬಂದ ನಂತರ ನಿಖರ ಹಾನಿಯ ಪ್ರಮಾಣ ಗೊತ್ತಾಗಲಿದೆ.
–ಜಯಾ, ಬಾಗಲಕೋಟೆ ಉಪವಿಭಾಗಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !