₹3.39 ಲಕ್ಷ ಪಾವತಿಸಲು ವಿಮಾ ಕಂಪನಿಗೆ ಆದೇಶ

ಶುಕ್ರವಾರ, ಏಪ್ರಿಲ್ 19, 2019
27 °C
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ; ಕಾರು ಮಾಲೀಕನ ವಾದ ಭಾಗಶಃ ಪುರಸ್ಕಾರ

₹3.39 ಲಕ್ಷ ಪಾವತಿಸಲು ವಿಮಾ ಕಂಪನಿಗೆ ಆದೇಶ

Published:
Updated:

ಬಾಗಲಕೋಟೆ: ವಿಮಾ ಕಂಪನಿಯ ಸೇವೆಯಲ್ಲಿ ಆಗಿರುವ ನ್ಯೂನ್ಯತೆಯನ್ನು ಎತ್ತಿ ಹಿಡಿದಿರುವ ಇಲ್ಲಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ, ಅಪಘಾತದ ವೇಳೆ ಹಾನಿಗೀಡಾಗಿದ್ದ ತನ್ನ ಕಾರಿಗೆ ಮಾಲೀಕ ಕೇಳಿದ್ದ ಪರಿಹಾರ ಮೊತ್ತದಲ್ಲಿ ಭಾಗಶಃ ನೀಡುವಂತೆ ಆದೇಶಿಸಿದೆ.

‘ವಾಹನ ಅಪಘಾತಕ್ಕೀಡಾದ ತಕ್ಷಣ ನಮಗೆ ಮಾಹಿತಿ ನೀಡಿಲ್ಲ, ಪೊಲೀಸರು ನೀಡಿದ ವರದಿ ಹಾಗೂ ವಾಹನ ಮಾಲೀಕರ ಹೇಳಿಕೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ’ ಎಂಬ ಕಾರಣ ನೀಡಿ ಕಾರಿನ ದುರಸ್ತಿ ವೆಚ್ಚ ನೀಡಲು ಓರಿಯಂಟಲ್ ವಿಮಾ ಕಂಪನಿ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಗ್ರಾಹಕ ಮುಧೋಳದ ಮಲ್ಲಮ್ಮ ನಗರದ ಪ್ರದೀಪ ಶಿವಣ್ಣ ಹೂಗಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೆಟ್ಟಿಲು ಹತ್ತಿದ್ದರು.

ಪ್ರಕರಣದ ವಿವರ:

ಪ್ರದೀಪ ಹೂಗಾರ ಅವರ ಟಾಟಾ ಮಾಂಜಾ ಸೆಡಾನ್ ಕಾರು 2015ರ ಡಿಸೆಂಬರ್ 12ರಂದು ಚಿತ್ರದುರ್ಗ ಜಿಲ್ಲೆ ಎಮ್ಮೆಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕೀಡಾಗಿ ಹಾನಿಗೊಳಗಾಗಿತ್ತು. ಹುಬ್ಬಳ್ಳಿಯ ಮಾಣಿಕ್‌ಬಾಗ್ ಆಟೊಮೊಬೈಲ್ಸ್‌ಗೆ ಕಾರು ಒಯ್ದು ದುರಸ್ತಿಗೆ ಬಿಟ್ಟಿದ್ದರು. ಕಾರಿನ ವಿಮಾ ಅವಧಿ ಸಿಂಧುತ್ವದಲ್ಲಿದ್ದ ಕಾರಣ ಅಲ್ಲಿ ರಿಪೇರಿಗೆ ಆಗಲಿರುವ ಅಂದಾಜು ಮೊತ್ತವನ್ನು ಪಾವತಿಸಲು ಕೋರಿ ಕಂಪನಿಗೆ ಅರ್ಜಿ ಸಲ್ಲಿಸಿದ್ದರು.

‘ಅಪಘಾತದ ಬಗ್ಗೆ ಪ್ರದೀಪ ಐದು ದಿನ ತಡವಾಗಿ ಮಾಹಿತಿ ನೀಡಿದ್ದೀರಿ. ಜೊತೆಗೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿರುವ ವಿವರಗಳಿಗೂ ನೀವು (ಕಾರಿನ ಮಾಲೀಕ) ನೀಡಿರುವ ಹೇಳಿಕೆಗೂ ಹೊಂದಾಣಿಕೆ ಆಗುತ್ತಿಲ್ಲ’ ಎಂದು ಹೇಳಿ ಕಂಪನಿ ಅರ್ಜಿಯನ್ನು ತಿರಸ್ಕರಿಸಿತ್ತು. ಅಪಘಾತದಕ್ಕೀಡಾದ ವಾಹನ ಪರಿಶೀಲಿಸಲು ನೇಮಿಸಿದ್ದ ಸಮೀಕ್ಷಕ ಸೈಯದ್ ಇರ್ಶಾದ್ ಅಹಮದ್, ಹಾನಿಯ ಪ್ರಮಾಣ ₹3.39 ಲಕ್ಷ ಎಂದು ನಮೂದಿಸಿರುವುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.

ಪರಿಹಾರ ಕೊಡಿಸಿ:

ಕಾರಿಗೆ ಆಗಿರುವ ಹಾನಿಯ ಮೊತ್ತ ₹5.28 ಲಕ್ಷದ ಜೊತೆಗೆ ದುರಸ್ತಿಗಾಗಿ ನಿಲ್ಲಿಸಿದ್ದ ಅವಧಿಯಲ್ಲಿ ಪ್ರತಿ ದಿನಕ್ಕೆ ₹50 ಸೇರಿಸಿ ಕೊಡಿಸುವಂತೆ ಗ್ರಾಹಕರ ವೇದಿಕೆಯನ್ನು ಕೋರಿದ್ದ ಪ್ರವೀಣ, ತಮಗೆ ಆಗಿರುವ ಮಾನಸಿಕ ವ್ಯಥೆಗಾಗಿ ₹2 ಲಕ್ಷ ಹಾಗೂ ದೂರಿನ ಖರ್ಚು ₹25 ಸಾವಿರ ಪಾವತಿಸಲು ವಿಮಾ ಕಂಪನಿಗೆ ಆದೇಶಿಸಲು 2016ರ ಮೇ 7ರಂದು ನೀಡಿದ್ದ ದೂರಿನಲ್ಲಿ ಕೋರಿದ್ದರು.

ಅಧ್ಯಕ್ಷೆ ಕೆ.ಶಾರದಾ ಹಾಗೂ ಸದಸ್ಯೆ ಸುಮಂಗಲಾ ಸಿ.ಹದ್ಲಿ ಅವರನ್ನೊಳಗೊಂಡ ಜಿಲ್ಲಾ ಗ್ರಾಹಕರ ವೇದಿಕೆ, ಎರಡೂ ಕಡೆಯವರ ವಾದ–ವಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿ ಪ್ರದೀಪ ಅವರ ದೂರನ್ನು ಭಾಗಶಃ ಪುರಸ್ಕರಿಸಿದೆ. ಅದರಂತೆ ಸಮೀಕ್ಷಕ ನಿಗದಿಪಡಿಸಿದ್ದ ಕಾರಿನ ಹಾನಿ ಮೊತ್ತ ₹3.39 ಲಕ್ಷವನ್ನು 2017ರ ಜೂನ್ 5ರಿಂದ ಇಲ್ಲಿಯವರೆಗೆ ವಾರ್ಷಿಕ ಶೇ9 ರಂತೆ ಬಡ್ಡಿ ಸೇರಿಸಿ ಎರಡು ತಿಂಗಳ ಒಳಗಾಗಿ ಪಾವತಿಸುವಂತೆ ಹಾಗೂ ಗ್ರಾಹಕನಿಗೆ ಆಗಿರುವ ಮಾನಸಿಕ ವ್ಯಥೆಗೆ ₹5 ಸಾವಿರ ಹಾಗೂ ದೂರಿನ ಖರ್ಚು ₹2 ಸಾವಿರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !